ಕಾರವಾರ: ಕಾಳಿ ನದಿ (Kali River) ಸೇತುವೆಗೆ 40 ವರ್ಷಗಳ ಹಿಂದೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ (Bridge) ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಸೇತುವೆ ಕುಸಿಯುತ್ತಿದ್ದಂತೆ ತಮಿಳುನಾಡು ಮೂಲದ ಲಾರಿಯೊಂದು ನದಿಗೆ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ನಗರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ 1 ಗಂಟೆ ವೇಳೆಗೆ ಸೇತುವೆ ಕುಸಿದಿದ್ದು, ಘಟನೆಯಲ್ಲಿ ಲಾರಿ ಚಾಲಕ ಬಾಲಮುರುಗನ್ ರನ್ನು ರಕ್ಷಿಸಲಾಗಿದೆ. ಗೋವಾದಿಂದ ಹುಬ್ಬಳ್ಳಿಗೆ ತೆರಳುತಿದ್ದ ಖಾಲಿ ಲಾರಿ ಕಾಳಿನದಿಯ ಸೇತುವೆ ಮೇಲೆ ವೇಗವಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ಸೇತುವೆ ಕುಸಿದಿದೆ.
ಆಗ ಲಾರಿ ನದಿಯಲ್ಲಿ ಕುಸಿದು ಬಿದ್ದಿದೆ. ಲಾರಿಯ ಕ್ಯಾಬಿನ್ ಮೇಲೆ ನಿಂತು ಚಾಲಕ ಕೂಗಿದ್ದಾರೆ. ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಗಮಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ರಕ್ಷಿಸಲಾಗಿದೆ.
ಕಾಳಿ ನದಿಯ ಸೇತುವೆ ಮೂರು ಕಡೆ ಕುಸಿದಿದೆ. ಕಾರವಾರದಿಂದ ಗೋವಾ ಕಡೆಗೆ ತೆರಳುವ ಮೊದಲ ಭಾಗ, ನಂತರ ಮಧ್ಯ ಭಾಗ, ಅದರ ನಂತರ ಗೋವಾದಿಂದ ಕಾರವಾರದ ಕಡೆ ಬರುವ ಆರಂಭದಲ್ಲಿ ಕುಸಿದಿದೆ. ಆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಎಚ್ಚೆತ್ತುಕೊಂಡಿಲ್ಲ.
ಘಟನೆ ನಡೆದ ನಂತರ ಗೋವಾ-ಕಾರವಾರ ಮಾರ್ಗದ ಎರಡು ಭಾಗದ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಸ್ಥಳಕ್ಕೆ ಶಾಸಕರು ಹಾಗೂ ಜಿಲ್ಲಾಧಿಕಾರಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.