ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಕೊಬ್ಬಿ ಬಲಿತ ಧನಪಿಶಾಚಿ ವೈದ್ಯಾಧಿಕಾರಿಗಳ ಸೊಕ್ಕು ಮುರಿಯುವರಾರು?

1 min read

ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಕೊಬ್ಬಿ ಬಲಿತ ಧನಪಿಶಾಚಿ ವೈದ್ಯಾಧಿಕಾರಿಗಳ ಸೊಕ್ಕು ಮುರಿಯುವರಾರು?

 

“ಧರ್ಮಪ್ರಕಾಶ ಚಿಗಟೇರಿ ಮರಿಗೆಪ್ಪನವರು ಲೋಕಕಲ್ಯಾಣಕ್ಕಾಗಿ ಕಟ್ಟಿಸಿದ ಆಸ್ಪತ್ರೆಯಲ್ಲಿ ಬಡವರ ರಕ್ತ ಹೀರುವ ವೈದ್ಯಕೀಯ ಸಿಬ್ಬಂದಿಗಳ ಆಟಾಟೋಪ”

 

ಪ್ರತಿ ಊರಿಗೂ ಅದರದೇ ಆದ ಇತಿಹಾಸ, ಸ್ಥಳ ವಿಶೇಷತೆ ಅಂತಿರುತ್ತದೆ. ಊರುಗಳ ಹೆಸರಿಗೂ ಕೂಡ ಅದರದ್ದೇ ಐತಿಹ್ಯವಿರುತ್ತದೆ. ಕರುನಾಡಿನ ಮ್ಯಾಂಚೆಸ್ಟರ್‌, ಮಧ್ಯಕರ್ನಾಟಕದ ದಾವಣಗೆರೆಗೂ ಒಂದು ದೊಡ್ಡ ಇತಿಹಾಸವಿದೆ, ಅನನ್ಯ ವಿಶೇಷತೆಗಳಿವೆ. ದಾವಣಗೆರೆ ಬಹು ಹಿಂದೆ ದಾನಧರ್ಮ ಪರಂಪರೆಗೆ, ದೇಶದಲ್ಲೇ ಹೆಸರುವಾಸಿಯಾಗಿದ್ದ ಪ್ರದೇಶ. ಜಿಲ್ಲೆಯ ರಾಜನಹಳ್ಳಿ ಹಾಗೂ ಚಿಗಟೇರಿ ಮನೆತನದ ಹೆಸರುಗಳು ಚರಿತ್ರೆಯಲ್ಲಿ ಎಂದಿಗೂ ಅಜರಾಮರ. ಏಕೆಂದರೆ, ಅಂದಿನ ಹೆಸರಾಂತ ಮನೆತನದ ರಾಜಕೀಯ ಮುಂದಾಳುಗಳು ತಮ್ಮ ಲಾಭಕ್ಕಾಗಿ ಎಂದೂ ಯೋಚನೆ ಮಾಡುತ್ತಿರಲಿಲ್ಲ, ಆರ್ಥಿಕವಾಗಿ ಅಶಕ್ತರು, ಹಿಂದುಳಿದ ಜನ ಸಾಮಾನ್ಯ ಕಲ್ಯಾಣ ಯೋಜನೆಯ ಕುರಿತಾದ ದೂರದೃಷ್ಟಿ ಇಟ್ಟುಕೊಂಡಿದ್ದರು.

 

ಆ ದಿನಗಳಲ್ಲಿ ಚಿಗಟೇರಿ ಮುರಿಗೆಪ್ಪನವರ ಎರಡನೇ ಪುತ್ರ ಜಯಣ್ಣ ಒಮ್ಮೆ ಗಂಟಲು ನೋವಿನಿಂದ ಬಳಲುತ್ತಿದ್ದರಂತೆ. ದಾವಣಗೆರೆಯಲ್ಲಿ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಕೊನೆಗೆ ದೂರದ ಮೀರಜ್‌ಗೆ ಹೋಗಬೇಕಾಗಿತ್ತಂತೆ. ಚಿಕಿತ್ಸೆಯ ನಂತರ ವೈದ್ಯರಿಗೆ ಸಂಭಾವನೆ ಕೊಡಲು ಹೋದರೆ, ಆ ವೈದ್ಯರು “ತಾವು ಮೈಸೂರು ರಾಜ್ಯದಿಂದ ಚಿಕಿತ್ಸೆಗೆ ಇಲ್ಲಿಗೆ ಬಂದಿದ್ದೀರಾ. ನನಗೆ ಸಂಭಾವನೆ ಕೊಡುವ ಬದಲು ದಾವಣಗೆರೆಯಲ್ಲಿ ಒಂದು ಆಸ್ಪತ್ರೆ ಕಟ್ಟಿಸಿದರೆ, ಅದೇ ನೀವು ನನಗೆ ಕೊಡುವ ಸಂಭಾವನೆ. ಅಲ್ಲಿನ ಬಡವರು ತಮ್ಮ ಹಾಗೆ ಹೆಚ್ಚಿನ ಚಿಕಿತ್ಸೆಗೆ ದೂರದ ಊರುಗಳಿಗೆ ಬರುವುದನ್ನು ನಿಲ್ಲಿಸಬಹುದು” ಎಂದು ಹೇಳಿದರಂತೆ. ಹೀಗೆ ಕಟ್ಟಿಸಲ್ಪಟ್ಟ ಬಹು ಸೌಕರ್ಯ ಆಸ್ಪತ್ರೆಯೇ ದಾವಣಗೆರೆಯ ಚಾರಿತ್ರಿಕ ಮಹತ್ವದ ಚಿಕಟೇರಿ ಆಸ್ಪತ್ರೆ. ಚಿಗಟೇರಿ ಮುರಿಗೆಪ್ಪನವರು, ೧೯೫೬ರಲ್ಲಿ ದಾವಣಗೆರೆಯಲ್ಲಿ ಆಸ್ಪತ್ರೆ ಕಟ್ಟಿಸಲು ಯೋಜಿಸಿ, ಅಂದಿನ ಕಾಲದಲ್ಲಿ ೧,೫೦,೦೦೦/- ರೂಪಾಯಿ ದಾನವಾಗಿ ಕೊಟ್ಟು ಅಂದಿನ ಮೈಸೂರಿನ ರಾಜ್ಯಪಾಲರು ಹಾಗೂ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರ ಅಮೃತ ಹಸ್ತದಿಂದ ಚಿಗಟೇರಿ ಜನರಲ್ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ಆಸ್ಪತ್ರೆ ಪ್ರಾರಂಭವಾಗಿ ಆರೋಗ್ಯ ಪರಿಕರಗಳಿಗೆ ಕೊರತೆಯಾದಾಗ, ಅವರ ಪುತ್ರ ಚಿಗಟೇರಿ ಜಯಣ್ಣನವರು ೩ ಲಕ್ಷ ದೇಣಿಗೆ ಕೊಟ್ಟು ಪರಿಕರಗಳನ್ನು ತರಿಸಿದ್ದರು. 

 

ಸ್ವಾತಂತ್ರ ಬಂದು ಕೆಲವೇ ವರ್ಷಗಳು ಕಳೆದ ಸಂದರ್ಭದಲ್ಲಿ ಇಲ್ಲಿ ಎಲ್ಲಾ ಸೌಕರ್ಯಗಳಿರುವ ಆಸ್ಪತ್ರೆ ನಿರ್ಮಾಣವಾಯಿತಲ್ಲ, ಆ ಮೊತ್ತ ಅಂದರೆ ಹತ್ತಿರ ಹತ್ತಿರ ೫ ಲಕ್ಷ, ಅಂದಿನ ಕಾಲದಲ್ಲಿ ಇದು ಬಹುದೊಡ್ಡ ಮೊತ್ತ. ಒಂದಿಡೀ ಜಿಲ್ಲೆಯನ್ನೇ ಕೊಂಡುಕೊಳ್ಳಬಹುದಾಗಿತ್ತು ಇಷ್ಟು ಹಣದಲ್ಲಿ. ಆದರೆ ಚಿಗಟೇರಿ ಮನೆತನ ಹಣಕ್ಕೆ ಬೆಲೆ ಕೊಡದೆ ಜನಕಲ್ಯಾಣಕ್ಕಾಗಿ ದೃಢವಾಗಿ ನಿಂತಿದ್ದರ ಪರಿಣಾಮ ಇಂದು ದಾವಣಗೆರೆಯ ಚಿಕಟೇರಿ ಆಸ್ಪತ್ರೆ ರಾಜ್ಯದಲ್ಲೇ ಅತ್ಯಂತ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿದೆ. 

 

ಅಂದಿನ ಚಿಗಟೇರಿ ದೊಡ್ಡವರ ಪರಿಶ್ರಮದ ಕಾರಣ ಇಲ್ಲಿಯವರೆಗೆ ಆಸ್ಪತ್ರೆಯಲ್ಲಿ ಪ್ರಯೋಜನ ಪಡೆದ ರೋಗಿಗಳ ಸಂಖ್ಯೆಯ ಅಂಕಿಅಂಶ ಲೆಕ್ಕಕ್ಕೆ ಸಿಗುವುದಿಲ್ಲ ಬಿಡಿ. ಬಡವರ ಪಾಲಿಗೆ ಸಂಜೀವಿನಿಯಾಗಿರುವ ಈ ಆಸ್ಪತ್ರೆ ಎಷ್ಟೋ ನೊಂದವರ ಬದುಕಲ್ಲಿ ಮತ್ತೆ ವಸಂತ ಮೂಡಿಸಿದೆ. ಚಿಗಟೇರಿ ವಂಶದ ಈ ಕಾಣಿಕೆಯನ್ನು ಪರಿಗಣಿಸಿ, ಮೈಸೂರಿನ ಮಹಾರಾಜರು, ಚಿಗಟೇರಿ ಮುರಿಗೆಪ್ಪನವರಿಗೆ “ಧರ್ಮಪ್ರಕಾಶ” ಬಿರುದು ಕೊಟ್ಟರು. ಹಾಗೆ ಮಹಾರಾಜರು ತಮ್ಮ ಕತ್ತಿನ ಗಂಡಭೇರುಂಡ ಪದಕವಿರುವ ಬಂಗಾರದ ಸರವನ್ನು ನೀಡಿ ಗೌರವಿಸಿದ್ದರು. ಚಿಗಟೇರಿ ಮುರಿಗೆಪ್ಪನವರನ್ನು ಇಂದೇಕೆ ನೆನಪು ಮಾಡಿಕೊಳ್ಳಬೇಕೆಂದರೆ, ಕೊರೋನ ಸಾಂಕ್ರಾಮಿಕ ಸಂದರ್ಭದಲ್ಲಿ ಇವರು ಕಟ್ಟಿಸಿದ ಆಸ್ಪತ್ರೆಯಲ್ಲಿ ಸಾವಿರಾರು ಕೋವಿಡ್ ರೋಗಿಗಳು, ಆರೋಗ್ಯ ಸೇವೆ ಪಡೆದು ಗುಣಮುಖರಾದರು. ಆದರೆ ಅದೇ ಆಸ್ಪತ್ರೆಯಲ್ಲಿ ಹಲವರು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ವೈದ್ಯಾಧಿಕಾರಿಗಳು ಹಾಗೂ ದುರಾಡಳಿತ ವ್ಯವಸ್ಥೆಯಿಂದ ಇಹಲೋಕ ತ್ಯಜಿಸಿದರು. ಅಂದು ಲೋಕಕಲ್ಯಾಣಾರ್ಥ ಜನ ಸೇವೆಗೆ ನಿಸ್ವಾರ್ಥ ಮನೋಭಾವದಿಂದ ಕಟ್ಟಿದ ಆಸ್ಪತ್ರೆಯು ಇಂದು ಧನಧಾಹಿಗಳ ದಾಹಕ್ಕೆ ಸಿಲುಕಿ ನಲುಗಿತ್ತಿದೆ. ಚಿಗಟೇರಿ ಆಸ್ಪತ್ರೆಯ ಕರ್ಮಕಾಂಡಗಳು ಬರೆದಷ್ಟೂ ಬಯಲಾಗುತ್ತಲೇ ಇವೆ.  

 

ಚಿಗಟೇರಿ ಸಾರ್ವಜನಿಕ ಆಸ್ಪತ್ರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರ್ವರಿಗೂ ಆರೋಗ್ಯ ಸೇವೆ, ಒದಗಿಸುವ ಸಂಯೋಜಿತ ಯೋಜನೆಯೊಂದಿಗೆ, ವಾಜಪೇಯಿ ಆರೋಗ್ಯಶ್ರೀ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಯೋಜನೆಯಲ್ಲಿ ಬಿ.ಪಿ.ಎಲ್. ಪಡಿತರ ಹೊಂದಿದ ಫಲಾನುಭವಿಗಳಿಗೆ, ಸಾರ್ವಜನಿಕ ಆಸ್ಪತ್ರೆ ಹಾಗೂ ಸರ್ಕಾರದಿಂದ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಲು ಸೌಕರ್ಯ ಹೊಂದಿದೆ. ಆದರೆ, ಸರ್ಕಾರಿ ಆಸ್ಪತ್ರೆಗಳ ಜಿಲ್ಲಾ ವೈದ್ಯಾಧಿಕಾರಿಗಳು ಕರ್ನಾಟಕ ಆರೋಗ್ಯ ಜಿಲ್ಲಾ ಸಂಯೋಜಕರ ಕರ್ತವ್ಯ ನಿರತ ವೈದ್ಯರ ಸಿಬ್ಬಂದಿಗಳ ನಿರ್ಲಕ್ಷ್ಯ ಮನೋಭಾವ ಮತ್ತು ದುರುಳರ ಧನದಾಹಕ್ಕೆ ಅದೆಷ್ಟು ಬಡ ರೋಗಿಗಳು, ಲಕ್ಷಾಂತರ ರೂಪಾಯಿ ಸಾಲ ಸೂಲ ಮಾಡಿ ಚಿಕಿತ್ಸೆ ಪಡೆದು ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಣ ಉಳಿಸಿಕೊಂಡರೆ, ಹಲವರು ಚಿಕಿತ್ಸೆಗೆ ಹಣ ಹೊಂದಿಸದೇ ಇತ್ತ ಕಡೇ ಸರ್ಕಾರಿ ಸೌಲಭ್ಯ ಸಮಯಕ್ಕೆ ಸಿಗದೇ ಪ್ರಾಣ ಬಿಟ್ಟ ಸಾಕಷ್ಟು ಉದಾಹರಣೆಗಳಿವೆ. 

 

ಇಂತಹ ಧನದಾಹಿ ನಿರ್ಲಕ್ಷ್ಯ ಅಧಿಕಾರಿಗಳ ದುಡ್ಡಿನ ದಾಹಕ್ಕೆ ಒಂದು ಜೀವಂತ ಉದಾಹರಣೆಯೇ ಭದ್ರಾವತಿ ತಾಲ್ಲೂಕು, ಸಿಂಗನಮನೆ, ಗ್ರಾಮದ ಅಲ್ಲಾಭಕ್ಷಿ ಎನ್ನುವ ರೋಗಿಯ ಕಥೆ. ಕಳೆದ ವರ್ಷ ನವೆಂಬರ್‌ ೨೬ರಂದು ತೀವ್ರ ಉಸಿರಾಟದ ತೊಂದರೆಯಿಂದ ಬೆಳಗಿನ ಜಾವ, ೩ ಗಂಟೆಗೆ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು ಅಲ್ಲಾಭಕ್ಷ್. ಚಿಕಿತ್ಸೆ ಪಡೆದುಕೊಳ್ಳುತ್ತಿರುವಾಗ, ಇಲ್ಲಿನ ವೈದ್ಯಕೀಯ ಸಿಬ್ಬಂದಿಗಳು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುರ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದುಕೊಳ್ಳಿ. ನಮ್ಮ ಆಸ್ಪತ್ರೆಯಲ್ಲಿ ಆಮ್ಲಜನಕದ ಸೌಲಭ್ಯವಿಲ್ಲ ಎಂದು ರೆಫರಲ್‌ಗೆ ಕಾರಣ ನೀಡಿ ಬೆಳಗಿನ ಜಾವ ೫:೩೦ಕ್ಕೆ ಡಿಸ್‌ಛಾರ್ಜ್ ಮಾಡಿದರು. ಅಲ್ಲಿಂದ ನಗರದ ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಗೆ ರೋಗಿಯನ್ನು ಕರೆತಂದು, ತುರ್ತು ನಿಗಾ ಘಟಕದಲ್ಲಿ ತಪಾಸಣೆಗೆ ಸೂಚಿಸಿ, ಜಿಲ್ಲಾ ಆಸ್ಪತ್ರೆಯಿಂದ ನೀಡಿದ ರೆಫರಲ್ ಶಿಫಾರಸ್ಸು ತೋರಿಸಿದರೆ, ನಮ್ಮ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಅಡಿಯಲ್ಲಿ ವೈದ್ಯಕೀಯ ಸೇವೆ ಸಿಗುವುದಿಲ್ಲ. ಇವರಿಗೆ ತೀವ್ರ ಉಸಿರಾಟದ ತೊಂದರೆ ಇದ್ದು, ಕೋವಿಡ್ ಚಿಕಿತ್ಸೆ ನೀಡಲು ಒಂದು ದಿನಕ್ಕೆ ಸರಿ ಸುಮಾರು ೪೦ ರಿಂದ ೫೦ ಸಾವಿರ ರೂಪಾಯಿಗಳು ಸಂದಾಯ ಮಾಡಿದರೆ ಚಿಕಿತ್ಸೆ ನೀಡುತ್ತೇವೆ ಎಂದು ಎಸ್.ಎಸ್.ಐ.ಎಂ.ಎಸ್.ನ ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿಗಳು ಹೇಳಿಬಿಟ್ಟರು. 

 

ರೋಗಿಯ ಕುಟುಂಬದವರು ಆಯುಷ್ಮಾನ್ ಭಾರತ್ ಅಡಿಯಲ್ಲಿ ಕೋವಿಡ್‌ಗೆ ಉಚಿತ ಚಿಕಿತ್ಸೆ ಇದೆ. ನಮಗೆ ಸೌಲಭ್ಯದ ಅಡಿಯಲ್ಲಿ ಚಿಕಿತ್ಸೆ ನೀಡಿ ಎಂದು ಕೇಳಿದರೆ, ನಿಮ್ಮ ರೋಗಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ ಜೀವಕ್ಕೆ ಅಪಾಯವಾಗಬಹುದು ಎಂದು ಹೆದರಿಸಲಾಯಿತು. ರೋಗಿಯ ಜೀವ ಉಳಿಸಲು ರೋಗಿಯ ಸಂಬಂಧಿಕರು, ಅನ್ಯಮಾರ್ಗವಿಲ್ಲದೆ, ಒಳರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದರು. ಆ ಒಂದು ದಿನಕ್ಕೆ ಆಸ್ಪತ್ರೆಯ ವೆಚ್ಚ ಔಷಧೋಪಚಾರ ಸೇರಿ ಸುಮಾರು ೪೦ ಸಾವಿರ ರೂಪಾಯಿಯಾಗಿತ್ತು. ಅದೇ ದಿನ ಬೆಳಿಗ್ಗೆ ಸುಮಾರು ೧೧ ಗಂಟೆಗೆ, ಆರೋಗ್ಯ ಮಿತ್ರರನ್ನು ಸಂಪರ್ಕಿಸಿ, ರೋಗಿ ಬಿ.ಪಿ.ಎಲ್. ಫಲಾನುಭವಿ, ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ತೋರಿಸಲಾಗಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಪತ್ರ ನೀಡಿದ್ದರಿಂದ ಈ ಆಸ್ಪತ್ರೆಯಲ್ಲಿ ದಾಖಲು ಮಾಡಲು ಬಂದರೆ ಇಲ್ಲಿನ ಸಿಬ್ಬಂದಿ, ಬಿ.ಪಿ.ಎಲ್.ನಲ್ಲಿ ಸೌಲಭ್ಯವಿಲ್ಲ ಎಂದಿದ್ದಾರೆ. ಆ ದಿನ ಕರ್ತವ್ಯದಲ್ಲಿದ್ದ ಆರೋಗ್ಯಮಿತ್ರ ಸಿಬ್ಬಂದಿ ಶ್ರೀಮತಿ ಶಶಿಕಲಾರವರಿಗೆ ಈ ಸಂಗತಿ ತಿಳಿಸಿದರೆ ಅವರು ಸಹ ಈ ಸೌಲಭ್ಯ ಖಾಸಗಿ ಆಸ್ಪತ್ರೆಯಲ್ಲಿ ಇಲ್ಲ ಎಂದಿದ್ದಾರೆ. ಆದರೆ ಅದೇ ದಿನ ಸಂಜೆ ೬ ಗಂಟೆಗೆ ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯ ಸಿಬ್ಬಂದಿಗಳು ನಿಮ್ಮ ರೋಗಿಯು ಚೇತರಿಸಿಕೊಳ್ಳುತ್ತಿದ್ದು, ರೋಗಿಯನ್ನು ಐ.ಸಿ.ಯು.ಗೆ ಶಿಫ್ಟ್ ಮಾಡುತ್ತೇವೆ, ಇಲ್ಲಿಯ ತನಕ ವೈದ್ಯಕೀಯ ವೆಚ್ಚವನ್ನು ಕಟ್ಟಿಬನ್ನಿ ಎಂದು ೧೭,೪೨೭ರ ಮೊತ್ತ ಪಾವತಿಸಿಲು ಸೂಚಿಸಿದ್ದಾರೆ. ಸಂದಾಯ ಮಾಡಿದ ನಂತರ ಇನ್ನು ಮುಂದೆ ಐ.ಸಿ.ಯು. ಹಾಗೂ ಕೋವಿಡ್ ವಾರ್ಡ್‌ನಲ್ಲಿ ಶಿಫಾರಸ್ಸು ಪತ್ರದಲ್ಲಿ ನಿಮಗೆ ಉಚಿತ ಚಿಕಿತ್ಸೆ ಸಿಗುತ್ತದೆ ಎಂದು ಅದೇ ೨೬ರ ಸಂಜೆ, ಆಯುಷ್ಮಾನ್ ಯೋಜನೆ ಅಡಿಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಅಲ್ಲಿಂದ ೨೫ ಡಿಸೆಂಬರ್‌ರವರೆಗೆ ಅಂದರೆ ಸುಮಾರು ೩೦ ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ, ಡಿಸ್‌ಛಾರ್ಜ್ ಆದರು ಅಲ್ಲಾಭಕ್ಷಿ.

ಇಷ್ಟಾಯಿತಲ್ಲ ನಂತರ ೬ ಜನವರಿ ೨೦೨೧ರಂದು ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕಾಳಪ್ಪನವರಿಗೆ ಹಾಗೂ ೧೧ ಜನವರಿ ೨೦೨೧ರಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಜಿಲ್ಲಾ ಸಂಯೋಜಕರಾದ ಶ್ರೀಮತಿ ಡಾ. ನಂದಿನಿಯವರಿಗೆ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರ ಬರೆದು ತಮ್ಮ ಕಷ್ಟ ಹೇಳಿಕೊಂಡರು ಅಲ್ಲಾಭಕ್ಷ್.‌ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆಗೆ ಅರ್ಹರಿದ್ದರೂ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸ್ಸು, ಇದ್ದರೂ ನಮ್ಮಿಂದ ಹಣ ಸಂದಾಯ ಮಾಡಿಸಿಕೊಂಡಿದ್ದಾರೆ. ಆದ ಕಾರಣ ಉಚಿತ ಚಿಕಿತ್ಸೆಗೆ ಅರ್ಹರಿದ್ದರೂ ವೈದ್ಯಕೀಯ ಚಿಕಿತ್ಸೆಗೆಂದು ಔಷದೋಪಚಾರದ ಒಟ್ಟು ಮೊತ್ತ ೩೧,೭೨೭ ರೂಪಾಯಿಗಳನ್ನು ಮರುಪಾವತಿಸಬೇಕೆಂದು ಲಿಖಿತವಾಗಿ ಕೇಳಿಕೊಂಡಿದ್ದಾರೆ ಅಲ್ಲಾಭಕ್ಷ್. ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ೦೯ ಜನವರಿಯಂದು ಉತ್ತರ ಬರೆದು, ನೀವು ನೀಡಿದ ಅರ್ಜಿಯ ಮೂಲಕ ಮಾಹಿತಿ ಪಡೆದು ಆಸ್ಪತ್ರೆಯ ದಾಖಲಾತಿಯನ್ನು ಪರಿಶೀಲಿಸಲಾಗಿ, ಅಲ್ಲಾಭಕ್ಷಿ ಯವರು ಐ.ಪಿ. ಸಂಖ್ಯೆ: ೨೦೧೨೬೦೦೧೦ ಒಳರೋಗಿಯಾಗಿ ದಾಖಲಾಗಿದ್ದು, ಅಲ್ಲಾಭಕ್ಷಿಯವರ ಮಗ ಸಯ್ಯದ್ ರಫೀಕ್ ನೀಡಿರುವ ಮಾಹಿತಿಯ ಆಧಾರದ ಮೇಲೆ ಅಂದು ಆಸ್ಪತ್ರೆಯ ಒಳರೋಗಿಯಾಗುವ ಮುನ್ನ ನಮ್ಮಲ್ಲಿ ಯಾವುದೇ ಬಿ.ಪಿ.ಎಲ್. ಕಾಡ್ ಅಥವಾ ಎ.ಪಿ.ಎಲ್. ಕಾರ್ಡ್ ಇರುವುದಿಲ್ಲವೆಂದು ಪ್ರಮಾಣಪತ್ರದಲ್ಲಿ ಸಹಿ ಮಾಡಿಕೊಟ್ಟಿದ್ದಾರೆ ಹಾಗೂ ಎಲ್ಲಾ ವೈದ್ಯಕೀಯ ವೆಚ್ಚವನ್ನು ಹಣದ ಮೂಲಕ ಸಂದಾಯ ಮಾಡುತ್ತೇನೆ ಎಂದು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ. ಆದ್ದರಿಂದ ತಾವು ಕಟ್ಟಿದ ಹಣವನ್ನು ಹಿಂತಿರುಗಿಸಲು ನಮ್ಮಲ್ಲಿ ಯಾವುದೇ ಸೌಲಭ್ಯವಿಲ್ಲ ಎಂದು ಲಿಖಿತವಾಗಿ ದೂರು ನೀಡಿದ ಅರ್ಜಿಯ ಜೊತೆಗೆ ಹಿಂಬರಹ ನೀಡಿದ್ದಾರೆ.  

ಎಸ್.ಎಸ್.ಐ.ಎಂ.ಎಸ್.ನ ವೈದ್ಯಕೀಯ ನಿರ್ದೇಶಕರು ನೀಡಿದ ಹಿಂಬರಹವನ್ನು ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್‌ನ ಜಿಲ್ಲಾ ಸಂಯೋಜಕರಾದ ಶ್ರೀಮತಿ ನಂದಿನಿಯವರಿಗೆ ನೀಡಿ, ಉಚಿತ ಚಿಕಿತ್ಸೆಗೆ ಅರ್ಹರಿದ್ದರೂ ಸಹ ನಮ್ಮಿಂದ ಹಣ ಪಾವತಿಸಿಕೊಂಡ ಆಸ್ಪತ್ರೆಯವರಿಂದ ನಮ್ಮ ಹಣ ಮರುಪಾವತಿ ಮಾಡಿಕೊಡಿ ಎಂದು ಲಿಖಿತ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಅನಗತ್ಯವಾಗಿ ಹಣ ಪಾವತಿ ಮಾಡಿಸಿಕೊಂಡು ಚಿಕಿತ್ಸೆ ನೀಡಿದ ಆಸ್ಪತ್ರೆಯ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಎಸ್.ಎಸ್.ಐ.ಎಂ.ಎಸ್. ಆಸ್ಪತ್ರೆಗೆ ಸರ್ಕಾರದಿಂದ ಬಿಡುಗಡೆಯಾದ ಹಣದಲ್ಲಿ ಇವರು ನಮ್ಮ ವೈದ್ಯಕೀಯ ವೆಚ್ಚವನ್ನು ಮರುಪಾವತಿಸದೇ, ಕಾಲಹರಣ ಮಾಡುತ್ತಿದ್ದಾರೆ. ರೋಗಿಯ ಸಂಬಂಧಿಗಳು, ಹಲವು ಬಾರಿ ಜಿಲ್ಲಾ ಸಂಯೋಜಕರ ಕಛೇರಿಗೆ ಅಲೆದಾಡಿ ನೀವು ನಾವು ನೀಡಿದ ದೂರಿಗೆ ಯಾವುದೇ ಕ್ರಮ ಕೈಗೊಳ್ಳದೇ ದೂರಿಗೆ ಉತ್ತರ ನೀಡಿಲ್ಲ. ಹಣ ಮರುಪಾವತಿಯ ಬಗ್ಗೆ ಯಾವುದೇ ತರಹದ ಕ್ರಮ ಕೈಗೊಂಡಿಲ್ಲ. 

 

ನಾವು ಸಲ್ಲಿಸಿದ ಅರ್ಜಿಗೆ ಲಿಖಿತವಾಗಿ ಉತ್ತರ ಕೊಡಿ ಎಂದು ಕೇಳಿದರೆ, ನಾನು ಉತ್ತರಿಸಲು ಸಾಧ್ಯವಿಲ್ಲ ರೋಗಿಯ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲು ಸಧ್ಯಕ್ಕೆ ಆಗುವುದಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು, ಸಭೆ ನಡೆಸಿ ಸಭೆಯಲ್ಲಿ ತೀರ್ಮಾನಿಸಿ, ಕ್ರಮ ಜರುಗಿಸುತ್ತೇವೆ ನಿಮಗೊಬ್ಬರಿಗೆ ಸಭೆ ನಡೆಸಲು ಸಾಧ್ಯವಿಲ್ಲ. ಅಧಿಕಾರಿಗಳ ಸಭೆಯಿದ್ದಾಗ ಅಲ್ಲೇ ನಿಮ್ಮ ಅರ್ಜಿ ವಿಚಾರಣೆ ನಡೆಸಿ, ನಿಮಗೆ ತಿಳಿಸುತ್ತೇವೆ. ಅಲ್ಲಿಯವರೆಗೆ ಕಾಯುವುದಾದರೆ ಕಾಯಿರಿ, ಇಲ್ಲದಿದರೇ ನೀವು ಯಾರಿಗೆ ದೂರು ನೀಡುತ್ತೀರೋ ನೀಡಿ ಎಂದು ಉದ್ದಟತನದಿಂದ ಉತ್ತರಿಸುತ್ತಾರೆ ಸಂಬಂಧ ಪಟ್ಟ ಅಧಿಕಾರಿ ಮಹಾಶಯರು. ಇಂತಹ ಬೇಜವಬ್ದಾರಿ ವರ್ತನೆ ಹಾಗೂ ಧನದಾಹಿ ಅಧಿಕಾರಿಗಳ ಹೊಣೆಗೇಡಿ ನಡವಳಿಕೆ ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದೇ ಮೊದಲಲ್ಲ.  ಇಂತಹ ಅನೇಕ ದೂರುಗಳು ಆಸ್ಪತ್ರೆಯ ಸ್ಟೋರ್ ರೂಮಿನಲ್ಲಿ ಧೂಳು ಹಿಡಿಯುತ್ತವೆ. ದೂರುದಾರರು ಎಷ್ಟು ದಿನ ಅಂತ ಇವರುಗಳ ಕಛೇರಿಗಳಿಗೆ ಚಪ್ಪಲಿ ಸವೆಸುತ್ತಾರೆ ಹೇಳಿ? ಕೊನೆಗೊಂದು ದಿನ ಅಲೆದಾಡಿ ಅಲೆದಾಡಿ, ಇಂತಹವರ ಸಹವಾಸವೇ ಬೇಡ ಎಂದು ಸುಮ್ಮನಾಗಿ ಬಿಡುತ್ತಾರೆ. ಆದರೆ ಅಲ್ಲಾಭಕ್ಷಿ ಕಡೆಯವರು ಸುಮ್ಮನಿಲ್ಲ. ಲಂಚಕೋರ ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕು ತಮಗಾದ ಅನ್ಯಾಯ ಬೇರೆ ಯಾವ ರೋಗಿಗಳಿಗೂ ಆಗಬಾರದು ಎಂದು ಪಣತೊಟ್ಟು ನಿಂತರು. ವಿಪರ್ಯಾಸವೇನೆಂದರೆ, ಇಷ್ಟೆಲ್ಲಾ ಅನಾಚಾರ ಅಕ್ರಮ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರದಿಂದ ನೊಂದಾಯಿತ ಆಸ್ಪತ್ರೆಗಳಲ್ಲಿ ಧನ ಪಿಪಾಸು ವೈದ್ಯಾಧಿಕಾರಿಗಳು ಬಡವರ ರಕ್ತ ಹೀರುತ್ತಿದ್ದರೂ, ಆರೋಗ್ಯ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ವೈದ್ಯಾಧಿಕಾರಿಗಳು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದರೆ ಇವರ ಸಂಪರ್ಕ ಎಷ್ಟು ದೊಡ್ಡ ಮಟ್ಟದ್ದು ಎಂದು ನೀವು ಊಹಿಸಿಕೊಳ್ಳಬಹುದು.

 

 ಈಗಲಾದರೂ ಎಚ್ಚೆತ್ತುಕೊಂಡು, ಬಡವರಿಗೆ, ನೊಂದ ಜನರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಅಡಿಯಲ್ಲಿ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಿ, ಪುಣ್ಯ ಕಟ್ಟಿಕೊಳ್ಳಿ ಇಲ್ಲದಿದ್ದರೆ, ನೊಂದ ಬಡವರ ಶಾಪ ನಿಮಗೆ ತಟ್ಟದೇ ಇರುವುದಿಲ್ಲ. ಇಂತಹ ಬಡವರಿಗಾಗಿ ಉಚಿತ ಚಿಕಿತ್ಸೆ ಸಿಗಲಿ ಎಂಬ ಉದ್ದೇಶವನ್ನಿಟ್ಟುಕೊಂಡು ದಾನದ ಮೂಲಕ ಆಸ್ಪತ್ರೆ ನಿರ್ಮಿಸಿ ಅಮರರಾದ ಚಿಗಟೇರಿ ಮುರಿಗೆಪ್ಪನವರ ಇಂದು ಜೀವಂತವಾಗಿದ್ದಿದರೆ ನಿಮ್ಮಂತಹ ಧನಪಿಶಾಚಿಗಳ ಕೈಯಿಂದ ಆಸ್ಪತ್ರೆಯ ಆಡಳಿತವನ್ನೇ ಮುಕ್ತಿಗೊಳಿಸುತ್ತಿದ್ದರು. ಇನ್ನೂ ಕಾಲ ಮಿಂಚಿಲ್ಲ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಆ ದಿನ ಸಕಲ ಸೌಕರ್ಯಗಳಿದ್ದು, ಉತ್ತಮ ಚಿಕಿತ್ಸೆ ನೀಡಲು ಅವಕಾಶವಿದ್ದರೂ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಕರ್ತವ್ಯ ಲೋಪವೆಸಗಿದ, ಆ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಂಡು ನೊಂದ ರೋಗಿಗಳಿಗೆ ನ್ಯಾಯು ಕೊಡಿ. ಆದಷ್ಟು ಬೇಗ ಸೌಲಭ್ಯಗಳಿಂದ ವಂಚಿತರಾಗಿ ಹಣ ಪಾವತಿಸಿ ಚಿಕಿತ್ಸೆ ಪಡೆದುಕೊಂಡವರಿಗೆ ಹಣ ಮರುಪಾವತಿಸುವಂತೆ ಆದೇಶ ನೀಡಿ. ಸರ್ಕಾರಿ ಸೌಲಭ್ಯಗಳು ಅರ್ಹರಿಗೆ ಸುಲಭವಾಗಿ ದೊರೆಯುವಂತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ. ಆರೋಗ್ಯ ಸಚಿವರೇ, ಮುಖ್ಯಮಂತ್ರಿಗಳೇ, ಜಿಲ್ಲಾಧಿಕಾರಿಗಳೇ ಇಂತಹ ಭ್ರಷ್ಟ, ಅಹಂಕಾರಿ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿ, ಕಾನೂನು ಅಡಿಯಲ್ಲಿ ಕೆಲಸ ಮಾಡಿ ನೊಂದವರಿಗೆ ನೆರವು ನೀಡಿ, “ಧರ್ಮಪ್ರಕಾಶ” ಪುಣ್ಯ ಪುರುಷರಾದ ಚಿಗಟೇರಿ ಮುರಿಗೆಪ್ಪನವರು, ದಾನ ನೀಡಿದ ಆಸ್ಪತ್ರೆಯ ಮಾನ ಮರ್ಯಾದೆ ಕಾಪಾಡುವುದು ನಿಮ್ಮ ಕೈಯಲ್ಲಿದೆ.

 

-ವರದಿಗಾರ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd