ಜಿನೀವಾ, ಮೇ 19 : ಸೋಮವಾರ ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಮ್ಮೇಳನ ಆರಂಭವಾಗಿದ್ದು ಕೊರೊನಾ ಉಗಮದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಸೂಕ್ತ ತನಿಖೆಯಾಗಬೇಕೆಂದು ಅಮೆರಿಕ ಆಗ್ರಹಿಸಿತು. ಕೊರೋನಾ ಉಗಮದ ತನಿಖೆಗೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಒತ್ತಾಯಿಸಿದ್ದು, ತನಿಖೆ ಕುರಿತ ಪ್ರಸ್ತಾಪ ಚರ್ಚೆ ಯಾಗಲೇ ಬೇಕೆಂದು ಆಗ್ರಹಿಸಿ ಸುಮಾರು 100ಕ್ಕೂ ಹೆಚ್ಚು ರಾಷ್ಟ್ರಗಳು ಸಹಿ ಹಾಕಿದ್ದವು. ಯುರೋಪ್ ಒಕ್ಕೂಟವೂ ಇದಕ್ಕೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ತನಿಖಾ ಆಗ್ರಹಕ್ಕೆ ಇನ್ನಷ್ಟು ಬಲ ಬಂದಿತ್ತು. ಇದೀಗ ಜಗತ್ತಿನ ರಾಷ್ಟ್ರಗಳ ಆಗ್ರಹಕ್ಕೆ ಮಣಿದ ಡ್ರ್ಯಾಗನ್ ರಾಷ್ಟ್ರ ಚೀನಾ ಮನಸ್ಸಿಲ್ಲದ ಮನಸ್ಸಿನಿಂದ ಸಮ್ಮತಿ ಸೂಚಿಸಿದೆ. ಸಮ್ಮೇಳನದ ಮೊದಲ ದಿನ ಚೀನಾ ಪರ ವಿರೋಧಿ ರಾಷ್ಟ್ರಗಳ ನಡುವೆ ಕಾವೇರಿದ ವಾತಾವರಣ ಸೃಷ್ಟಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಚೀನಾದ ಅಧ್ಯಕ್ಷ ತನಿಖೆಗೆ ಒಪ್ಪಿಗೆ ಸೂಚಿಸಿ, ಜೊತೆಗೆ ಕೆಲವು ಕೊಡುಗೆಗಳನ್ನು ಘೋಷಿಸಿದ್ದಾರೆ.
ಬೀಜಿಂಗ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕ್ಸಿ ಜಿನ್ ಪಿಂಗ್ ಕೊರೊನಾ ಸೋಂಕಿನ ಬಗ್ಗೆ ನಮ್ಮ ರಾಷ್ಟ್ರ ಯಾವುದೇ ವಿಷಯಗಳನ್ನು ಮುಚ‌್ಚಿಟ್ಟಿಲ್ಲ. ಪಾರದರ್ಶಕವಾಗಿ ಎಲ್ಲಾ ಮಾಹಿತಿಗಳನ್ನು ಜಗತ್ತಿಗೆ ನೀಡಿದೆ ಎಂದು ಸಮರ್ಥನೆಯನ್ನು ನೀಡಿದ್ದಾರೆ. ಕೊರೋನಾ ಸೋಂಕಿನಿಂದ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಜಗತ್ತಿನ ರಾಷ್ಟ್ರಗಳ ಭಾವನೆಯನ್ನು ಗೌರವಿಸಿ, ತನಿಖೆಗೆ ಒಪ್ಪಿರುವುದಾಗಿ ಹೇಳಿರುವ ಚೀನಾ ಇದರ ಜೊತೆಗೆ ಕೊರೊನಾ ಸೋಂಕಿನಿಂದ ತೀವ್ರವಾಗಿ ಸಂಕಷ್ಟಕ್ಕೆ ಒಳಗಾಗಿರುವ ರಾಷ್ಟ್ರಗಳಿಗೆ 2 ಮಿಲಿಯನ್ ಡಾಲರ್ ಮೊತ್ತದ ನೆರವು ನೀಡುವುದಾಗಿ ಘೋಷಿಸಿತು. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆರ್ಡೋಸ್ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಶ್ಲಾಘಿಸಿತು.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆರ್ಡೋಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೊರೊನಾ ವೈರಸ್ ಹುಟ್ಟಿನ ಬಗ್ಗೆ ತನಿಖೆ ನಡೆಯಲಿದ್ದು , ಶೀಘ್ರವೇ ವರದಿಯೂ ಕೈ ಸೇರಲಿದೆ. ಕೊರೋನಾ ಪರಿಸ್ಥಿತಿ ನಮಗೆ ಹಲವು ಪಾಠಗಳನ್ನು ಕಲಿಸಿದೆ ಎಂದು ಹೇಳಿದ್ದಾರೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಕಾರ್ಯದರ್ಶಿ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಹಾಲಿ ಸ್ಥಿತಿಯನ್ನು ಅತ್ಯಂತ ಬೇಜವಾಬ್ದಾರಿಯುತವಾಗಿ ನಿಭಾಯಿಸಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆ ವರ್ತಿಸಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.ಡಿಸೆಂಬರ್ 31, 2019 ರಂದು ವುಹಾನ್ ನಗರದಲ್ಲಿ ಕೊರೋನಾವೈರಸ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರದಿ ಮಾಡಿತು. ಆಗ ಚೀನಾದಲ್ಲಿ 44 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದವು ಮತ್ತು 11 ಮಂದಿಯ ಆರೋಗ್ಯ ಚಿಂತಾಜನಕವಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಜನವರಿ 1 2020 ರಂದು ತುರ್ತು ಕ್ರಮ ಕೈಗೊಳ್ಳುವಂತೆ ಚೀನಾಕ್ಕೆ ಸೂಚಿಸಿತು. ಬಳಿಕ ವುಹಾನ್‌ನಲ್ಲಿ ಯಾವುದೇ ಸಾವುಗಳಾಗಿಲ್ಲ, ನ್ಯುಮೋನಿಯಾ ಪ್ರಕರಣಗಳು ಮಾತ್ರ ಇವೆ ಎಂದು ಜನವರಿ 4 ರಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿತ್ತು. ಜನವರಿ 5 ರಂದು ವೈರಸ್ ಕುರಿತು ಸಂಶೋಧಿಸಲು ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರಿಗೆ ಸೂಚಿಸಲಾಯಿತು.
ಕೊರೊನಾ ವೈರಸ್ ಮಾನವನಿಂದ ಮಾನವರಿಗೆ ಹರಡುವುದಿಲ್ಲ ಎಂದ ವಿಶ್ವ ಆರೋಗ್ಯ ಸಂಸ್ಥೆಯು ಜನವರಿ 10ರಂದು ಎಲ್ಲಾ ದೇಶಗಳಿಗೆ ಕೊರೊನಾ ಪ್ರಕರಣಗಳನ್ನು ಹೇಗೆ ಕಂಡುಹಿಡಿಯುವುದು, ಪರೀಕ್ಷಿಸುವುದು ಮತ್ತು ನಿರ್ವಹಿಸುವುದು ಎಂಬುದರ ಕುರಿತು ತಾಂತ್ರಿಕ ಮಾರ್ಗದರ್ಶನ ಕಳುಹಿಸಿತು. ಜನವರಿ 13 ರಂದು ಥೈಲ್ಯಾಂಡ್ ನಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಯಿತು. ಜನವರಿ 14 ರಂದು ಡಬ್ಲ್ಯುಎಚ್‌ಓದ ಕೊವಿಡ್-19ರ ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಖೋವ್ ಸುದ್ದಿಗೋಷ್ಠಿಯಲ್ಲಿ 41 ಪಾಸಿಟಿವ್ ಪ್ರಕರಣಗಳು ಇರುವ ಬಗ್ಗೆ ಮಾಹಿತಿ ನೀಡಿದರು ಮತ್ತು ಕೊರೋನಾ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು ಮತ್ತು ವ್ಯಾಪಕವಾಗಿ ಹರಡಬಹುದೆಂಬ ಅಪಾಯದ ಮುನ್ಸೂಚನೆ ನೀಡಿತು. ಅಲ್ಲಿಂದ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಾ ಹೋಗಿ ವಿಶ್ವದಾದ್ಯಂತ ಪ್ರಸರಿಸಿತು. ಮಾರ್ಚ್ ಹೊತ್ತಿಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿ ಮಾಡಿ ಕೊರೊನಾದ ವಿರುದ್ಧ ಸಮರ ಸಾರಿದವು. ಆದರೆ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ತನ್ನ ಸವಾರಿಯನ್ನು ಮುಂದುವರಿಸಿದ್ದು, ಕೋಟ್ಯಾಂತರ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಲಕ್ಷಾಂತರ ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.