ಬೆಂಗಳೂರು: ಕೇಂದ್ರ ಸರ್ಕಾರದ ಆರೋಗ್ಯ ಸೇತು ಆ್ಯಪ್ ರೀತಿಯಲ್ಲೇ ಇದೀಗ ರಾಜ್ಯ ಸರ್ಕಾರ ಆಪ್ತಮಿತ್ರ ಅನ್ನೋ ಆ್ಯಪ್ ಬಿಡುಗಡೆ ಮಾಡಿದೆ. ಇಂದು ಆಪ್ತಮಿತ್ರ ಆ್ಯಪ್ ಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಕೊರೊನಾ ಸೋಂಕಿನ ಲಕ್ಷಣವುಳ್ಳವರು, ಈ ಆಪ್ತಮಿತ್ರ ಸಹಾಯವಾಣಿ 14410 ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದಾಗಿದೆ.
ಆಪ್ತಮಿತ್ರ ಸಹಾಯವಾಣಿ ಮತ್ತು ಆ್ಯಪ್ ನ ಉದ್ದೇಶ
ರಾಜ್ಯದ ಎಲ್ಲಾ ನಿವಾಸಿಗಳಿಗೆ, ವಿಶೇಷವಾಗಿ ಕೊರೊನಾ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಅನಾರೋಗ್ಯ, ತೀವ್ರ ಉಸಿರಾಟದ ಸೋಂಕು ಅಥವಾ ಕೊರೊನಾ ಸೋಂಕಿಗೆ ಒಳಗಾಗುವಂಥ ಹೆಚ್ಚಿನ ಅಪಾಯ ಹೊಂದಿರುವವರನ್ನು ಗುರುತಿಸುವುದು ಆ್ಯಪ್ ನ ಮೂಲ ಉದ್ದೇಶವಾಗಿದೆ. ಇನ್ನು ಆಪ್ತಮಿತ್ರ ಸಹಾಯವಾಣಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುತ್ತದೆ, ಬೆಂಗಳೂರು (4 ಕೇಂದ್ರಗಳು) ಮೈಸೂರು ಮತ್ತು ಮಂಗಳೂರು (ಬಂಟ್ವಾಳ} ಹೀಗೆ 6 ಸ್ಥಳಗಳಲ್ಲಿ 300
ಆಸನ ಸಾಮರ್ಥ್ಯ ಹೊಂದಿರುವ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಆ್ಯಪ್ ಬಿಡುಗಡೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್. ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಬಿ.ಎಂ.ಆರ್.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಪಿ. ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು








