ನವದೆಹಲಿ: ಲಡಾಕ್ನ ಗಾಲ್ವನ್ ಕಣಿವೆಯ ಗಡಿಯಲ್ಲಿ ಚೀನಾ ಕಿರಿಕ್ ಮಾಡಿ ಭಾರತೀಯ ಯೋಧರ ಹತ್ಯೆ ಮಾಡಿದ ಬೆನ್ನಲ್ಲೇ ಭಾರತ ಚೀನಾಗೆ ದೊಡ್ಡ ಶಾಕ್ ನೀಡಿದೆ. ಚೀನಾ ಮೂಲದ ಕಂಪನಿಯೊಂದಕ್ಕೆ ರೈಲ್ವೆ ಇಲಾಖೆ ನೀಡಿದ್ದ 471 ಕೋಟಿ ವೆಚ್ಚದ ಕಾಮಗಾರಿಯ ಗುತ್ತಿಗೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ಕಾನ್ಪುರ-ದೀನ ದಯಾಳ್ ಉಪಾಧ್ಯಯ ನಿಲ್ದಾಣ ನಡುವಿನ 417 ಕಿ.ಮೀ ವಿಸ್ತೀರ್ಣದ ರೈಲ್ವೆ ಕಾಮಗಾರಿಯನ್ನು ಚೀನಾದ ಬೀಜಿಂಗ್ ನ್ಯಾಶನಲ್ ರೈಲ್ವೆ ಸಂಶೋಧನಾ ಸಂಸ್ಥೆಗೆ 2016ರಲ್ಲಿ ನೀಡಲಾಗಿತ್ತು. 471 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಆರಂಭಿಸಿದ್ದ ಕಂಪನಿ, ನಾಲ್ಕು ವರ್ಷಗಳ ಅವಧಿಯಲ್ಲಿ ಕೇವಲ ಶೇ.20ರಷ್ಟು ಕಾಮಗಾರಿ ಮುಗಿಸಿದೆ. ಜೊತೆಗೆ ಗುತ್ತಿಗೆಗೆ ಸಂಬಂಧಿಸಿದ ತಾಂತ್ರಿಕ ದಾಖಲೆಗಳನ್ನು ಕಂಪನಿ ನೀಡಿಲ್ಲ. ಕಾಮಗಾರಿ ನಡೆಯುವ ಸ್ಥಳದಲ್ಲಿ ಜವಾಬ್ದಾರಿಯುತ ಎಂಜಿನಿಯರ್ ಆಗಲಿ ಅಥವಾ ಸಂಬಂಧಪಟ್ಟ ಕಂಪನಿಯ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಯೋಜನೆಯ ಕಾಮಗಾರಿ ಪ್ರಗತಿ ಬಗ್ಗೆ ಎಲ್ಲಾ ಹಂತದ ಸಭೆ ನಡೆಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ಚೀನಾ ಕಂಪನಿಗೆ ನೀಡಿದ್ದ ಕಾಮಗಾರಿಯ ಗುತ್ತಿಗೆಯನ್ನು ರದ್ದು ಮಾಡಿರುವುದಾಗಿ ಭಾರತೀಯ ರೈಲ್ವೆ ಇಲಾಖೆಯ ಫ್ರೈಟ್ ಕಾರಿಡಾರ್ ಕಾರ್ಪೋರೇಶನ್ ತಿಳಿಸಿದೆ.
ಚೀನಾ ಅವಲಂಬನೆ ಕಡಿಮೆಗೆ ಚಿಂತನೆ
ಭಾರತದ ಟಿಲಿಕಾಮ್ ಕ್ಷೇತ್ರ ಅತಿಹೆಚ್ಚು ಅವಲಂಬನೆ ಹೊಂದಿರುವುದೇ ಚೀನಾವನ್ನು. ಅದರಲ್ಲೂ ಮೊಬೈಲ್ ಹಾಗೂ ಬಿಡಿ ಭಾಗಗಳು, ಎಲೆಕ್ಟ್ರಾನಿಕ್ ವಸ್ತುಗಳಿಗಾಗಿ ಭಾರತ ಚೀನಾವನ್ನೇ ಅವಲಂಭಿಸಿದೆ. ರೈಲ್ವೆ ಇಲಾಖೆ ದಿಟ್ಟ ಹೆಜ್ಜೆ ಇಲ್ಲ ಬೆನ್ನಲ್ಲೇ, ಕೇಂದ್ರದ ಟೆಲಿಕಾಂ ಸಚಿವಾಲಯದ ಕೂಡ ಚೀನಾ ಅವಲಂಬನೆ ಕಡಿಮೆ ಮಾಡಿಕೊಳ್ಳುವತ್ತ ಹೆಜ್ಜೆ ಇಡಲು ನಿರ್ಧರಿಸಿದೆ.
ಮುಂಬರುವ 5ಜಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಚೀನಾ ಪಾಲ್ಗೊಳ್ಳುವಿಕೆಯನ್ನು ನಿಲ್ಲಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಗೃಹಪಯೋಗಿ ಚೀನಾ ವಸ್ತುಗಳ ಆಮದು ಕಡಿಮೆ ಮಾಡುವ ನಿಟ್ಟಿನಲ್ಲೂ ಹಣಕಾಸು ಹಾಗೂ ವಾಣಿಜ್ಯ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿವೆ.
ಭಾರತೀಯ ವರ್ತಕರ ಸಂಘಗಳ ಒಕ್ಕೂಟ ಕೂಡ ದೇಶಾದ್ಯಂತ ಚೀನಿ ವಸ್ತುಗಳ ಮಾರಾಟ ಸ್ಥಗಿತಗೊಳಿಸುವ ಅಭಿಯಾನ ಆರಂಭಿಸಲು ನಿರ್ಧರಿಸಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕಂಡೇಲ್ವಾಲ್ ಹೇಳಿದ್ದಾರೆ.








