ವಿಜಯಪುರ: ಕಳೆದ ವಾರ ದಕ್ಷಿಣ ಕರ್ನಾಟಕದ ಜೀವನದಿ ಕಾವೇರಿಗೆ ಬಾಗಿನ ಅರ್ಪಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಇಂದು ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಬಾಗಿನ ಅರ್ಪಿಸಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಬಿರುವ ಕೆಆರ್‌ಎಸ್ ಹಾಗೂ ಕಬನಿ ಜಲಾಶಯದ ನಂತರ ಉತ್ತರ ಕರ್ನಾಟಕದ ಅತಿದೊಡ್ಡ ಜಲಾಶಯ ವಿಜಯಪುರ ಜಿಲ್ಲೆಯ ಆಲಮಟ್ಟಿ ಕೂಡ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಭರ್ತಿಯಾದ ಆಲಮಟ್ಟಿ ಜಲಾಶಯದಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಿದರು.
ಬೆಳಗಾವಿಯಿಂದ ವಿಶೇಷ ಹೆಲಿಕ್ಟಾಪರ್ ಮೂಲಕ ನೆರೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ವಿಜಯಪುರ ಜಿಲ್ಲೆ ನಿಡಗುಂಡಿ ತಾಲೂಕಿನ ಆಲಮಟ್ಟಿ ಹೆಲಿಪ್ಯಾಡ್‌ಗೆ ಬಂದಿಳಿದ ಅವರು ನೇರವಾಗಿ ಆಲಮಟ್ಟಿ ಜಲಾಶಯ ವೀಕ್ಷಣೆಗೆ ತೆರಳಿದರು. ಸಿಎಂ ಅಧಿಕೃತ ಪ್ರವಾಸ ವೇಳಾಪಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಇಲ್ಲದಿದ್ದರೂ ಜಿಲ್ಲಾಡಳಿತ ಬಾಗಿನ ಅರ್ಪಣೆಗೆ ಸಿದ್ದತೆ ಮಾಡಿಕೊಂಡಿತ್ತು.
ಇದನ್ನು ಗಮನಿಸಿದ ಸಿಎಂ ಭರ್ತಿಯಾಗಿ ಭೋರ್ಗೆಯುತ್ತಿದ್ದ ಕೃಷ್ಣಾ ಜಲಾಶಯಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್.ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸಂಸದರು, ಶಾಸಕರು ಉಪಸ್ಥಿತರಿದ್ದರು.







