ಚೀನಾ ಉತ್ಪನ್ನಗಳನ್ನು ಗುರುತಿಸಲು ಕಲರ್ ಕೋಡ್
ಹೊಸದಿಲ್ಲಿ, ಜೂನ್ 25: ಚೀನಿ ವಸ್ತುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಹೊಸ ತಂತ್ರದ ಅನುಷ್ಠಾನಕ್ಕೆ ಮುಂದಾಗಿದೆ. ದೇಶದಾದ್ಯಂತ ಚೀನಿ ವಸ್ತುಗಳ ಬಹಿಷ್ಕಾರದ ಕೂಗು ಎದ್ದಿರುವ ಹೊತ್ತಿನಲ್ಲಿ ಆತ್ಮನಿರ್ಭರ ಭಾರತವನ್ನು ರೂಪಿಸುವ ನಿಟ್ಟಿನಲ್ಲಿ ದೇಶೀ ಮತ್ತು ವಿದೇಶಿ ಉತ್ಪನ್ನಗಳನ್ನು ಪ್ರತ್ಯೇಕಿಸಲು ಉತ್ಪನ್ನಗಳ ಮೇಲೆ ಕಲರ್ ಕೋಡ್ ಗಳನ್ನು ನಮೂದಿಸಲು ನಿರ್ಧರಿಸಿದೆ. ಇದರಿಂದಾಗಿ ಗ್ರಾಹಕರು ಸುಲಭವಾಗಿ ಚೀನಿ ವಸ್ತುಗಳನ್ನು ಪತ್ತೆ ಹಚ್ಚಬಹುದಾಗಿದೆ.
ಈಗಾಗಲೇ ಕೇಂದ್ರವು ಸರ್ಕಾರಿ ಇ-ಮಾರುಕಟ್ಟೆ ತಾಣದಲ್ಲಿ ಮಾರಾಟಗೊಳ್ಳುವ ಉತ್ಪನ್ನಗಳ ಮೂಲ ದೇಶದ ಹೆಸರನ್ನು ನಮೂದಿಸುವುದು ಕಡ್ಡಾಯ ಎಂದು ಸೂಚಿಸಿದ್ದು, ಫ್ಲಿಪ್ ಕಾರ್ಟ್, ಅಮೆಜಾನ್, ಪೇಟಿಎಂನಂತಹ ಖಾಸಗಿ ಇ-ಮಾರುಕಟ್ಟೆ ತಾಣಗಳಲ್ಲೂ ಇದನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ.
ಪ್ರಸ್ತುತ ಮಾರುಕಟ್ಟೆಯ ಉತ್ಪನ್ನಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಉತ್ಪನ್ನಗಳನ್ನು ಪ್ರತ್ಯೇಕಿಸಲು ಹಸಿರು ಮತ್ತು ಕೆಂಪು ಬಣ್ಣದ ಚುಕ್ಕೆಗಳನ್ನು ನಮೂದಿಸಿರುವಂತೆ ಇನ್ನು ಮುಂದೆ ವಿದೇಶಗಳ ಉತ್ಪನ್ನಕ್ಕೂ ಒಂದೊಂದು ಬಣ್ಣ ನಮೂದಿಸಲು ಸರ್ಕಾರ ನಿರ್ಧರಿಸಿದ್ದು, ಭಾರತದ ಉತ್ಪನ್ನಗಳ ಮೇಲೆ ಕೇಸರಿ ಅಥವಾ ಕಿತ್ತಳೆ ಬಣ್ಣ ನಮೂದಿಸಲು ಚಿಂತನೆ ನಡೆಸಿದೆ.