ಕೊರೊನಾ ಸೋಂಕಿತರು , ವೈದ್ಯರಿಗೆ ಅವಮಾನ… ಬಾಬಾ ರಾಮ್ ದೇವ್ ವಿರುದ್ಧ ದೂರು ದಾಖಲು
ಪಂಜಾಬ್ : ಆಕ್ಸಿಜನ್ ಅಗತ್ಯವಿರುವ ಕೋವಿಡ್ ಸೋಂಕಿತರು ಹಾಗೂ ವೈದ್ಯರನ್ನ ಅಪಮಾನಿಸಿದ್ದಾರೆಂದು ಆರೋಪಿಸಿ ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ ನವಜೋತ್ ಸಿಂಗ್ ದಹಿಯಾ ಅವರು ಜಲಂಧರ್ ಪೊಲೀಸ್ ಆಯುಕ್ತರ ಬಳಿ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ಬಾಬಾ ರಾಮದೇವ್ ಹೇಳಿದ್ದ ಹೇಳಿಕೆಯ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹೇಳಿಕೆಯಲ್ಲಿ ‘ಸೋಂಕಿತರಿಗೆ ಸರಿಯಾಗಿ ಉಸಿರಾಡಲು ತಿಳಿದಿಲ್ಲ ಹಾಗೂ ಆಕ್ಸಿಜನ್ ಕೊರತೆಯ ಕುರಿತು ಋಣಾತ್ಮಕತೆಯನ್ನು ಹರಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭ ಚುನಾವಣಾ ರ್ಯಾಲಿ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ಈ ಹಿಂದೆ ‘ಸೂಪರ್ ಸ್ಪ್ರೆಡ್ಡರ್’ ಎಂದು ಬಣ್ಣಿಸಿದ್ದ ದಹಿಯಾ ಅವರು ಇದೀಗ ರಾಮದೇವ್ ವಿರುದ್ಧದ ದೂರಿನಲ್ಲಿ ಅವರು ವೈದ್ಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ, ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಕೋವಿಡ್ ಸೋಂಕಿತರಲ್ಲಿ ಚಿಕಿತ್ಸೆ ಕುರಿತು ಭಯ ಹುಟ್ಟಿಸಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಕೋವಿಡ್ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗಬಾರದು, ಬದಲಿಗೆ ತಮ್ಮ ಸಲಹೆಯಂತೆ ಕೋವಿಡ್ ಗುಣಪಡಿಸಿಕೊಳ್ಳಬೇಕು. ಯಾರಿಗಾದರೂ ಆಕ್ಸಿಜನ್ ಮಟ್ಟ ಕಡಿಮೆಯಾದರೆ ಅಂತಹವರು ಅನುಲೋಮ ವಿಲೋಮ ಪ್ರಾಣಾಯಾಮ ಮತ್ತು ಕಪಾಲ್ ಭತಿ ಪ್ರಾಣಾಯಾಮ ಮಾಡಬೇಕು ಎಂದು ಬಾಬಾ ರಾಮದೇವ್ ಹೇಳುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಹೀಗೆ ಹೇಳುವ ಮೂಲಕ ‘ಕೋವಿಡ್ ಚಿಕಿತ್ಸೆ ಕುರಿತಂತೆ ಸರಕಾರ ನೀಡಿರುವ ಮಾರ್ಗಸೂಚಿಗೆ ವಿರುದ್ಧವಾಗಿ ಅವರು ಸಲಹೆ ನೀಡಿದ್ದಾರೆ’. ಕೋವಿಡ್ ಸೋಂಕಿತರನ್ನು ಪತಂಜಲಿಯ ಯೋಗಪೀಠಕ್ಕೆ ದಾಖಲಿಸುವ ಸಂಚು ರಾಮದೇವ್ ಅವರದ್ದು ಎಂದು ಡಾ. ದಹಿಯಾ ಆರೋಪಿಸಿದ್ದಾರೆ. ಅಲ್ಲದೇ ರಾಮದೇವ್ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ 2005 ಹಾಗೂ ಸಾಂಕ್ರಾಮಿಕ ರೋಗ ಕಾಯಿದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.