ಶೀಘ್ರದಲ್ಲಿ ಸಿಎಂ ಬದಲಾವಣೆಯಾಗಬೇಕು : ಯತ್ನಾಳ್
ಮೈಸೂರು : ಸ್ವಪಕ್ಷದ ವಿರುದ್ಧ ಸದಾ ಕಡಿಕಾರುತ್ತಾ ಸುದ್ದಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದೀಗ ಮತ್ತೊಮ್ಮೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರಿದ್ಧ ಕಿಡಿಕಾರಿದ್ದಾರೆ.
ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಬೇಕೆಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದಾರೆ.. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದರು.
ದುಷ್ಟರ ಸಂಹಾರ ಮಾಡೆಂದು ನಾನು ಚಾಮುಂಡೇಶ್ವರಿ ದೇವಿಯಲ್ಲಿ ಬೇಡಿಕೊಂಡಿದ್ದೇನೆ. ಯಾರು ಅಪಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ, ರಾಜ್ಯ ಲೂಟಿ ಮಾಡುತ್ತಾ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರೇ. ಅತಿ ಶೀಘ್ರದಲ್ಲಿ ಅವರ ಸಂಹಾರ ಆಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಅಲ್ಲದೇ ಮಾತು ಮುಂದುವರೆಸಿದ ಯತ್ನಾಳ್ ಅವರು ಸಿಸಿಬಿ ಪೊಲೀಸರು ಮುಖ್ಯಮಂತ್ರಿ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್‍ಹೌಸ್ ಮೇಲೆ ಏಕೆ ದಾಳಿ ಮಾಡುತ್ತಿಲ್ಲ. ಅಲ್ಲೂ ರೈಡ್ ಆಗಬೇಕು, ಎಲ್ಲಾ ಡೀಲ್‍ಗಳು ನಡೆಯೋದೆ ಅಲ್ಲಿ. ವಿಜಯೇಂದ್ರ ಡೀಲ್ ಮಾಡೋದೆ ಆ ಸ್ಥಳದಲ್ಲಿ. ಶೀಘ್ರದಲ್ಲಿ ಸಿಎಂ ಬದಲಾವಣೆಯಾಗಬೇಕು, ಆಗಸ್ಟ್ 15ರವರೆಗೂ ಯಾಕೆ ಮುಂದುವರೆಸಬೇಕು ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತುಹೋಗಿವೆ. ಭ್ರಷ್ಟಚಾರದಲ್ಲಿ ಸಿಎಂ ಯಡಿಯೂರಪ್ಪ ಜೊತೆ ವಿರೋಧ ಪಕ್ಷದವರೂ ಶಾಮೀಲಾಗಿದ್ದು, ಅವರಿಗೂ ಪಾಲಿದೆ ಎಂದು ಆರೋಪ ಮಾಡಿದ್ದಾರೆ.