ಅನುದಾನ ಕಡಿತ : ಪ್ರಧಾನಿಗೆ ಸಿಎಂ ಬಿಎಸ್ ವೈ ಪತ್ರ!
ರಾಜ್ಯಕ್ಕೆ ಅನುದಾನ ಕಡಿತಗೊಳಿಸಿರುವ ಕುರಿತಂತೆ ಸಿಎಂ ಅಸಮಾಧಾನ
ಅನುದಾನ ಬಿಡುಗಡೆ ಮಾಡುವಂತೆ ಬಿ.ಎಸ್. ಯಡಿಯೂರಪ್ಪ ಪತ್ರ
ಬೆಂಗಳೂರು : ರಾಜ್ಯಕ್ಕೆ ಅನುದಾನ ಕಡಿತಗೊಳಿಸಿರುವ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅಸಮಾಧಾನಗೊಂಡಿದ್ದು,ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 15ನೇ ಹಣಕಾಸು ಆಯೋಗದ ಲೆಕ್ಕಾಚಾರದಲ್ಲಿ ಅನುದಾನ ಹಂಚಿಕೆಯ ಮಾನದಂಡಗಳನ್ನು ಬದಲಾವಣೆ ಮಾಡಿದ್ದರಿಂದಾಗಿ ರಾಜ್ಯಕ್ಕೆ ದೊಡ್ಡ ಪ್ರಮಾಣದ ನಷ್ಟ ಆಗಲಿದೆ. 2019- 20ರ ಸಾಲಿನಲ್ಲಿ ಕೇಂದ್ರ ನೀಡಲೇಬೇಕಾಗಿದ್ದ ಮೊತ್ತದಲ್ಲಿ 17 ಸಾವಿರ ಕೋಟಿ ಕೊರತೆ ಯಾಗಲಿದೆ. ಅನುದಾನ ಹಂಚಿಕೆ ಲೆಕ್ಕದಲ್ಲಿ 8,813 ಕೋಟಿ ಕೈ ತಪ್ಪುವುದು ಖಚಿತ ಎನ್ನಲಾಗಿದೆ. ಜಿಎಸ್‌ಟಿ ಪಾಲು ನಾಲ್ಕು ಸಾವಿರ ಕೋಟಿ ಸಹ ಕೈತಪ್ಪಲಿದೆ. ಜೊತೆಗೆ ಜಿಎಸ್‌ಟಿ ಪರಿಹಾರ ಐದು ಸಾವಿರ ಕೋಟಿಯಲ್ಲಿ ಮೂರು ಸಾವಿರ ಕೋಟಿ ಸಹ ಬರುವುದು ಅನುಮಾನ. ಇದಲ್ಲದೆ ಕೇಂದ್ರ ಬಜೆಟ್‌ನ ಅಂದಾಜಿನಂತೆ 5,102 ಕೋಟಿ ರೂ ಕೊರತೆ ಯಾಗಲಿದೆ.
ರಾಜ್ಯ ಬಜೆಟ್ ಸನಿಹದಲ್ಲೇ ಇದ್ದು, ರಾಜ್ಯಕ್ಕೆ ಕಡಿತ ಮಾಡಿರುವ ಅನುದಾನದ ಮಾಹಿತಿ ನೀಡುವಂತೆ ಹಾಗೂ ಕಡಿತ ಮಾಡಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಪತ್ರದಲ್ಲಿ ಕೋರಲಾಗಿದೆ.