ಹೊಸದಿಲ್ಲಿ, ಮೇ 22 : ಅಮೆರಿಕ, ಚೀನಾ ಮೂಲದ ಕಂಪನಿಗಳನ್ನು ಷೇರು ವಿನಿಮಯ ಕೇಂದ್ರಗಳಿಂದ ನಿರ್ಬಂಧಿಸಲು ಸೆನೆಟ್ ಮಸೂದೆಯನ್ನು ಅಂಗೀಕರಿಸಿದೆ. ಇದರಿಂದ ಚೀನಾದ ಕಂಪೆನಿಗಳಾದ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್, ಬೈದು ಇತ್ಯಾದಿ ಬೃಹತ್ ಕಂಪೆನಿಗಳಿಗೆ ಯು. ಎಸ್. ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ವ್ಯವಹಾರ ನಡೆಸಲು ನಿಷೇಧ ಆಗುವ ಸಾಧ್ಯತೆ ಇದೆ. ಅಮೆರಿಕ ಮತ್ತು ಚೀನಾದ ನಡುವಿನ ಆರ್ಥಿಕತೆಗಳ ಸಂಘರ್ಷ ಇದರಿಂದ ಇನ್ನಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಮಸೂದೆಯನ್ನು ಸೆನೆಟ್ ಸರ್ವಾನುಮತದಿಂದ ಅಂಗೀಕರಿಸಿದೆ.
ಅಮೆರಿಕದ ಸೆನೆಟರ್ ಗಳು ಚೀನಾದ ಕೆಲವು ದೊಡ್ಡ ಸಂಸ್ಥೆಗಳಿಗೆ ಹರಿದು ಹೋಗುತ್ತಿರುವ ಶತಕೋಟಿ ಡಾಲರ್‌ಗಳ ಮೇಲೆ ಆಕ್ಷೇಪ ವ್ಯಕ್ತಪಡಿಸಿದ್ದು, ಚೀನಿ ಕಂಪನಿಗಳನ್ನು ಗುರಿಯಾಗಿಸಿ ಈ ಮಸೂದೆಯನ್ನು ಮಂಡಿಸಿದೆ. ಮಸೂದೆಯ ಪ್ರಕಾರ ಯು. ಎಸ್. ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ವ್ಯವಹರಿಸಲು ಬಯಸುವ ವಿದೇಶಿ ಕಂಪನಿಗಳು ಆಡಿಟ್ ಮತ್ತು ಇತರ ಲೆಕ್ಕಪತ್ರ ಪರಿಶೋಧನೆಗಳಿಗೆ ಅಮೆರಿಕದ ದರ್ಜೆಯನ್ನು ಅನುಸರಿಸಬೇಕಾಗುತ್ತದೆ ಮತ್ತು ಕಂಪನಿಯು ವಿದೇಶಿ ಸರಕಾರದ ನಿಯಂತ್ರಣದಲ್ಲಿ ಇಲ್ಲ ಎಂದು ತೋರಿಸಬೇಕಾಗುತ್ತದೆ.
ಕಂಪನಿಯು ಅಂತಹ ನಿಯಂತ್ರಣದಲ್ಲಿಲ್ಲ ಎಂದು ತೋರಿಸಲು ಸಾಧ್ಯವಾಗದಿದ್ದರೆ ಅಥವಾ ಸಾರ್ವಜನಿಕ ಕಂಪನಿ ಲೆಕ್ಕಪರಿಶೋಧಕ ಮೇಲ್ವಿಚಾರಣಾ ಮಂಡಳಿ, ಅಥವಾ ಪಿಸಿಎಒಬಿ, ಕಂಪನಿಯು ವಿದೇಶಿ ಸರ್ಕಾರದ ನಿಯಂತ್ರಣದಲ್ಲಿದೆ ಎಂದು ನಿರ್ಧರಿಸಿದರೆ ಸತತ ಮೂರು ವರ್ಷಗಳ ಕಾಲ ಕಂಪನಿಯನ್ನು ಲೆಕ್ಕಪರಿಶೋಧಿಸಲು ಸಾಧ್ಯವಾಗುವುದಿಲ್ಲ ಮತ್ತು ಕಂಪನಿಯ ಸೆಕ್ಯೂರಿಟಿಗಳನ್ನು ವಿನಿಮಯ ಕೇಂದ್ರಗಳಿಂದ ನಿಷೇಧಿಸಲಾಗುವುದು. ಇದರ ಪರಿಣಾಮವಾಗಿ ಗುರುವಾರ ಯು. ಎಸ್. ಸ್ಟಾಕ್ ಎಕ್ಸ್‌ಚೇಂಜ್ ನಲ್ಲಿ ಬೈದು ಮತ್ತು ಅಲಿಬಾಬಾ ಸೇರಿದಂತೆ ಕೆಲವು ಬೃಹತ್ ಚೀನಾ ಮೂಲದ ಕಂಪನಿಗಳ ಷೇರು ದರಗಳು ಕುಸಿದಿದೆ.
ರಿಪಬ್ಲಿಕನ್ ಪಕ್ಷದ ಸೆನೆಟರ್ ಜಾನ್ ಕೆನಡಿ ಮತ್ತು ಮೇರಿಲ್ಯಾಂಡ್‌ನ ಪ್ರಜಾಪ್ರಭುತ್ವವಾದಿ ಕ್ರಿಸ್ ವ್ಯಾನ್ ಹೊಲೆನ್ ಅವರು ಮಂಡಿಸಿದ ಈ ಮಸೂದೆಯನ್ನು ಸರ್ವಾನುಮತದ ಒಪ್ಪಿಗೆಯಿಂದ ಅಂಗೀಕರಿಸಲಾಯಿತು ಮತ್ತು ಕಂಪೆನಿಗಳು ವಿದೇಶಿ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂದು ಪ್ರಮಾಣೀಕರಿಸುವ ಅಗತ್ಯವಿರುತ್ತದೆ ಎಂದು ಪ್ರತಿಪಾದಿಸಲಾಯಿತು. ಈ ಸಂದರ್ಭದಲ್ಲಿ ನಾನು ಹೊಸ ಶೀತಲ ಸಮರಕ್ಕೆ ಇಳಿಯಲು ಬಯಸುವುದಿಲ್ಲ, ಚೀನಾ ನಮ್ಮ ನಿಯಮಗಳನ್ನೇ ಅನುಸರಿಸಬೇಕು ಎಂದು ಕೆನಡಿ ಸೆನೆಟ್ ನಲ್ಲಿ ಹೇಳಿದರು. ಯು.ಎಸ್. ಎಕ್ಸ್‌ಚೇಂಜ್ ಗಳಾದ ನಾಸ್ಡಾಕ್ ಮತ್ತು ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಗಳಿಗೂ ಈ ಮಸೂದೆ ಅನ್ವಯಿಸುತ್ತದೆ ಎಂದೂ ಕೆನಡಿ ಹೇಳಿದ್ದಾರೆ.
ಅಮೆರಿಕವು ಚೀನಾ ಮೂಲದ ಕಂಪನಿಗಳನ್ನು ಷೇರು ವಿನಿಮಯ ಕೇಂದ್ರಗಳಿಂದ ನಿರ್ಬಂಧಿಸಿದರೆ, ಚೀನಾ ಕಂಪೆನಿಗಳ ಷೇರು ಮಾರುಕಟ್ಟೆ ದರ ಕುಸಿಯಬಹುದು. ಕಂಪೆನಿಗಳ ಬ್ರ್ಯಾಂಡ್ ಗೂ ಹಾನಿಯಾಗುವ ಸಂಭವವಿದೆ. ಕಂಪನಿಯ ಷೇರುದಾರರ ಹಕ್ಕುಗಳಿಗೆ ಇದರಿಂದ ಯಾವುದೇ ಧಕ್ಕೆ ಬರದಿದ್ದರೂ, ಷೇರುಗಳ ದರ ಕುಸಿತದ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಈಗಾಗಲೇ ಅಮೆರಿಕ ಚೀನಾದ ಕಂಪೆನಿಗಳನ್ನು ಷೇರು ವಿನಿಮಯ ಕೇಂದ್ರಗಳಿಂದ ನಿರ್ಬಂಧಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದು, ಚೀನಾ ಮೂಲದ ಲಕಿನ್ ಕಾಫಿ ಎಂಬ ಕಂಪನಿಯ ಷೇರು ದರ ದಿಢೀರ್ ಕುಸಿದಿದೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಮ್ಯೂನಿಸ್ಟ್ ದೇಶ ಚೀನಾದೊಂದಿಗೆ ಯಾವ ಕಾರಣಕ್ಕೂ ಮತ್ತೆ ವಾಣಿಜ್ಯ ಸಂಬಂಧ ಕುದುರಿಸುವ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು ಮತ್ತು ಚೀನಾವು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದರು.
ಯು.ಎಸ್. ಸ್ಟಾಕ್ ಎಕ್ಸ್‌ಚೇಂಜ್‌ಗಳಿಂದ ಕಂಪನಿಗಳ ನೋಂದಣಿಯನ್ನು ತೆಗೆದು ಹಾಕಿದರೂ ಹೂಡಿಕೆದಾರರು ಕಂಪನಿಗಳ ಷೇರುಗಳ ಕೊಡು-ಕೊಳ್ಳುವಿಕೆ ಮುಂದುವರಿಸಬಹುದಾಗಿದೆ. ಇದಕ್ಕಾಗಿ ಓವರ್ ದಿ ಕೌಂಟರ್ (ಒಟಿಸಿ) ಎಕ್ಸ್‌ಚೇಂಜ್ ಸೌಲಭ್ಯ ಇರುತ್ತದೆ. ಆದರೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ‘ಲಿಸ್ಟೆಡ್’ ಕಂಪನಿಗಳ ಷೇರುಗಳ ಮೇಲೆ ಇರುವಷ್ಟು ನಿಗಾ ಇವುಗಳಿಗೆ ಇರುವುದಿಲ್ಲ.