ಕೊಡಗು, ಮೇ 26 : ಕೊಡಗಿನಲ್ಲಿ ಬ್ರಹ್ಮಾಂಡ ಗುರೂಜಿ ವಿರುದ್ಧ ಸಮಾಜದಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ದೂರು ದಾಖಲಾಗಿದೆ. ಕೊರೋನಾ ವೈರಸ್ ಸೋಂಕಿನ ಪರಿಣಾಮಗಳ ಬಗ್ಗೆ ಭವಿಷ್ಯ ನುಡಿಯುತ್ತಾ ಅವರು ಕೊಡಗು ಮತ್ತೊಮ್ಮೆ ಭಾರಿ ಭೂಕಂಪನಕ್ಕೆ ನಲುಗಿ ಹೋಗಲಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೊಡಗು ಬೆಳೆಗಾರ ಒಕ್ಕೂಟವು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಕೊರೋನಾ ಸೋಂಕಿನ ಪರಿಣಾಮಗಳ ಭವಿಷ್ಯ ನುಡಿದಿದ್ದ ಬ್ರಹ್ಮಾಂಡ ಗುರೂಜಿ ನಾಗೇಂದ್ರ ಶರ್ಮಾ ಕೊರೊನಾ ವೈರಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ದೇವರನ್ನು ನಂಬುವುದೇ ಪರಿಹಾರ ಎಂದಿದ್ದರು. ಜೊತೆಗೆ ಭೂಕಂಪನದ ಬಗ್ಗೆಯೂ ಭವಿಷ್ಯ ನುಡಿದು ಎರಡು ವರ್ಷಗಳ ಹಿಂದೆ ನಡೆದ ಜಲಪ್ರಳಯದಿಂದ ಇನ್ನೂ ಚೇತರಿಸಿಕೊಳ್ಳದ ಕೊಡಗು ಜಿಲ್ಲೆ ಮತ್ತೊಮ್ಮೆ ಪ್ರಕೃತಿ ವಿಕೋಪಕ್ಕೆ ಗುರಿಯಾಗಲಿದ್ದು, ಭೂಕಂಪದಿಂದ ನಲುಗಿ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಗುರೂಜಿ ಭವಿಷ್ಯ ಕೊಡಗಿನ ಜನತೆಯಲ್ಲಿ ಭಯವನ್ನು ಹುಟ್ಟಿಸಿದೆ. ಸಮಾಜದಲ್ಲಿ ಆತಂಕ ಸೃಷ್ಟಿಸಿರುವ ಬ್ರಹ್ಮಾಂಡ ಗುರೂಜಿ ನಾಗೇಂದ್ರ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಬೆಳೆಗಾರ ಒಕ್ಕೂಟವು ದೂರು ಸಲ್ಲಿಸಿದೆ.








