ಉತ್ತರ ಪ್ರದೇಶ(Uttar Pradesh)ದ ಕಾಶಿ ವಿಶ್ವನಾಥ ದೇವಸ್ಥಾನದ ಹತ್ತಿರ ಭಾರಿ ಮಳೆ(Rain) ಯಿಂದಾಗಿ ಮನೆಗಳು ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಲ್ಲದೇ, ಮನೆಯ ಅವಶೇಷಗಳಡಿ 8 ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ವೈದ್ಯರು ಮತ್ತು ಶ್ವಾನ ದಳದ ತಂಡವು ಸ್ಥಳದಲ್ಲಿವೆ. ಈ ಮನೆಗಳು ಕಾಶಿ ವಿಶ್ವನಾಥ ದೇವಸ್ಥಾನದ ಹತ್ತಿರದಲ್ಲೇ ಇವೆ ಎನ್ನಲಾಗಿದೆ.
70 ವರ್ಷದ ಹಳೆಯ ಮನೆಗಳು ಏಕಾಏಕಿ ಕುಸಿದು ಬಿದ್ದಿವೆ. ಪ್ರಸಿದ್ಧ ಜವಾಹಿರ್ ಸಾವೋ ಕಚೋರಿ ವಾಲಾ ಮೇಲಿರುವ ರಾಜೇಶ್ ಗುಪ್ತಾ ಮತ್ತು ಮನೀಶ್ ಗುಪ್ತಾ ಅವರ ಮನೆಗಳ ಅವಶೇಷಗಳ ಅಡಿಯಲ್ಲಿ ಎಂಟು ಜನರು ಸಮಾಧಿಯಾಗಿದ್ದಾರೆ ಎಂದಿದ್ದಾರೆ.
ಸ್ಥಳೀಯ ಪೊಲೀಸರು ಮತ್ತು ಎನ್ಡಿಆರ್ಎಫ್ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್ಟೆಬಲ್ ಸೇರಿದಂತೆ ಹಲವರನ್ನು ಅವಶೇಷಗಳಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಬೀರಚೌರಾದ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೆ ವಿಶ್ವನಾಥ ದೇಗುಲದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ದೇವಸ್ಥಾನಕ್ಕೆ ಹೋಗುವ ಗೇಟ್ ಗಳನ್ನು ಮುಚ್ಚಲಾಗಿದೆ.