ಲಂಡನ್ : ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಗೆ ಲಸಿಕೆ ಕಂಡುಹಿಡಿಯಲು ಘಟಾನುಘಟಿ ದೇಶಗಳ ವೈದ್ಯರು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಲಂಡನ್ ಮೂಲದ ಸಿಗರೇಟ್ ತಯಾರಿಕಾ ಸಂಸ್ಥೆಯೊಂದು, ತಾನು ಕೊರೊನಾ ವೈಸರ್ ಗೆ ಲಸಿಕೆ ಕಂಡು ಹಿಡಿದಿರೋದಾಗಿ ಹೇಳಿಕೊಂಡಿದೆ.
ಜಗತ್ತಿನ ಎರಡನೇ ಅತೀ ದೊಡ್ಡ ಸಿಗರೇಟ್ ಉತ್ಪಾದನಾ ಸಂಸ್ಥೆಯಾದ ಬ್ರಿಟೀಷ್ ಅಮೆರಿಕನ್ ಟೊಬ್ಯಾಕೋ ಸಂಸ್ಥೆ, ಕೊರೊನಾಗೆ ಲಸಿಕೆ ಕಂಡು ಹಿಡಿದಿದೆಯಂತೆ. ಅಲ್ಲದೆ ಲಸಿಕೆಯನ್ನು ಈಗಾಗಲೇ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗಿದ್ದು, ಮನುಷ್ಯರ ಮೇಲೆ ಪ್ರಯೋಗ ನಡೆಸಲು ಸಿದ್ಧವಾಗಿದೆ ಅಂತ ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬ್ರಿಟೀಷ್ ಅಮೆರಿಕನ್ ಟೊಬ್ಯಾಕೋ ಸಂಸ್ಥೆ, ಲ್ಯಾಬ್ ನಲ್ಲಿ ನಡೆಸಿದ ಎಲ್ಲಾ ಪ್ರಯೋಗಗಳೂ ಯಶಸ್ವಿಯಾಗಿದ್ದು, ಈ ಲಸಿಕೆ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸೋದು ದೃಢವಾಗಿದೆ. ಈಗ ಅಮೆರಿಕಾದಲ್ಲಿ ಮಾನವನ ಮೇಲೆ ಮೊದಲ ಹಂತ ಪ್ರಯೋಗ ನಡೆಸಬೇಕಿದ್ದು, ಯುನೈಟೆಡ್ ಸ್ಟೇಟ್ಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದೆ.








