Chitradurga | ರಘು ಆಚಾರ್ ಕನಸು – 40 ರೈತರಿಗೆ ಇಸ್ರೇಲ್ ಪ್ರವಾಸ ಯೋಗ
ಚಿತ್ರದುರ್ಗ : ಆಧುನಿಕ ಕೃಷಿ ತಂತ್ರಜ್ಞಾನಗಳ ಅಧ್ಯಯನಕ್ಕಾಗಿ ಚಿತ್ರದುರ್ಗದ ಸುಮಾರು 40 ರೈತರ ತಂಡವನ್ನು ಇಸ್ರೇಲ್‌ಗೆ ಕಳುಹಿಸಲು ಮಾಜಿ ವಿಧಾನಪರಿಷತ್ ಸದಸ್ಯರು ರಘು ಆಚಾರ್ ತೀರ್ಮಾನಿಸಿದ್ದಾರೆ. ಚಿತ್ರದುರ್ಗದಲ್ಲಿ ಕೃಷಿಯ ಸಮಗ್ರ ಸುಧಾರಣೆಗಾಗಿ ದೂರದೃಷ್ಟಿಯ ಮತ್ತು ಕ್ರಾಂತಿಕಾರಕ ಆಲೋಚನೆಗಳನ್ನು ಜಾರಿಮಾಡಲು ಹೊರಟಿರುವ ರಘು ಆಚಾರ್, ಇದರ ಮೊದಲ ಹಂತವಾಗಿ ಇಸ್ರೇಲ್ ರಾಷ್ಟ್ರಕ್ಕೆ ಕೃಷಿ ಅಧ್ಯಯನ ನಿಯೋಗ ಕಳಿಸಲು ಮುಂದಾಗಿದ್ದಾರೆ. ಇಸ್ರೇಲ್ ನ ಅತ್ಯಾಧುನಿಕ ಹಾಗೂ ಯಶಸ್ವಿ ಕೃಷಿ ಪದ್ಧತಿಯನ್ನು ಅಭ್ಯಾಸ ಮಾಡಲು ಚಿತ್ರದುರ್ಗದಿಂದ 40 ರೈತರನ್ನು (ನಾಲ್ಕು ಬ್ಯಾಚ್‌ಗಳಲ್ಲಿ ತಲಾ 10 ರೈತರು) ಇಸ್ರೇಲ್‌ಗೆ ಕಳುಹಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಚಾರ್ ತಮ್ಮ ಯೋಜನೆಯ ಕುರಿತು ಮಾಹಿತಿ ನೀಡಿದರು. ಇಸ್ರೇಲ್ ಮಾದರಿ ವಿಶ್ವ ಕೃಷಿಯಲ್ಲೇ ಅತ್ಯಂತ ಯಶಸ್ವಿಯಾಗಿ ಪ್ರಯೋಗವಾಗಿದೆ. ತನ್ನ ಸೀಮಿತ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ಕೃಷಿ ಉತ್ಪಾದನೆ ಹಾಗೂ ತಾಜಾ ಉತ್ಪನ್ನಗಳ ರಫ್ತಿಗೆ ಇಸ್ರೇಲ್ ಹೆಸರಾಗಿದೆ. ಸುಧಾರಿತ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಶಿಷ್ಟವಾದ ಕೃಷಿ ಪದ್ಧತಿಯನ್ನು ಇಸ್ರೇಲ್ ಅಳವಡಿಸಿಕೊಂಡಿದೆ. ಸಾಕಷ್ಟು ಶುಷ್ಕ ಮತ್ತು ಅರೆ ಶುಷ್ಕ ಪ್ರದೇಶಗಳನ್ನು ಹೊಂದಿರುವ ಚಿತ್ರದುರ್ಗಕ್ಕೆ ಇಸ್ರೇಲ್ ಮಾದರಿಯ ವ್ಯವಸಾಯ ತಂತ್ರಜ್ಞಾನ ಅತ್ಯಂತ ಉಪಯುಕ್ತವಾಗಿದೆ. ಸಾಂಪ್ರದಾಯಿಕವಾಗಿ, ಈ ಪ್ರದೇಶಗಳು ಕಡಿಮೆ ಬೆಳೆ ಇಳುವರಿ ಹಾಗೂ ಆಹಾರ ಪದಾರ್ಥ ಉತ್ಪಾದನೆಯಲ್ಲಿ ಗುಣಮಟ್ಟದ ಕೊರತೆ ಎದುರಿಸುತ್ತಿದೆ. ಆದರೆ ನಮ್ಮ ಹೆಚ್ಚುತ್ತಿರುವ ಜನಸಂಖ್ಯೆಯ ಆಹಾರ ಅವಲಂಬನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಪದ್ಧತಿಯಲ್ಲಿ ಹೆಚ್ಚಿನ ಪ್ರಯೋಗಗಳ ಮೂಲಕ ಇಳುವರಿ ಹಾಗೂ ಗುಣಮಟ್ಟ ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ ಎಂದು ವಿವರಿಸಿದ್ದಾರೆ.

ಇಸ್ರೇಲ್ ಪ್ರಪಂಚದಲ್ಲೆ ಅತ್ಯಂತ ಒಣ ವಾತಾವರಣ ಹೊಂದಿದ್ದರೂ, ಕೃಷಿಯಲ್ಲಿ ಅತ್ಯಂತ ಯಶಸ್ವಿ ಪ್ರಯೋಗ ಮಾಡಿರುವ ದೇಶಗಳಲ್ಲಿ ಒಂದಾಗಿದೆ. ಚಿತ್ರದುರ್ಗದಂತಹ ಶುಷ್ಕ ಪ್ರದೇಶಗಳಲ್ಲಿನ ಆಹಾರ ಉತ್ಪಾದನೆಯ ಪ್ರಮಾಣ ಮತ್ತು ಗುಣಮಟ್ಟವನ್ನು ಗಮನಿಸಿದಾಗ ಇಸ್ರೇಲ್ ಮಾದರಿಯ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಸೂಕ್ತವೆನಿಸುತ್ತದೆ. ಇಸ್ರೇಲ್‌ನಲ್ಲಿ ಅಭಿವೃದ್ಧಿಪಡಿಸುತ್ತಿರುವ ವ್ಯವಸಾಯ ಜ್ಞಾನದ ಮೂಲಕ ಚಿತ್ರದುರ್ಗ ಜಿಲ್ಲೆಯ ಕೃಷಿ ತಾಂತ್ರಿಕತೆಯನ್ನು ಸುಧಾರಿಸಬಹುದಾಗಿದೆ. ಸಸ್ಯ ತಳಿ, ಮಣ್ಣು ಫಲವತ್ತುಗೊಳಿಸುವಿಕೆ, ಸೂಕ್ತ ನೀರಾವರಿ ಅಭ್ಯಾಸ ಮತ್ತು ಕೀಟ ನಿಯಂತ್ರಣ ಮುಂತಾದ ಉಪಕ್ರಮಗಳು ಬೆಳೆ ಇಳುವರಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಜಾನುವಾರುಗಳನ್ನು ಹೆಚ್ಚಾಗಿ ಮೇಯಿಸುವಿಕೆಯಿಂದ ಮಣ್ಣಿನ ಅವನತಿಯಾಗುತ್ತದೆ ಎನ್ನಲಾಗುತ್ತದೆ. ಆದರೆ ಸರಿಯಾದ ಪ್ರಾಣಿ ಪ್ರಭೇದಗಳ ಸಮರ್ಪಕ ನಿರ್ವಹಣೆಯಿಂದ ಸಸ್ಯ ವೈವಿಧ್ಯತೆ ವೃದ್ಧಿಯಾಗುತ್ತದೆ. ಪಶುಸಂಗೋಪನೆಯಿಂದ ಹುಲ್ಲಿನ ಉಳುಮೆ ಕ್ರಮಗಳನ್ನು ಉತ್ತೇಜಿಸಲಾಗುತ್ತದೆ. ಇದರಿಂದ ಬೀಜ ಮೊಳಕೆಯೊಡೆಯುವ ಪ್ರಕ್ರಿಯೆ ಸುಧಾರಿಸುತ್ತದೆ. ಇಸ್ರೇಲ್ ತನ್ನ ಸುಧಾರಿತ ಪಶುಸಂಗೋಪನೆಯಿಂದ ಮಹತ್ವದ ಬೆಳವಣಿಕೆ ಸಾಧಿಸಿದೆ. ಇಸ್ರೇಲ್ ತನ್ನ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೆಲವು ವರ್ಷಗಳ ಹಿಂದೆ ಯೋಚಿಸಲಾಗದ ಉತ್ಪಾದನೆಯನ್ನು ಈಗ ಸಾಧಿಸಿ ತೋರಿಸಿದೆ. ಆಹಾರ ವೈವಿಧ್ಯತೆ ಮತ್ತು ಭದ್ರತೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಹೀಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೃಷಿ ನಡೆಸುವ ವಿಧಾನ ನಮ್ಮ ಚಿತ್ರದುರ್ಗದ ಶುಷ್ಕ ಮತ್ತು ಅರೆ-ಶುಷ್ಕ ವಾತಾವರಣಕ್ಕೆ ಸೂಕ್ತವಾಗಿ ಹೊಂದಕೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಚಿತ್ರದುರ್ಗದಲ್ಲಿಯೂ ಸಹ ಕಾರ್ಯಗತಗೊಳಿಸಬಹುದಾಗಿದೆ ಎಂದು ತಿಳಿಸಿದರು.

ಚಿತ್ರದುರ್ಗದ ಅಸ್ಥಿರ ಕೃಷಿ ಪರಿಸ್ಥಿತಿ ಸುಧಾರಿಸಲು ಇದೊಂದು ಸುವರ್ಣ ಅವಕಾಶ ಎಂದ ರಘು ಆಚಾರ್, ಎರಡು ಅವಧಿಗೆ ವಿಧಾನಪರಿಷತ್ ಸದಸ್ಯನಾಗಿ ಚಿತ್ರದುರ್ಗದ ಜನರ ಪ್ರೀತಿ ಗಳಿಸಿಕೊಂಡಿದ್ದೇನೆ. ಈಗ ರೈತರಿಗೆ ನೆರವು ನೀಡುವುದು ನನ್ನ ಕರ್ತವ್ಯ. ಒಂದು ವಾರ ಇಸ್ರೇಲ್ ಪ್ರವಾಸ ಮಾಡುವ ನಮ್ಮ ರೈತರು, ತಾವು ಕಲಿತಿದ್ದನ್ನು ಯಶಸ್ವಿಯಾಗಿ ಅಳವಡಿಸಿಕೊಂಡು ವ್ಯಾವಸಾಯಿಕ ಬದುಕಿನಲ್ಲಿ ದೊಡ್ಡ ಸಾಧನೆ ಮಾಡುತ್ತಾರೆಂಬ ನಂಬಿಕೆ ನನಗಿದೆ ಎಂದರು. ಇಸ್ರೇಲಿಗರ ತಂತ್ರಜ್ಞಾನ ಅರ್ಥ ಮಾಡಿಕೊಂಡು ಕೃಷಿಯಲ್ಲಿ ಅಳವಡಿಸಿಕೊಂಡರೆ ಅದ್ಭುತಗಳನ್ನು ವಾಸ್ತವಕ್ಕಿಳಿಸಬಹುದು. ಈ ಎಲ್ಲಾ ಕಾರಣಗಳಿಂದ ಇಸ್ರೇಲ್ ಕೃಷಿ ಅಧ್ಯಯನ ಮತ್ತು ತರಬೇತಿ ಪ್ರವಾಸದ ನೀಲನಕ್ಷೆ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲಿ ರೈತರ ಮೊದಲ ತಂಡ ಇಸ್ರೇಲ್ ಗೆ ತೆರಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಅವರು ಇಸ್ರೇಲ್ ತಂತ್ರಜ್ಞರನ್ನು ಸಂಪರ್ಕಿಸಿರುವ ಕುರಿತು ಮಾಹಿತಿ ಹಂಚಿಕೊಂಡರು. ನಾವು ಇಸ್ರೇಲ್‌ನ ಟೆಲ್ ಅವಿವ್ ವಿಶ್ವವಿದ್ಯಾಲಯದ ಕೃಷಿ ಮತ್ತು ನೀರು ನಿರ್ವಹಣೆಯ ಪ್ರಾಧ್ಯಾಪಕ ಪ್ರೊ.ರಾಮ್ ಫಿಶ್‌ಮನ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರು ಕೃಷಿಯಲ್ಲಿ ಆಧುನಿಕ ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ನಮ್ಮೊಂದಿಗೆ ಸಹಕರಿಸಲು ಸಂತೋಷದಿಂದ ಸಮ್ಮತಿಸಿದ್ದಾರೆ ಎಂದರು. ನಮ್ಮ ರೈತರ ನಿಯೋಗವು ಕೃಷಿ ಶಿಕ್ಷಣ, ಸಂಶೋಧನೆ ಮತ್ತು ನೀತಿ ತಜ್ಞರನ್ನು ಭೇಟಿ ಮಾಡಿ ಸಮಗ್ರವಾಗಿ ಅಧ್ಯಯನ ನಡೆಸಲಿದೆ ಎಂದರು.
ಅಧ್ಯಯನ ಪ್ರವಾಸದ ಸಮಯದಲ್ಲಿ, ಚಿತ್ರದುರ್ಗದ ರೈತರು ಈ ಕೆಳಗಿನವುಗಳನ್ನು ಅರ್ಥಮಾಡಿಕೊಳ್ಳಲಿದ್ದಾರೆ:
- ಲಂಬ ಕೃಷಿ.
- ವಾಟರ್ ಶೆಡ್ ನಿರ್ವಹಣೆ.
- ಸುಗ್ಗಿಯ ನಂತರದ ನಿರ್ವಹಣೆ.
- ಆಹಾರ ಸಂಸ್ಕರಣಾ ತಂತ್ರಗಳು
- ಉತ್ಪನ್ನಗಳ ಸಾಮೂಹಿಕ ಮಾರುಕಟ್ಟೆ.