ಬೆಂಗಳೂರು: ನಿನ್ನೆ ತಡರಾತ್ರಿ ಕೆಲ ಅಸಮಾಧಾನಿತ ಶಾಸಕರು ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿರುವ ಬಗ್ಗೆ ತಿಳಿದು ತುಸು ಅಧೀರರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಸಚಿವರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ದವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರು, ಸಚಿವರಾದ ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹಾಗೂ ಆಪ್ತ ಶಾಸಕರ ಜೊತೆ ಮಾತುಕತೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆ ರಾತ್ರಿ ಮುಂಬೈ ಮತ್ತು ಕಲ್ಯಾಣ ಕರ್ನಾಟಕದ ಕೆಲ ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಸಿಎಂ, ಶೆಟ್ಟರ್ ನಿವಾಸಕ್ಕೆ ತಮ್ಮ ಆಪ್ತ ಸಂತೋಷ್ ಅವರನ್ನು ಕಳುಹಿಸಿಕೊಟ್ಟು ನಿವಾಸಕ್ಕೆ ಬರುವಂತೆ ಸೂಚಿಸಿದ್ದರು. ಬಿಎಸ್ ವೈ ಸೂಚನೆಯಂತೆ ಸಿಎಂ ನಿವಾಸಕ್ಕೆ ಶೆಟ್ಟರ್ ಆಗಮಿಸಿದ್ರು. ಇವರ ಬೆನ್ನಲ್ಲೆ ಸಚಿವ ವಿ.ಸೋಮಣ್ಣ, ರೇಣುಕಾಚಾರ್ಯ ಮತ್ತು ಶಾಸಕರು ಸಹ ದೌಡಾಸಿದ್ರು.
ಈ ವೇಳೆ ಸಿಎಂ ಬಿಎಸ್ ವೈ ಶೆಟ್ಟರ್ ಜೊತೆ ನಿನ್ನೆ ರಾತ್ರಿ ನಡೆದ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದಿದ್ದು, ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಳಿ ಶೆಟ್ಟರ್ ಹಂಚಿಕೊಂಡಿದ್ದಾರೆ. ಬಹುತೇಕ ಶಾಸಕರು ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿದ್ದಾರೆ. ವಲಸಿಗರಿಗೆ ಮನ್ನಣೆ, ಹಿರಿಯರ ಕಡೆಗಣನೆ, ಆಡಳಿತದಲ್ಲಿ ಹಸ್ತಕ್ಷೇಪ, ಸ್ವಜನಪಕ್ಷಪಾತ, ಸರ್ಕಾರದ ಆಡಳಿತದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಶೆಟ್ಟರ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸಿಎಂ ಅವರಿಗೆ ಸಲಹೆ ನೀಡಿದ್ದಾರೆ.