ರಾಜಾಹುಲಿಯ ಮರಿಯನ್ನು ಬಚಾವ್ ಮಾಡಲು “ಇಂದ್ರ”ಜಾಲದ ಕರಾಮತ್ತೇ?
ಕಳೆದೊಂದು ವಾರದಿಂದ ನಮ್ಮ 24/7 ಸುದ್ದಿವಾಹಿನಿಗಳಲ್ಲಿ ಒಂದೇ ವರಾತ. ಅದೇ ಸ್ಯಾಂಡಲ್ ವುಡ್ ನೊಳಗೆ ಡ್ರಗ್ಸ್ ದಂಧೆ. ಬೆಳಗ್ಗಿನಿಂದ ನಟ್ಟ ನಡುರಾತ್ರಿಯವರೆಗೂ ಕನ್ನಡ ಚಿತ್ರರಂಗದ ನಟನಟಿಯರ ಮಾದಕ ಡ್ರಗ್ಸ್ ಜಾಲದ ಸರ್ಪ ಸುಳಿ, ಯಾರು ಇನ್ ಯಾರು ಔಟ್? ಯಾರಿಗೆ ಸಿಸಿಬಿ ನೋಟೀಸ್? ಯಾರು ವಿಚಾರಣೆಗೆ ಹಾಜರ್? ಯಾರು ಎಸ್ಕೇಪ್? ವಿಚಾರಣೆಯಲ್ಲಿ ಯಾರು ಯಾರಿಗೆ, ಹೇಗೆ, ಎಷ್ಟು ಹೊತ್ತು ಡ್ರಿಲ್? ಯಾರ ಬಾಯಲ್ಲಿ ಯಾರ ಹೆಸರು ಹೊರಗೆ ಬಂತು? ಇದೆಲ್ಲದರ ಹಿಂದೆ ಯಾರಿದ್ದಾರೆ? ವಗೈರೆ ವಗೈರೆ..
ಇದೆಲ್ಲಾ ಹೇಗೆ ಶುರುವಾಯ್ತು ಎನ್ನುವುದನ್ನು ಕ್ಲುಪ್ತವಾಗಿ ನೋಡಿ ಬರೋಣ. ಸುಶಾಂತ್ ಸಿಂಗ್ ರಜಪೂತ್ ಅವರ ಅನುಮಾನಾಸ್ಪದ ಆತ್ಮಹತ್ಯೆಯ ಕುರಿತಾಗಿ ಸಿಬಿಐ ವಿಚಾರಣೆ ಸಂದರ್ಭದಲ್ಲಿ, ಸುಶಾಂತ್ ಸಿಂಗ್ ಮ್ಯಾನೇಜರ್ ಶೃತಿ ವಿಚಾರಣೆಯಾಯಿತು. ಆಗ ಹೊರಬಿದ್ದ ಹೆಸರು ಇಮ್ತಿಯಾಜ್ ಖಾತ್ರಿ. ಯಾರು ಈ ಇಮ್ತಿಯಾಜ್ ಖಾತ್ರಿ? ಇವನಿಗೂ ನಟ ಸಲ್ಮಾನ್ ಖಾನ್ ಗೂ ಮತ್ತು ನಟಿ ಸುಷ್ಮಿತಾ ಸೇನ್ ಗೂ ನಡುವೆ ಇದ್ದ ವ್ಯವಹಾರವೇನು? ಸಂಬಂಧವೇನು? ಎನ್ನುವ ಆಯಾಮದಲ್ಲಿ ತನಿಖೆ ಶುರುಮಾಡಿದಾಗ ಹೊರಬಿದ್ದ ಗಾಬರಿ ಹುಟ್ಟಿಸುವ ಅಂಶವೇ ಬಾಲಿವುಡ್ ಅಂಗಳದಲ್ಲಿ ಡ್ರಗ್ಸ್ ದಂಧೆ.
ಇದೇ ತನಿಖೆಯನ್ನು ಮತ್ತಷ್ಟು ವಿಸ್ತಾರವಾಗಿ, ವಿಸ್ತೃತವಾಗಿ ನಡೆಸಿದಾಗ ಕನ್ನಡ ಚಿತ್ರರಂಗದ ಕೆಲವು ನಟ ನಟಿಯರು ಸಂಗೀತ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ ಅನ್ನುವ ಸೂಚನೆ ತನಿಖಾಧಿಕಾರಿಗಳಿಂದ ಹೊರಬಿತ್ತು. ಅಲ್ಲಿಯವರೆಗೂ ತೆಪ್ಪಗೆ ತನ್ನ ಪಾಡಿಗೆ ತಾನು ನಿರುದ್ಯೋಗಿಯಂತಿದ್ದ ಒಬ್ಬ ಮಹಾನುಭಾವ ಇಲ್ಲೊಂದು ಬಾಂಬ್ ಸಿಡಿಸಿಬಿಟ್ಟರು. ಅವರು ಕನ್ನಡದ ಹೆಸರಾಂತ ಪತ್ರಕರ್ತ ಹಾಗೂ ಸಾಹಿತಿಯ ಪುತ್ರರತ್ನ. ಆಗಾಗ ಒಂದಷ್ಟು ವಿವಾದ ಸೃಷ್ಟಿಸಿಕೊಂಡು ಸುದ್ದಿಯ ಮುನ್ನೆಲೆಗೆ ಬಂದು ತನ್ನನ್ನು ತಾನು ಪತ್ರಕರ್ತ ಸಂಪಾದಕ ಎಂದು ಕರೆದುಕೊಳ್ಳುತ್ತಿದ್ದರು. ಜೊತೆಗೆ ಅಷ್ಟಿಷ್ಟು ಕನ್ನಡ ಚಿತ್ರಗಳಲ್ಲಿ ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಕಾಣಿಸಿಕೊಂಡಿದ್ದಾರೆ. ಆ ಮಹಾಶಯರ ಹೆಸರು ಹೆಸರು ಇಂದ್ರಜಿತ್ ಲಂಕೇಶ್..
ಯಾವಾಗ ಇಂದ್ರಜಿತ್ ಲಂಕೇಶ್, ಅಕಾಲಿಕವಾಗಿ ಅಗಲಿದ ಚಿರಂಜೀವಿ ಸರ್ಜಾ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬರ್ಥದಲ್ಲಿ ಮಾತನಾಡಿದರೋ , ಆಗಲೇ ಇಡೀ ಚಿತ್ರರಂಗ, ಸರ್ಜಾ ಕುಟುಂಬದ ಆಪ್ತರು, ಅಭಿಮಾನಿಗಳು, ದೊಡ್ಡವರು ಗಣ್ಯರಾದಿಯಾಗಿ ಮುನಿಸಿಕೊಂಡರು. ಆಗ ಏಕಾಏಕಿ ಉದ್ಭವಗೊಂಡ ಮತ್ತೊಬ್ಬ ಅವತಾರ ಪುರುಷ ಕನ್ನಡ ಚಿತ್ರರಂಗದ ವಿತರಕ ಎಂದು ಹೇಳಿಕೊಳ್ಳುವ ಉದ್ಯಮಿ ಪ್ರಶಾಂತ್ ಸಂಬರ್ಗಿ. ತನ್ನನ್ನು ತಾನು ಸರ್ಜಾ ಕುಟುಂಬ ಆಪ್ತ ಸ್ನೇಹಿತ ಅಂತ ಕ್ಲೈಮ್ ಮಾಡಿಕೊಂಡಿದ್ದ ಸಂಬರ್ಗಿ. ಯಾರು ಈ ಪ್ರಶಾಂತ್ ಸಂಬರ್ಗಿ? ಆಗಾಗ ಒಂದಷ್ಟು ಸಣ್ಣಪುಟ್ಟ ಚಿತ್ರಗಳನ್ನು ವಿತರಿಸಿದ್ದು ನಿಜ. ಆದರೆ ಪ್ರಶಾಂತ್ ಸಂಬರ್ಗಿ ಸುದ್ದಿಯಂಗಳಕ್ಕೆ ಬಂದಿದ್ದು ಬಾಹುಬಲಿ ಚಿತ್ರ ವಿತರಣೆಯ ಸಂದರ್ಭದಲ್ಲಿ. ಆನಂತರ ಆಗೀಗ ಸುದ್ದಿ ವಾಹಿನಿಗಳಲ್ಲಿ ಬಿಜೆಪಿ ವಕ್ತಾರನಾಗಿ ಡಿಬೇಟ್ ಗಳಲ್ಲಿ ಕಾಣಿಸಿಕೊಂಡರು. ಅವರಿಗೂ ಈ ಡ್ರಗ್ಸ್ ಜಾಲದ ವಿವಾದಕ್ಕೂ ಅದೇನು ಸಂಬಂಧವೋ ಕಾಣೆ. ಈ ಮೂರ್ನಾಲ್ಕು ದಿನಗಳಲ್ಲಿ ಡ್ರಗ್ಸ್ ಜಾಲದ ವಿಚಾರಣೆ ನಡೆಸುತ್ತಿರುವ ಸಿಸಿಬಿಯ ಸಂದೀಪ್ ಪಾಟೀಲ್ ಗಿಂತ ಹೆಚ್ಚಿನ ಮೀಡಿಯಾ ಅಟೆನ್ಷನ್ ಪ್ರಶಾಂತ್ ಸಂಬರ್ಗಿಗೆ ಸಿಕ್ಕಿದ್ದಂತೂ ನಿಜ.
ಫೈನ್! ಡ್ರಗ್ಸ್ ರಹಿತ ಸಮಾಜ ನಿರ್ಮಾಣಕ್ಕೆ ಪ್ರಶಾಂತ್ ಸಂಬರ್ಗಿಯವರಾಗಲೀ ಅಥವಾ ಇಂದ್ರಜಿತ್ ಲಂಕೇಶ್ ಆಗಲೀ ಪ್ರಾಮಾಣಿಕವಾಗಿ ಹೋರಾಡುತ್ತಾರಾದರೇ ನಿಜಕ್ಕೂ ಅದು ಸ್ವಾಗತಾರ್ಹ! ಹಾಗಂತ ಇವರು ಹೇಳುತ್ತಿರುವುದನ್ನೆಲ್ಲಾ ಏಕಪಕ್ಷೀಯವಾಗಿ ಒಪ್ಪಿಕೊಂಡರೇ ನಾವು ಪತ್ರಕರ್ತರು; ವೃತ್ತಿಗೆ ದ್ರೋಹ ಬಗೆದಂತೆ. ಬಾಲಿವುಡ್ ಅಂಗಳದಲ್ಲಿ ಡ್ರಗ್ಸ್ ಹರಿವು ಇದೇ ಹೊಸತಲ್ಲ. ಸಂಜಯ್ ದತ್ ತಾನು ಡ್ರಗ್ ಅಡಿಕ್ಟ್ ಎಂದು ಖುದ್ದಾಗಿ ಒಪ್ಪಿಕೊಂಡಿದ್ದ. ಎಲ್ಲಿಯ ತನಕ ಡಾನ್ ದಾವೂದ್ ಇಬ್ರಾಹಿಂ ಕಪಿ ಮುಷ್ಟಿಯಲ್ಲಿ ಬಿ ಟೌನ್ ಇತ್ತೋ, ಆಗ ಡ್ರಗ್ಸ್ ಹರಿವು ಸರ್ವೇ ಸಾಮಾನ್ಯವಾಗಿತ್ತು. ಆನಂತರದ ದಿನಗಳಲ್ಲೂ ಅದರ ಸುದ್ದಿ ಕಮ್ಮಿಯಾಗಿತ್ತೇ ವಿನಃ ಹಾವಳಿಯೇನಲ್ಲ. ಗಾಂಜಾ ಅಲ್ಲಿಯೂ- ಇಲ್ಲಿಯೂ ಅತಿ ಸಾಧಾರಣ ಸಂಗತಿ. ಇನ್ನು ಕನ್ನಡ ಚಿತ್ರರಂಗದ ಗಣ್ಯರಲ್ಲೂ ಗಾಂಜಾ ಆಗಲೀ ಮತ್ತೊಂದಾಗಲೀ ಇಲ್ಲವೇ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಅವರ ಸಂಖ್ಯೆ ತೀರಾ ಕಡಿಮೆ.
ಈಗ ಆರೋಪಕ್ಕೆ ತುತ್ತಾಗಿರುವ ರಾಗಿಣಿಯೋ, ಸಂಜನಾ ಗಲ್ರಾನಿಯೋ ಅಥವಾ ಆ ತರಹದ ಒಂದಷ್ಟು ನಟಿಮಣಿಯರು ಇರಬಹುದು. ಆರೋಪ ಸಾಬೀತಾಗುವವರೆಗೂ ಅವರು ಆರೋಪಿ ಮಾತ್ರವೇ. ಗಾಂಜಾ ಅನ್ನುವುದು ಡ್ರಗ್ಸ್ ಅಲ್ಲವೇ ಅಲ್ಲ ಅನ್ನುವ ದೊಡ್ಡ ವರ್ಗ ನಮ್ಮಲ್ಲಿದೆ. ಇನ್ನೊಂದು ಕಡೆ ಮಂಗಳೂರಿನಲ್ಲೋ, ಮಡಿಕೇರಿಯಲ್ಲೊ, ಮತ್ತೆಲ್ಲೋ ಹಿಲ್ ಸ್ಟೇಷನ್ ನಲ್ಲೋ ಅಥವಾ ಯಾರದ್ದೋ ಗಣ್ಯರ ಫಾರಂ ಹೌಸ್ ನಲ್ಲೋ ಆಗಾಗ ರೇವ್ ಪಾರ್ಟಿ ನಡೆದಿದ್ದನ್ನು ಸುಳ್ಳು ಅನ್ನಲು ಸಾಧ್ಯವಿಲ್ಲ. ಸಿನಿಮಾ ಅನ್ನುವ ರಂಗೀನ್ ಜಗತ್ತಿನಲ್ಲಿ ಇಂತಹ ನಶೆ ಮಾದಕತೆ ಸ್ವೇಚ್ಛೆ ಅನ್ನುವುದು ಯಾರಾದರೂ ಸಾರಾಸಗಟಾಗಿ ಒಪ್ಪಿಕೊಳ್ಳಬಹುದಾದ ಸತ್ಯ. ಅದೆಲ್ಲವೂ ಇಲ್ಲಿ ವಿಚಾರವಲ್ಲ. ಈ ಸಂದರ್ಭದಲ್ಲಿ ಕನ್ನಡ ನಾಡಿನ ಸುದ್ದಿ ವಾಹಿನಿಗಳು ಏಕಾಏಕಿ ಡೈವರ್ಟ್ ಆಗಿದ್ದು ಯಾಕೆ? ಇದರ ಹಿಂದಿನ ಷಡ್ಯಂತ್ರವೇನು? ಯಾವ ವಿಚಾರವನ್ನು ಕಿಲ್ ಮಾಡಲು ಈ ಸಂಗತಿಗೆ ಪ್ರಾಮುಖ್ಯತೆ ನೀಡಲಾಗಿದೆ? ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಅನ್ನುವ ಸಮಸ್ಯೆಯ ಹಿಂದಿನ ರಾಜಕೀಯ ಉದ್ದೇಶವೇನಿರಬಹುದು. ಅದರ ಒಂದು ವಾಸನೆಯನ್ನು ನಾವು ಪತ್ರಕರ್ತರೆನ್ನುವ ಪ್ರಜಾಪ್ರಭುತ್ವದ ಕಾವಲು ನಾಯಿಗಳು ಮೂಸಿಕೊಂಡು ಹೋಗದಿದ್ದರೇ ವೃತ್ತಿ ದ್ರೋಹವಲ್ಲವೇ!
ಸ್ವಲ್ಪ ಹಿಂದೆ ಹೋಗೋಣ. ಕರೋನಾ ನಿರ್ವಹಣೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಇನ್ನೇನು ಸದ್ದು ಮಾಡುತ್ತದೆ ಎನ್ನುವಾಗ ಡಿಜಿ ಹಳ್ಳಿ, ಕೆಜಿ ಹಳ್ಳಿ, ಕಾವಲ್ ಭೈರಸಂದ್ರ ಕೋಮು ಗಲಭೆಯ ಘಟನೆ ನಡೆಯಿತು. ಅಲ್ಲಿ ಎಷ್ಟೆಲ್ಲಾ ಪ್ರಶ್ನೆಗಳಿದ್ದವು; ಅದೊಂದು ಯಕಃಶ್ಚಿತ್ ಘಟನೆಯಾಗಿತ್ತು. ಅಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಮತ್ತು ಅವರ ಅಳಿಯನ ಫೇಸ್ ಬುಕ್ ಪೋಸ್ಟ್ ಅನ್ನುವುದೊಂದು ಕೇವಲ ನೆಪವಾಗಿತ್ತು. ಘಟನೆ ಶುರುವಾಗಿ ಮೂರು ನಾಲ್ಕು ಗಂಟೆಯಾದರೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದರು. ಯಾಕೆ? ಯಾರಿಂದ ಸೂಚನೆ ಬರಬೇಕಿತ್ತು? ಅದು ಯಾಕೆ ಸೂಕ್ತ ಸಮಯದಲ್ಲಿ ಬರಲೇ ಇಲ್ಲ? ಕೊನೆಗೂ ಮೂರು ಹೆಣಗಳು ಬಿದ್ದವು, 200 ಜನ ತಲೆ ಮಾಸಿದವರ ಮೇಲೆ ಎಪ್ ಐ ಆರ್ ಆಯ್ತು. ಆ ಗಲಭೆಯ ಹಿಂದಿದ್ದ ಮೂರ್ನಾಲ್ಕು ಕಾರ್ಪೊರೇಟರ್ ಗಳಿಗೆ ನೋಟೀಸ್ ವಿಚಾರಣೆ ಇತ್ಯಾದಿ ನಾಟಕಗಳಾದವು ಮತ್ತು ಎಸ್ ಡಿ ಪಿ ಐ ಅನ್ನುವ ಒಂದು ಸಂಘಟನೆ ಕೃತ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಪೋಸ್ಟ್ ಹರಿದಾಡಿದವು. ಬಿಸಿ ತಣ್ಣಗಾಯ್ತು. ಜನರೂ ಮರೆತರು, ಮಾಧ್ಯಮಗಳಿಗೂ ಅದು ಔಟ್ ಡೇಟೆಡ್ ಆಯ್ತು.
ಅದೂ ಸರ್ಕಾರದ ನಿಷ್ಕ್ರಿಯತೆಯನ್ನು ಕಟಕಟೆಯಲ್ಲಿ ನಿಲ್ಲಿಸಿದ ಘಟನೆಯೇ ಆಗಿತ್ತು. ಆದರೆ ಅದಕ್ಕಿಂತಲೂ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ ಸಂಗತಿಯೊಂದಿತ್ತು. ದುರದೃಷ್ಟವಶಾತ್ ಈ ಡ್ರಗ್ಸ್ ಜಾಲದ ವಿವಾದವನ್ನು ಸುದ್ದಿ ಕೇಂದ್ರಗಳು ಮುನ್ನೆಲೆಗೆ ತಂದ ಕಾರಣ ಆ ದೊಡ್ಡ ಭ್ರಷ್ಟಾಚಾರದ ವಿವಾದದ ಬಿಸಿ, ಸದ್ದೇ ಇಲ್ಲದೇ ತಣ್ಣಗಾಗಿ ಹೋಯಿತು. ಅಂದ ಹಾಗೇ ಈ ಭಯಂಕರ ಭ್ರಷ್ಟಾಚಾರದ ಆರೋಪ ಮಾಡಿದ್ದು ಕಾಂಗ್ರೆಸ್ ವಕ್ತಾರ ಮೈಸೂರಿನ ಎಂ ಲಕ್ಷ್ಮಣ್. ಇದರ ಆರೋಪಿ ಖುದ್ದು ಮುಖ್ಯಮಂತ್ರಿಯ ಪುತ್ರ ಬಿ.ವೈ ವಿಜಯೇಂದ್ರ.
ಲಕ್ಷ್ಮಣ್ ಆಪಾದನೆಯಂತೆ ಬಿಜೆಪಿ ಒಳಗಿನ ಏಳು ಜನ ಶಾಸಕರು ಹೈ ಕಮಾಂಡ್ ಗೆ ಪತ್ರ ಬರೆದು ವಿಜಯೇಂದ್ರ ಅನ್ನುವ ಸೂಪರ್ ಸಿಎಂನ 5000 ಕೋಟಿ ಬೇನಾಮಿ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದಾರೆ; ಅದರ ಸಂಪೂರ್ಣ ಮಾಹಿತಿ ತಮ್ಮ ಬಳಿ ಇದೆ. ಜೊತೆಗೆ ಗುತ್ತಿಗೆದಾರರಿಂದ ಶೇ 35 % ರಷ್ಟು ಕಮಿಷನ್ ದಂಧೆ ಶುರು ಮಾಡಿದ್ದಾರೆ ವಿಜಯೇಂದ್ರ. ಅದರ ದಾಖಲೆಗಳನ್ನೂ ಕೊಡುತ್ತೀನಿ ಎಂದು ಅಬ್ಬರಿಸಿದ್ದರು ಲಕ್ಷ್ಮಣ್. ಲಕ್ಷ್ಮಣ್ ಆರೋಪವನ್ನು ಅಲ್ಲಗಳೆದು ಅವರೊಬ್ಬ ಬ್ಲಾಕ್ ಮೇಲ್ ವ್ಯಕ್ತಿ ಎಂದಿದ್ದ ನಮ್ಮ ಮಾಜಿ ಪತ್ರಕರ್ತ ಕಂ ಹಾಲಿ ಸಂಸದ ಪ್ರತಾಪ್ ಸಿಂಹರನ್ನು ಬ್ಲೂ ಫಿಲಂ ಹೀರೋ ಎಂದು ಹೀಗೆಳಿದಿದ್ದರು ಲಕ್ಷ್ಮಣ್. ಅಸಲಿಗೆ ಇದು ಸುದ್ದಿಯಾಗಬೇಕಿತ್ತು. ಆದರೆ ದಿನ ಬೆಳಗೆದ್ದರೇ ಮೋದಿ ಜಪ-ತಪ -ಪಾರಾಯಣ – ಭಜನೆ ಮಾಡುವ ನಮ್ಮ ಸುದ್ದಿವಾಹಿನಿಗಳು ಇದನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದವು. ಫೈನ್! ವಿರೋಧ ಪಕ್ಷ ಅನ್ನಿಸಿಕೊಂಡ ಕಾಂಗ್ರೆಸ್ ಗೂ ಅಥವಾ ಜೆಡಿಎಸ್ ಗೂ ಇದೊಂದು ಇಷ್ಯೂ ಅನ್ನಿಸಲೇ ಇಲ್ಲ. ಅದು ನಿಜವಾದ ದುರದೃಷ್ಟ. ಆದರೆ ಸಾಮಾಜಿಕ ಜಾಲತಾಣ ಅಂತ ಒಂದಿದೆಯಲ್ಲ ಅಲ್ಲಿ ಇದು ನಿಧಾನ ಸದ್ದು ಮಾಡತೊಡಗಿತ್ತಲ್ಲ. ಅದರ ಸದ್ದಡಗಿಸುವುದು ಅನಿವಾರ್ಯವಾಗಿತ್ತು. ಹಾಗಾಗೇ ಈ ಡ್ರಗ್ಸ್ ಅನ್ನುವ ಮಹಾಮಾರಿ, ಹೀನ ಜಾಲ, ಅನೈತಿಕ ದಂಧೆ ಸ್ಯಾಂಡಲ್ ವುಡ್ ಜೊತೆಗೆ ನಂಟು ಹೊಂದಿದೆ ಎಂದು ಪುಕಾರು ಎದ್ದಿತು.
ಸಾರಾ ಗೋವಿಂದು ಅಥವಾ ಅಲ್ಲಿರುವ ಮಹಾನುಭಾವರು ಪರಮ ಸಭ್ಯ ಮಹೋದಯರು ಎಂದಲ್ಲವಾದರೂ ಈ ವಿವಾದವನ್ನು ಇಂದ್ರಜಿತ್ ಆಗಲೀ ಪ್ರಶಾಂತ್ ಸಂಬರ್ಗಿಯಾಗಲಿ ಮೊದಲು ಒಯ್ದು ಮುಟ್ಟಿಸಬೇಕಿದ್ದಿದ್ದು ಫಿಲಂ ಛೇಂಬರ್ ಗೆ. ಅದು ಕ್ರಮ ಮತ್ತು ನಿಯಮ. ಅಲ್ಲಿ ನಿರ್ದೇಶಕರ ಸಂಘವಿದೆ, ನಿರ್ಮಾಪಕರ ಸಂಘವಿದೆ, ವಿತರಕರ ಮತ್ತು ಕಲಾವಿದರ ಸಂಘಟನೆಗಳಿವೆ. ಕನ್ನಡ ಸಿನಿ ಉದ್ಯಮದ ಮೇಲೆ ಇಂತಹ ಗುರುತರವಾದ ಆರೋಪ ಮಾಡುವ ಮೊದಲು ಫಿಲಂ ಛೇಂಬರ್ ಗಮನಕ್ಕೆ ತರಲೇಬೇಕಿತ್ತು. ಆದರೆ ಇವರ ಉದ್ದೇಶವೇ ಬೇರೆಯದಾಗಿತ್ತೋ ಏನೋ, ನೇರವಾಗಿ ಮಾಧ್ಯಮದ ಮುಂದೆ ಬಂದರು. ಸತ್ತ ಕಲಾವಿದನ ತೇಜೋವಧೆ ಮಾಡಿದರು. ಸರ್ಜಾ ಕುಟುಂಬ ಇವರ ಟಾರ್ಗೆಟ್ ಖಂಡಿತಾ ಆಗಿರಲಿಲ್ಲ. ಇವರ ಉದ್ದೇಶ ಇದ್ದಿದ್ದು ಮೀಡಿಯಾ ಅಟೆನ್ಷನ್ ಡೈವೋರ್ಟ್ ಮಾಡುವುದು. ಆದರೆ ಕಳಂಕ ಮೆತ್ತಿಕೊಂಡಿದ್ದು ಸರ್ಜಾ ಕುಟುಂಬಕ್ಕೆ ಮತ್ತು ಸುಂದರ್ ರಾಜ್ ಕುಟುಂಬಕ್ಕೆ.
ಅಷ್ಟಕ್ಕೂ ಈ ಇಂದ್ರಜಿತ್ ಲಂಕೇಶ್ ಯಾರು? ಪ್ರಶಾಂತ್ ಸಂಬರ್ಗಿ ಯಾರು? ಇತ್ತೀಚೆಗಿನ ಇವರ ಗುರಿಗಳು ಯಾವ ದಿಕ್ಕಿನಲ್ಲಿವೆ? ಇಷ್ಟನ್ನಾದರೂ ನಮ್ಮ ಘನ ಪತ್ರಕರ್ತ ಮಿತ್ರರು ಅವಲೋಕಿಸಿದ್ದರೂ, ಇದರ ಹಿಂದೆ ಬೇರೆಯದೇ ವಾಸನೆ ಇದೆ ಎಂದು ಅರ್ಥವಾಗುತ್ತಿತ್ತು. ಇದೇ ಇಂದ್ರಜಿತ್ ಲಂಕೇಶರ ಪತ್ರಿಕೆಯೊಂದಿತ್ತು. ಅದರ ಸಂಪಾದಕ, ಇಂದ್ರಜಿತ್ ಗೆ ಮಾಡಿದ ಮಹದುಪಕಾರ ಎಂದರೆ ಈ ಲಂಕೇಶರ ಸುಪುತ್ರರನ್ನು ಬಿಜೆಪಿಗೆ ಸೇರಿಸಿದ್ದು. ಆ ದಿನ ಟೌನ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಯಡಿಯೂರಪ್ಪನವರನ್ನು ಅಭಿನವ ಬಸವಣ್ಣ ಎಂದಿದ್ದರು ಇದೇ ಇಂದ್ರಜಿತ್ ಲಂಕೇಶ್. ಮೊನ್ನೆ ಮೊನ್ನೆ ಬಿಜೆಪಿ ಶಕ್ತಿ ಕೇಂದ್ರಗಳಲ್ಲಿ ಒಂದಾದ ಸಿದ್ಧಗಂಗಾ ಮಠಕ್ಕೆ ನಟ ಕಿಚ್ಚ ಸುದೀಪ್ ಜೊತೆಗೆ ಹೋದರಲ್ಲ ಇಂದ್ರಜಿತ್ ಲಂಕೇಶ್, ಆನಂತರದ ದಿನವೇ ಬಾಂಬುಗಳ ಮೇಲೆ ಬಾಂಬುಗಳನ್ನು, ಗ್ರನೈಡ್ ಮೇಲೆ ಗ್ರನೈಡ್ ಗಳನ್ನು ಸಿಡಿಸತೊಡಗಿದರು. ಅಲ್ಲೇನು ಅಂತಹ ಮಾತುಕತೆಯಾಯಿತು? ಅದ್ಯಾರು ಇಂದ್ರಜಿತ್ ಲಂಕೇಶ್ ಗೆ ಟಿಪ್ ಕೊಟ್ಟರು?
ಇಷ್ಟಾಯಿತಲ್ಲ ಇನ್ನು ಪ್ರಶಾಂತ್ ಸಂಬರ್ಗಿ ವಿಚಾರಕ್ಕೆ ಬರೋಣ. ಪ್ರಶಾಂತ್ ಫೇಸ್ ಬುಕ್ ಪ್ರೊಫೈಲ್ ಒಮ್ಮೆ ಹೊಕ್ಕು ನೋಡಿ. ಅವರೆಷ್ಟು ಬಿಜೆಪಿ ಪರವಾಗಿದ್ದಾರೆ ಅನ್ನುವುದು ನಿಮಗೇ ತಿಳಿಯಿತ್ತದೆ. ರಾಹುಲ್ ಗಾಂಧಿಯನ್ನು ಡಿ ಫಾರ್ ಡಾಂಕಿ ಅನ್ನುವ ಪ್ರಶಾಂತ್ ಸಂಬರ್ಗಿ ಹೆಸರನ್ನು ನಾನು ಈಗೊಂದು ವಾರದ ಹಿಂದೆ ಕೇಳಿಯೇ ಇರಲಿಲ್ಲ. ಆದರೆ ಅದೇ ರಾಹುಲ್ ಗಾಂಧಿ ನಮಗೆಲ್ಲರಿಗೂ ಯಾವುದೋ ರೂಪದಲ್ಲಾದರೂ ಪರಿಚಯವಂತೂ ಇದ್ದರು. ಇವರಿಬ್ಬರು ಬಿಜೆಪಿ ಪರವಾದ ನಿಲುವುಳ್ಳವರು ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ವಿಚಾರದಲ್ಲಿ ಈಗ ಭಯಂಕರವಾಗಿ ಅಬ್ಬರಿಸುತ್ತಿರುವುದು ಅನುಮಾನಕ್ಕೆ ಕಾರಣವಾಗವುದಿಲ್ಲವೇ? ಇವಿಷ್ಟೂ ಕೇವಲ ನನ್ನ ಅನುಮಾನಗಳಷ್ಟೇ! ಒಬ್ಬ ಪತ್ರಕರ್ತನಾಗಿ ಹಳೆಯ ವಿಚಾರಗಳನ್ನು ಕೆದಕಿ, ಹೊಸ ಸಂಗತಿಯ ಸಾಧ್ಯಾಸಾಧ್ಯಾತೆಯ ಜೊತೆ ಥಳುಕು ಹಾಕುವ ‘ಹೊಂದಿಸಿ ಬರೆಯಿರಿ’ ಕೆಲಸ ಮಾಡಿದ್ದೀನಿ. ಇದನ್ನು ನಾನು ಆಲೋಚಿಸಿದ ಹಾಗೆಯೇ ತಾರ್ಕಿಕವಾಗಿ ಚಿಂತಿಸಿ ಒಪ್ಪುವುದು ಬಿಡುವುದು ನಿಮಗೆ ಬಿಟ್ಟಿದ್ದು. ಕೊನೆಯದಾಗಿ ಈ ಇಬ್ಬರಿಗಿಂತ ಹೆಚ್ಚಿನ ದೇಶಭಕ್ತಿ ಇರುವ ನಾನು ಕೋರಿಕೊಳ್ಳುವುದೇನೆಂದರೇ ಡಾ. ರಾಜ್ ಕುಮಾರ್, ವಿಷ್ಣು ದಾದಾ, ಶಂಕರ್ ನಾಗ್ ಮುಂತಾದ ನೂರಾರು ದಿಗ್ಗಜರು ಆಳಿ ಬೆಳಗಿದ ಚಂದನವನ ಎಲ್ಲಾ ಕಳಂಕಗಳಿಂದ ಮುಕ್ತವಾಗಲಿ. ನಮ್ಮ ಸಮಾಜ ನಮ್ಮ ಮುಂದಿನ ಪೀಳಿಗೆಯ ಮಕ್ಕಳು ಡ್ರಗ್ಸ್ ಅನ್ನುವ ವಿಷವರ್ತುಲದಲ್ಲಿ ಸಿಲುಕಿಕೊಳ್ಳುವ ಸಂದರ್ಭ ಎದುರಾಗದೇ ಇರಲಿ. ಉಳಿದದ್ದು ಓದುಗರಾದ ನಿಮಗೆ ಬಿಟ್ಟಿದ್ದು.
-ವಿಭಾ (ವಿಶ್ವಾಸ್ ಭಾರದ್ವಾಜ್)