ಎರಡು ತೆಲುಗು ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ‘ಚಿರು’ ಮೆಗಾ ಆಕ್ಸಿಜನ್ ಬ್ಯಾಂಕ್
ಹೈದರಾಬಾದ್ : ಬ್ಲಾಡ್ ಬ್ಯಾಂಕ್ ಮತ್ತು ಐ ಬ್ಯಾಂಕ್ ಬಳಿಕ ಇದೀಗ ಎರಡು ತೆಲುಗು ರಾಜ್ಯಗಳ ಪ್ರತಿ ಜಿಲ್ಲೆಯಲ್ಲೂ ಮೆಗಾಸ್ಟಾರ್ ಚಿರಂಜೀವಿ ಆಕ್ಸಿಜನ್ ಬ್ಯಾಂಕ್ ತೆರೆಯಲು ಮುಂದಾಗಿದ್ದಾರೆ.
ಕೊರೊನಾದಿಂದ ಜನರು ಸಂಕಷ್ಟದಲ್ಲಿದ್ದು, ಎರಡು ತೆಲುಗು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಸಮಸ್ಯೆಯ ಗಂಭೀರತೆಯನ್ನು ತಿಳಿದುಕೊಂಡು ಮೆಗಾಸ್ಟಾರ್ ಆಕ್ಸಿಜನ್ ಬ್ಯಾಂಕ್ ತೆರೆಯಲು ತೀರ್ಮಾನಿಸಿದ್ದಾರೆ.
ಸಕಾಲದಲ್ಲಿ ರಕ್ತ ಸಿಗದೇ ಯಾರೂ ಮೃತಪಡಬಾರದೆಂಬ ಸಂಕಲ್ಪದಿಂದ 1998ರಲ್ಲಿ ಚಿರಂಜೀವಿ ಬ್ಲಡ್ ಬ್ಯಾಂಕ್ ಪ್ರಾರಂಭಿಸಿದ್ದರು.
ಈಗಿರುವ ಪರಿಸ್ಥಿತಿಯಲ್ಲಿ ಆಕ್ಸಿಜನ್ ದೊರೆಯದೇ ಯಾವುದೇ ಸಾವು ಸಂಭವಿಸಬಾರದು ಎಂದು ಉದ್ದೇಶದಿಂದ ಚಿರು ಆಕ್ಸಿಜನ್ ಬ್ಯಾಂಕ್ ಅನ್ನು ತೆಲುಗು ರಾಜ್ಯಗಳ ಎಲ್ಲಾ ಜಿಲ್ಲೆಯಲ್ಲೂ ತೆರೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಮುಂದಿನ ವಾರದಲ್ಲಿ ಜನರಿಗೆ ಆಕ್ಸಿಜನ್ ದೊರೆಯುವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಚಿರಂಜೀವಿ ಕಚೇರಿಯಿಂದ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.
ಅಂದಹಾಗೆ ತಂದೆಯ ಈ ಮಹತ್ತರ ಆಕ್ಸಿಜನ್ ಬ್ಯಾಂಕ್ ಸಂಬಂಧಿಸಿದ ವ್ಯವಹಾರಗಳನ್ನು ಚಿರಂಜೀವಿ ಪುತ್ರ ರಾಮ್ ಚರಣ್ ಮೇಲ್ವಿಚಾರಣೆ ನಡೆಸುತ್ತಾರೆ.