ರಾಜ್ಯದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಾಗಿನಿಂದಲೂ ಪಾದರಸದಂತೆ ಕಾರ್ಯ ನಿರ್ವಹಿಸುತ್ತಿದ್ದ ಸಿಎಂ ಬಿಎಸ್ ಯಡಿಯೂರಪ್ಪ, ಕೆಲ ದಿನಗಳಿಂದ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅವರ ಕಾರ್ಯಕ್ರಮಗಳೆಲ್ಲವೂ ಮೀಸಲಾಗಿವೆ. ಮುಖ್ಯಮಂತ್ರಿಗಳು ಮನೆಯಲ್ಲೇ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೆ ಕಾರಣ ಹೆಮ್ಮಾರಿ ಕೊರೊನಾ ವೈರಸ್ ಸೋಂಕು..
ಹೌದು..! ರಾಜ್ಯ ಸರ್ಕಾರವೇ ಅಧಿಕೃತವಾಗಿ ಬಿಡುಗಡೆ ಮಾಡುತ್ತಿರುವ ಹೆಲ್ತ್ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಬೆಂಗಳೂರು ನಗರವೂ ಹೊರತಾಗಿಲ್ಲ. ಜೊತೆಗೆ 60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಆದಷ್ಟು ಮನೆಯಲ್ಲಿ ಇರುವುದು ಲೇಸು ಎಂದು ಎಲ್ಲರೂ ಎಚ್ಚರಿಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ ಅತ್ಯಂತ ಚುರುಕಾಗಿ ಓಡಾಡುತ್ತಾ ಕೆಲಸಮಾಡುತ್ತಿದ್ದರು.
ಆದರೆ ಈಗ ಮುಖ್ಯಮಂತ್ರಿಗಳನ್ನು ಸದ್ಯಕ್ಕೆ ಯಾರನ್ನು ಭೇಟಿಯಾಗುತ್ತಿಲ್ಲ. ಇದಕ್ಕೆ ಕಾರಣ
ಯಡಿಯೂರಪ್ಪರ ಸಂಪುಟದ ಸಹೋದ್ಯೋಗಿಗಳನ್ನು ಹೋಂ ಕ್ವಾರೆಂಟೈನ್ ಮಾಡಿರುವುದು. ಅದರಲ್ಲೂ ಮುಖ್ಯವಾಗಿ ಸಿಎಂ ಬಿಎಸ್ ವೈ ಅವರ ವಯಸ್ಸು.. ಇನ್ನೊಂದು ರಾಜ್ಯದಲ್ಲಿ ಕೊರೊನಾ ಮಹಾಮಾರಿ ಯಾರಿಂದ ಯಾರಿಗೆ, ಹೇಗೆ, ಯಾವಾಗ ಹರಡಿಬಿಡುತ್ತೋ ಎಂಬ ಆತಂಕ. ಹೀಗೆ ಸಾಲು ಸಾಲು ಕಾರಣಗಳಿಂದ ಸಿಎಂ ಕಚೇರಿಯಿಂದಲೇ, ಯಡಿಯೂರಪ್ಪರ ಭೇಟಿಗೆ ಅವಕಾಶವಿಲ್ಲ ಎಂಬ ಮಾಹಿತಿ ರವಾನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪರಿಗೆ ವೈದ್ಯರಿಂದಲೇ ಸಲಹೆ !
ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಿಎಂ ಯಡಿಯೂರಪ್ಪರಿಗೆ ವೈದ್ಯರೇ ಬಹಳ ಸೂಕ್ತವಾದ ಸಲಹೆಗಳನ್ನು ನೀಡಿದ್ದಾರಂತೆ. ಮುಖ್ಯವಾಗಿ ಸಿಎಂ ಯಡಿಯೂರಪ್ಪರ ವಯಸ್ಸು 78 ಆಗಿದ್ದು, ಈ ವಯಸ್ಸಿನಲ್ಲಿ ಕೊರೊನಾ ವೈರಸ್ ತಗುಲಿದ್ರೆ ಅಪಾಯವಾಗುವ ಸಾಧ್ಯತೆಗಳೇ ಹೆಚ್ಚಿವೆ. ಇದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಮುಖ್ಯವಾಗಿದೆ. ಇನ್ನು ಸಿಎಂ ಯಡಿಯೂರಪ್ಪರ ಸಂಪುಟ ಸಹೋದ್ಯೋಗಿಗಳ ಪೈಕಿ ಡಿಸಿಎಂ ಡಾ. ಅಶ್ವತ್‌ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ಗೆ ಹೋಂ ಕ್ವಾರೆಂಟೈನ್ ಜಾರಿಯಾಗಿದ್ದು, ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆಯಂತೆ. ಜೊತೆಗೆ ಹೊರಗೆ ಕೊರೊನಾ ಸೋಂಕು ಹೇಗೆ ಹರಡುತ್ತದೆ ಎಂಬುದು ತಿಳಿಯಲು ಸಾಧ್ಯವಿಲ್ಲ. ನಿಮ್ಮ ವಯಸ್ಸಿಗೆ ಇಮ್ಯೂನಿಟಿ ಕೂಡ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ಸ್ವಲ್ಪ ದಿನಗಳ ಕಾಲ ಎಲ್ಲರಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂಬ ಸಲಹೆಯನ್ನು ವೈದ್ಯರೇ ನೀಡಿದ್ದಾರೆ ಎನ್ನಲಾಗಿದೆ.