ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿದ ಸಿ. ಎಂ ಇಬ್ರಾಹಿಂ
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸಿ. ಎಂ ಇಬ್ರಾಹಿಂ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜಿನಾಮೆ ನೀಡಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾದ ಇಬ್ರಾಹಿಂ, ರಾಜೀನಾಮೆ ಸಲ್ಲಿಸಿದರು. ಪರಿಷತ್ ಸ್ಥಾನಕ್ಕೆ ಇಬ್ರಾಹಿಂ ಸಲ್ಲಿಸಿದ ರಾಜೀನಾಮೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದರು.
ಕಳೆದ ಹಲವು ತಿಂಗಳಿಂದ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡಿದ್ದ ಅವರು ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಈ ಸಂಬಂಧ ಜೆಡಿಎಸ್ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ದೇವೇಗೌಡರನ್ನೂ ಸಂಪರ್ಕಿಸಿದ್ದರು ಎಂದು ಮೂಲಗಳು ತಿಳಿಸಿದ್ದವು. ಈ ಮಧ್ಯೆ ಇಬ್ರಾಹಿಂರನ್ನು ಮನವೊಲಿಸಲು ಕಾಂಗ್ರೆಸ್ನ ಹಿರಿಯ ನಾಯಕರು ಯತ್ನಿಸಿದ್ದರು.
ಇತ್ತೀಚೆಗಷ್ಟೇ ವಿಧಾನಸೌಧದ ಮೊಗಸಾಲೆಯಲ್ಲಿ ಇಬ್ರಾಹಿಂಗೆ ಎದುರು ಸಿಕ್ಕಿದ್ದ ಸಿದ್ಧರಾಮಯ್ಯ ಪಕ್ಷ ಬಿಟ್ಟು ಹೋಗಬೇಡ, ಮಾತನಾಡೋಣ ಎಂದಿದ್ದರು. ಇಬ್ರಾಹಿಂ ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಸಿದ್ದರಾಮಯ್ಯ ಆಪ್ತ ಎಚ್.ಸಿ.ಮಹದೇವಪ್ಪ ಸಹ ಸಂಧಾನಕ್ಕಾಗಿ ಪ್ರಯತ್ನಿಸಿದ್ದರು. ಆದರೆ ಅದು ಫಲ ನೀಡಿರಲಿಲ್ಲ. ಜೆಡಿಎಸ್ ಸೇರ್ಪಡೆಯ ಒಲವು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ 19ರಂದು ಇಬ್ರಾಹಿಂ ಅವರೊಂದಿಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದರು.