ಭಾರತದಲ್ಲಿ ಪಬ್‌ಜಿ ಸೇರಿದಂತೆ ಚೀನಾದ 118 ಅಪ್ಲಿಕೇಶನ್ ಬ್ಯಾನ್ – ಹತಾಶ ಚೀನಾದಿಂದ ಭಾರತದ ಮೇಲೆ ಆರೋಪ
ಬೀಜಿಂಗ್, ಸೆಪ್ಟೆಂಬರ್03 : ಪಬ್‌ಜಿ ಸೇರಿದಂತೆ ಚೀನಾದ 118 ಅಪ್ಲಿಕೇಶನ್ ಗಳನ್ನು ಭಾರತ ಬುಧವಾರ ನಿಷೇಧಿಸಿದೆ. ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (ಎಲ್‌ಎಸಿ) ಯಲ್ಲಿ ಚೀನಾದ ಪ್ರಚೋದನಕಾರಿ ಕಾರ್ಯಚರಣೆ ನಡುವೆ ಭಾರತ ಸರ್ಕಾರವು ಪಬ್‌ಜಿ ಮೊಬೈಲ್, ಪಬ್‌ಜಿ ಮೊಬೈಲ್ ಲೈಟ್ ಮತ್ತು ಇತರ 116 ಚೈನೀಸ್ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದು, ಡ್ರಾಗನ್ ರಾಷ್ಟ್ರ ಚೀನಾ ಕೆಂಡಾಮಂಡಲವಾಗಿದೆ.
ತನ್ನ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ಮೂಲಕ ಭಾರತದ ಇತ್ತೀಚಿನ ಅಪ್ಲಿಕೇಶನ್‌ಗಳ ನಿಷೇಧ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಆರೋಪಿಸಿದೆ.
ಗಡಿ ಉದ್ವಿಗ್ನತೆಯನ್ನು ಅನುಸರಿಸಿ ಬುಧವಾರ 118 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಭಾರತದ ಇತ್ತೀಚಿನ ಕ್ರಮವು, ಕೊರೋನವೈರಸ್ ಬಿಕ್ಕಟ್ಟಿನಿಂದ ಉಂಟಾಗಿರುವ ದುರ್ಬಲ ಆರ್ಥಿಕತೆಯ ಸಂಭವನೀಯ ಕುಸಿತದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಮೋದಿ ಸರ್ಕಾರದ ಉದ್ದೇಶಪೂರ್ವಕ ಕ್ರಮ ಎಂದು ಆರೋಪಿಸಿದೆ.
ಡೇಟಾ ಗೌಪ್ಯತೆ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಉಲ್ಲೇಖಿಸಿ ಪಬ್ ಜಿ ಸೇರಿದಂತೆ 118 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತ ನಿಷೇಧಿಸಿತು.
ಇದರಿಂದ ಭಾರತ ನಿಷೇಧಿಸಿರುವ ಚೈನೀಸ್- ಮೊಬೈಲ್ ಅಪ್ಲಿಕೇಶನ್‌ಗಳ ಸಂಖ್ಯೆ 224 ಕ್ಕೆ ಏರಿಕೆ ಕಂಡಿದೆ.
ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ ಪೀಡಿತವಾದ 118 ಮೊಬೈಲ್ ಅಪ್ಲಿಕೇಶನ್‌ಗಳನ್ನು ಸರ್ಕಾರ ನಿರ್ಬಂಧಿಸುತ್ತದೆ ಎಂದು ಭಾರತ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಲಡಾಖ್‌ನಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ಮಧ್ಯೆ ಗಡಿ ಪ್ರದೇಶದಲ್ಲಿ ಭಾರತ ಸೈನ್ಯವು ಅತಿಕ್ರಮಣಕ್ಕೆ ಮುಂದಾಗಿದ್ದ ಚೀನಾ ಸೈನ್ಯದ ಕಾರ್ಯಚರಣೆಯನ್ನು ವಿಫಲಗೊಳಿಸಿತು. ಆದಾಗ್ಯೂ, ಇತ್ತೀಚಿನ ಬೆಳವಣಿಗೆಗಳ ನಂತರ, ಈ ಪ್ರದೇಶದ ಫಿಂಗರ್ 4 ಮತ್ತು ಫಿಂಗರ್ 5 ಬೆಟ್ಟದ ಮೇಲಿನ ಪ್ರದೇಶಗಳು ಭಾರತದ ನಿಯಂತ್ರಣದಲ್ಲಿದೆ.








