ದಾವಣಗೆರೆ : ಈ ಹಿಂದೆ ನಾನು ನೀಡಿದ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಆಗಬೇಕು. ಅದು ಆಗದಿದ್ದರೆ, ಈ ಹಿಂದೆ ನಾನು ಮಾತು ನೀಡಿದಂತೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸಿಎಂ ಯಡಿಯೂರಪ್ಪ ಜಾರಿ ಮಾಡಲಿದ್ದಾರೆ. ವರದಿ ನೀಡಿ ಒಂದು ತಿಂಗಳು ಮಾತ್ರ ಆಗಿದೆ. ಅದರ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಸಿಎಂ ಬಳಿ ನಿಯೋಗ ಹೋಗಲಿದ್ದೇವೆ. ನಾಗಮೋಹನ್ ದಾಸ್ ವರದಿ ಸರ್ಕಾರದ ಮುಂದಿದೆ. ಕೋವಿಡ್ ಇರುವುದರಿಂದ ತಡೆಹಿಡಿಯಲಾಗಿದೆ. ಅದಷ್ಟು ಬೇಗ ಜಾರಿಗೊಳಿಸಲು ಸಭೆ ನಡೆಸಲಾಗುತ್ತಿದೆ. ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ. ಈಗಾಗಲೇ ನ್ಯಾ.ನಾಗಮೋಹನ ದಾಸ್ ವರದಿ ನೀಡಿದ್ದಾರೆ. ಇದರಲ್ಲಿ ಶೇ.5ರಷ್ಟು ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಆದರೆ ಅದು ಶೇ.7.5 ರಷ್ಟು ಮೀಸಲಾತಿ ಹೆಚ್ಚಳ ಆಗಬೇಕು ಎಂದರು.
ಇದೇ ವೇಳೆ ಡ್ರಗ್ ಮಾಫಿಯಾ ಬಗ್ಗೆ ಮಾತನಾಡಿದ ರಾಮುಲು, ಡ್ರಗ್ಸ್ ಮಾಫಿಯಾದಲ್ಲಿ ಕೇವಲ ಸ್ಯಾಂಡಲ್ ವುಡ್ ನಟ, ನಟಿಯರು ಮಾತ್ರವಲ್ಲ ಯುವ ಪೀಳಿಯೇ ಇದೆ. ನಮ್ಮ ಸರ್ಕಾರದ ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲಿದೆ. ತನಿಖೆ ಪ್ರಗತಿಯಲ್ಲಿದ್ದು, ಪೊಲೀಸರು ಆಳವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.