ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಭಾರಿ ವಾಗ್ದಾಳಿ ನಡೆಸಿದ್ದಾರೆ. ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಮುದಾಯದ ಹಕ್ಕುಗಳನ್ನು ತಮ್ಮದೇ ಎನ್ನುವ ರೀತಿಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಅವರ ಧೋರಣೆಯನ್ನು ಅವರು ತೀವ್ರವಾಗಿ ಟೀಕಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಹಿಂದ ಹೋರಾಟ ಮಾಡಿದ್ದು ಯಾರು ಗೊತ್ತಾ? ಸಿ.ಎಸ್. ದ್ವಾರಕನಾಥ್ ಮತ್ತು ಆರ್.ಎಲ್. ಜಾಲಪ್ಪ. ಅವರು ನಿಜವಾದ ಹೋರಾಟಗಾರರು. ಆದರೆ ಸಿದ್ದರಾಮಯ್ಯ ಅವರು ಯಾವ ಹೋರಾಟ ಮಾಡಿದ್ದಾರೆ? ಕೋಲಾರದಲ್ಲಿ ರಾತ್ರಿ ವೇಳೆ ಜಾಲಪ್ಪ ಅವರ ಫೋಟೋ ತೆಗೆದು ಹಾಕಿ ತಮ್ಮ ಫೋಟೋ ಹಾಕಿಸಿಕೊಂಡದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ನಿಜವಾದ ಹಿಂದುಳಿದವರ ನಾಯಕ ದೇವರಾಜ ಅರಸು
ಡಿ. ದೇವರಾಜ ಅರಸು ನಿಜವಾದ ಹಿಂದುಳಿದವರ ಹಾಗೂ ಬಡವರ ನಾಯಕ. ಅವರು ಮಾಡಿದ್ದನ್ನು ನಾನು ಮಾಡಿದ್ದೆನೆಂದು ಹೇಳಿಕೊಳ್ಳುವುದು ಸಿದ್ದರಾಮಯ್ಯ ಅವರ ಚಟ ಎಂದು ಎಚ್. ವಿಶ್ವನಾಥ್ ಟೀಕೆ ಮಾಡಿದ್ದಾರೆ. ಇದು ರಾಜಕೀಯ ಚಮಚಾಗಿರಿ. ಅಧಿಕಾರದ ಆಸೆಗಾಗಿ ನಾಚಿಕೆಗೇಡಾದ ಕೆಲಸ ಮಾಡುತ್ತಿದ್ದಾರೆ. ನೀವು ಹಾಗೂ ರಾಹುಲ್ ಗಾಂಧಿ ಇಬ್ಬರೂ ನ್ಯಾಯ ಯೋಧರಲ್ಲ, ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಹಿಂದುಳಿದ ವರ್ಗಗಳ ನಾಯಕತ್ವದ ಬಗ್ಗೆ ಮಾತನಾಡುತ್ತಾ, ವಿಶ್ವನಾಥ್ ಅವರು, ಸಿದ್ದರಾಮಯ್ಯ ಅವರಿಗೆ ಹಿಂದುಳಿದ ಜಾತಿಗಳ ಬಗ್ಗೆ ಅಷ್ಟೇನೂ ಅರಿವಿಲ್ಲ. ಕುರುಬ, ಕುಂಬಾರ, ಉಪ್ಪಾರ ಮುಂತಾದ ಐದಾರು ಜಾತಿ ಹೆಸರನ್ನು ಬಿಟ್ಟು ಬೇರೊಂದು ಹಿಂದುಳಿದ ಜಾತಿಯ ಹೆಸರನ್ನಾದರೂ ಹೇಳಲಿ. ಸಿದ್ದರಾಮಯ್ಯ ಅವರು ಇತರ ಕೆಳಮಟ್ಟದ ಜಾತಿಗಳ ಸಂಪರ್ಕದಲ್ಲೇ ಇಲ್ಲ, ಎಂದು ಕಟುವಾಗಿ ಟೀಕಿಸಿದ್ದಾರೆ
ವಿಧಾನ ಪರಿಷತ್ ಸ್ಥಾನಗಳು ಯಾರಿಗೆ ನೀಡಿದ್ದೀರಿ?”
ನೀವು ಹಿಂದುಳಿದವರ ನಾಯಕರು ಅನ್ನೋದು ಸತ್ಯವಿದ್ದರೆ ನಾಲ್ಕು ವಿಧಾನ ಪರಿಷತ್ ಸ್ಥಾನ ಯಾರಿಗೆ ನೀಡಿದಿರಿ? ಈಡಿಗ ಸಮುದಾಯದ ಅಮೀನ್ ಮಟ್ಟು ನಿಮ್ಮ ಭಂಟ. ಮತ್ತೊಬ್ಬರು ಮಾಜಿ ಸಚಿವರ ಪುತ್ರಿ. ಉಳಿದದ್ದು ದಲಿತರಿಗೆ. ಹಿಂದುಳಿದವರಿಗೆ ಕೊಟ್ಟದ್ದು ಏನು? ಎಂದು ವಿಶ್ವನಾಥ್ ಅವರು ಪ್ರಶ್ನಿಸಿದ್ದಾರೆ.
ನಿಮಗೆ ತೊಂದರೆ ಬಂದಾಗ ‘ಸಾಧನಾ ಸಮಾವೇಶ’ ಅಂತ ಹೆಸರಿಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತೀರಿ. ನಿಮ್ಮ ಕಾಲದಲ್ಲಿ ಶಾಲೆಗಳಿಗೆ ಬೀಗ ಹಾಕಿದ್ದು ಯಾರು? ಎರಡೂವರೆ ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ರಸ್ತೆಗಳ ಗುಂಡಿಗಳನ್ನು ಮುಚ್ಚದೆ ಸುಭೀಕ್ಷಾ ರಾಜ್ಯವೆಂದು ಹೇಳಿಕೊಳ್ಳುವುದು ಹೇಗೆ? ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾ.ರಾ. ಮಹೇಶ್ ಕಾಲದ ರಸ್ತೆ ಕಾಮಗಾರಿಗೆ ಈಗ ಗುದ್ದಲಿ ಹಿಡಿಯುವುದು ಸರಿಯೇ? ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಸುಮಾರು 1 ಲಕ್ಷ ಮಂದಿ ಸ್ಥಳೀಯ ಪ್ರತಿನಿಧಿಗಳ ಅಧಿಕಾರವನ್ನು ಕಿತ್ತುಕೊಂಡಿದ್ದಾರೆಂದು ಅವರು ಆರೋಪಿಸಿದ್ದಾರೆ.
ಎಚ್. ವಿಶ್ವನಾಥ್ ಅವರ ಈ ಆರೋಪಗಳು ಮತ್ತು ಟೀಕೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಸಿದ್ದರಾಮಯ್ಯ ಅವರ ಮೇಲೆ ತೀವ್ರ ಟೀಕೆ ಮಾಡುವ ಮೂಲಕ ಅವರು ಕಾಂಗ್ರೆಸ್ ಪಕ್ಷದೊಳಗಿನ ಅಂತರ ಕಲಹವನ್ನು ಹೊರ ಹಾಕಿದ್ದಾರೆ.








