ಬೆಂಗಳೂರಲ್ಲಿ ಪುಂಡರ ಪುಂಡಾಟ: ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಗೆ ಸಿಎಂ ಅಭಯ..!
ಬೆಂಗಳೂರಲ್ಲಿ ಪುಂಡರ ಪುಂಡಾಟ- ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ದುಷ್ಕರ್ಮಿಗಳು ನಿನ್ನೆ ರಾತ್ರಿ ಬೆಂಕಿ ಹಚ್ಚಿ ದಾಂದಲೆ ಮಾಡಿದ್ದರು. ಶಾಸಕರ ಅಳಿಯ ನವೀನ್ ಫೇಸ್ ಬುಕ್ ನಲ್ಲಿ ಮಾಡಿರುವಂತಹ ಒಂದು ಪೋಸ್ಟರ್ ನಿಂದ ಇಷ್ಟೆಲ್ಲಾ ರಂಪಾಟಕ್ಕೆ ಕಾರಣವಾಗಿದೆ.
ಆದ್ರೆ ಇದು ಫೇಸ್ ಬುಕ್ ಪೋಸ್ಟ್ ಒಂದು ನೆಪವಾಗಿದೆಯಷ್ಟೇ. ಇದರ ಹಿಂದಿನ ಉದ್ದೇಶವೇ ಬೇರೆನೇ ಇದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಯಾಕಂದ್ರೆ ನವೀನ್ ಪೋಸ್ಟ್ ಅನ್ನು ಮುಂದಿಟ್ಟುಕೊಂಡು ಶಾಸಕರ ಮನೆಗೆ, ಕೆ.ಜಿ.ಹಳ್ಳಿ ಪೊಲೀಸ್ ಸ್ಟೇಷನ್‍ಗೆ ಬೆಂಕಿ ಹಚ್ಚಿರುವುದು, ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡಿರುವುದನ್ನ ನೋಡಿದಾಗ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಇನ್ನು ಈ ಗಲಭೆಯ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪನವರು ಪುಲಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ನಿಮ್ಮ ಜೊತೆ ನಾವಿದ್ದೇವೆ. ಧೈರ್ಯವಾಗಿರಿ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಗಲಭೆ ಸೃಷ್ಟಿಸಿದವರನ್ನು ಈಗಾಗಲೇ ಬಂಧಿಸಲಾಗಿದೆ. ನೀವು ಭಯಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದು ಅಖಂಡ ಶ್ರೀನಿವಾಸ್ ಮೂರ್ತಿಯವರಿಗೆ ಸಿಎಂ ಅಭಯ ನೀಡಿದ್ದಾರೆ.
ಹಾಗೇ ನಿಮ್ಮ ಕ್ಷೇತ್ರದಲ್ಲಿ ಕಾಪಾಡಿಕೊಳ್ಳಲು ನೀವು ಜನರಲ್ಲಿ ಮನವಿ ಮಾಡಿಕೊಳ್ಳಿ ಎಂದು ಬಿಎಸ್ ವೈ ಅಖಂಡ ಶ್ರೀನಿವಾಸ್ ಮೂರ್ತಿಯವರಿಗೆ ಹೇಳಿದ್ದಾರೆ. ಬಿಎಸ್‍ವೈ ದೂರವಾಣಿ ಮೂಲಕ ಅಖಂಡ ಶ್ರೀನಿವಾಸ್ ಮೂರ್ತಿ ಜೊತೆ ಮಾತನಾಡಿದ್ದಾರೆ. ಅಲ್ಲದೆ ಕಂದಾಯ ಸಚಿವ ಆರ್. ಅಶೋಕ್ ಕೂಡ ಮಧ್ಯಾಹ್ನದ ವೇಳೆ ಶ್ರೀನಿವಾಸ್ ಮೂರ್ತಿ ಜೊತೆ ಮಾತನಾಡಲಿದ್ದಾರೆ.