ಕೊರೊನಾ ಲಾಕ್ ಡೌನ್‌ನಿಂದ ಕಿರುತೆರೆಯ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದು ಒಂದೂವರೆ ತಿಂಗಳಾಗಿದೆ. ಈ ಮಧ್ಯೆ ಲಾಕ್ ಡೌನ್ 3.0 ಕೊಂಚ ಸಡಲಿಕೆಯಾಗಿರುವುದರಿಂದ ಮತ್ತು ಬೇರೆ ಬೇರೆ ವಲಯಗಳಲ್ಲಿ ಕೆಲಸ ಪ್ರಾರಂಭವಾಗುತ್ತಿರುವುದರಿಂದ, ಕಿರುತೆರೆಯ ಚಿತ್ರೀಕರಣಕ್ಕೂ ಅನುವು ಮಾಡಿಕೊಡಬೇಕೆಂದು ಹಲವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಕಿರುತೆರೆಯ ಮನವಿಗೆ ಸರ್ಕಾರ ಪುರಸ್ಕಾರ ಕೊಟ್ಟಿದೆ. ಧಾರಾವಾಹಿ ಚಿತ್ರೀಕರಣಕ್ಕೆ ಸರ್ಕಾರವು ಅನುಮತಿ ಕೊಟ್ಟಿದ್ದು, ಬುಧವಾರದಿಂದಲೇ ಚಿತ್ರೀಕರಣ ಪ್ರಾರಂಭವಾಗಲಿದೆ.
ಈ ಬಗ್ಗೆ ಇಂದು ನಿರ್ಧಾರ ತೆಗೆದುಕೊಂಡಿರುವ ಸಿಎಂ ಯಡಿಯೂರಪ್ಪ, ಕೇವಲ ಧಾರಾವಾಹಿಗಳ ಶೂಟಿಂಗ್ ಗೆ ಮಾತ್ರ ಅನುಮತಿ ನೀಡಿದ್ದಾರೆ. ಇನ್ನು ರಾಜ್ಯದಲ್ಲಿ 6 ಸಾವಿರಕ್ಕೂ ಅಧಿಕ ಕಾರ್ಮಿಕರು ಕಿರುತೆರೆ ಮೇಲೆ ಅವಲಂಬಿತರಾಗಿದ್ದಾರೆ. ಶೂಟಿಂಗ್ ಆದರೆ ಮಾತ್ರ ಊಟ ಅನ್ನೋ ಸ್ಥಿತಿಯಲ್ಲಿ ಹಲವು ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಷರತ್ತು ಬದ್ಧ ಅನುಮತಿಯನ್ನು ಸರ್ಕಾರ ನೀಡಿದೆ.
ಇನ್ನು ಸೀರಿಯಲ್ ಶೂಟಿಂಗ್ ಹೆಚ್ಚಾಗಿ ಮನೆ ಒಳಗೆ ಮಾತ್ರ ನಡೆಯುತ್ತವೆ. ಕೊರೊನಾ ಸಂಬಂಧ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಬಹುದು. ಆದರೆ, ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಜೊತೆಗೆ ಚಲನಚಿತ್ರ ಹಾಗೂ ರಿಯಾಲಿಟಿ ಶೋಗಳ ಶೂಟಿಂಗ್ ಗೂ ಅವಕಾಶವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.