ಬೆಂಗಳೂರು : ಕೊರೊನಾ ವೈರಸ್ ಲಾಕ್ ಡೌನ್ ನಿಂದಾಗಿ ಯಾರಿಗೆ ಕಷ್ಟ ಆಗಿದ್ಯೋ, ಇಲ್ವೋ… ಆದರೆ ಕುಡುಕರಿಗೆ ಮಾತ್ರ ಸಿಕ್ಕಾಪಟ್ಟೆ ತೊಂದರೆಯಾಗಿದೆ. ಲಾಕ್ ಡೌನ್ ಸಮಯದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವುದರಿಂದ, ಎಣ್ಣೆ ಸಿಗದೆ ಮದ್ಯ ಪ್ರಿಯರು ಪರದಾಡುತ್ತಿದ್ದಾರೆ. ಅಲ್ಲದೆ ಎಣ್ಣೆ ಸಿಗದೆ ಕುಡುಕರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಆದ್ರೆ ಮದ್ಯದಂಗಡಿಗಳನ್ನು ತೆರೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಅನುಮತಿ ನೀಡುತ್ತಿಲ್ಲ..
”ಮದ್ಯದಂಗಡಿ ಓಪನ್ ಮಾಡಿದರೆ ಒಳಿತು” ಅಂತ ಸ್ವತಃ ಅಧಿಕಾರಿಗಳೇ ಹೇಳಿದರೂ, ಅದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ”ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವವರೆಗೂ ಮದ್ಯದಂಗಡಿ ಓಪನ್ ಬೇಡ” ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದ್ದಾರೆ ಬಿ.ಎಸ್.ಯಡಿಯೂರಪ್ಪ.
ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣದ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳ ಜೊತೆ ಇಂದು ಸಭೆ ನಡೆಸಿದರು. ಈ ವೇಳೆ ”ಮದ್ಯದಂಗಡಿ ಓಪನ್ ಮಾಡಿದರೆ ಒಳಿತು” ಎಂದು ಅಧಿಕಾರಿಗಳು ಬಿಎಸ್ ವೈಗೆ ಮನವಿ ಮಾಡಿಕೊಂಡರು. ಆದರೆ, ”ಮೇ 3 ಕ್ಕೆ ಪಿಎಂ ಭಾಷಣ ಮಾಡಿ, ಓಪನ್ ಮಾಡಿ ಅಂದ್ರೆ ಮಾತ್ರ ಎಣ್ಣೆ ಅಂಗಡಿ ಓಪನ್” ಎಂದು ಖಡಕ್ ಆಗಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಇದಾದ ಬಳಿಕ ”ಎಂ.ಎಸ್.ಐ.ಎಲ್ ಆದ್ರೂ ಓಪನ್ ಮಾಡಿ. ಗ್ರೀನ್ ಝೋನ್ ಏರಿಯಾಗಳಲ್ಲಿ ಓಪನ್ ಮಾಡಿದರೆ ಒಳಿತು” ಅಂತ ಅಧಿಕಾರಿಗಳು ಹೇಳಿದರು. ಜೊತೆಗೆ ”ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿ ಅಂಗಡಿ ಓಪನ್ ಮಾಡಬಹುದು” ಎಂದು ಮತ್ತೊಮ್ಮೆ ಮುಖ್ಯಮಂತ್ರಿಗಳಲ್ಲಿ ಅಧಿಕಾರಿಗಳು ಮನವಿ ಮಾಡಿದರು. ಆದ್ರೆ ಅಧಿಕಾರಿಗಳ ಮನವಿಗೆ ಆಸಕ್ತಿ ತೋರದ ಸಿಎಂ ಕೇಂದ್ರದ ನಿರ್ಧಾರ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳೋಣ ಎಂದಿದ್ದಾರೆ.