ಬಿಜೆಪಿ ಟಿಕೆಟ್ ಕೊಡಿಸುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೈತ್ರಾ ಕುಂದಾಪುರಗೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಅಲ್ಲದೇ, ಮತ್ತೊಬ್ಬ ಆರೋಪಿ ಉಡುಪಿ ಜಿಲ್ಲೆಯ ಪ್ರಸಾದ್ ಬೈಂದೂರುನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸರ್ಚ್ ವಾರೆಂಟ್ ಪಡೆದು ಶೋಧನೆ ನಡೆಸಿದ ಸಿಸಿಬಿ ಪೊಲೀಸರು, ಉಡುಪಿಯ ಉಪ್ಪೂರು ಶ್ರೀರಾಮ ಸೊಸೈಟಿಯ ಬ್ಯಾಂಕ್ ಲಾಕರ್ನಲ್ಲಿ ಇಡಲಾಗಿದ್ದ ಆಸ್ತಿ ಪತ್ರ, ಬಂಗಾರವನ್ನು ಪತ್ತೆ ಮಾಡಲಾಗಿದೆ.
1.8 ಕೋಟಿ ರೂ. ಮೌಲ್ಯದ ಆಸ್ತಿ ಪತ್ರ, 40 ಲಕ್ಷ ನಗದು, 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿವೆ. ಚೈತ್ರಾ, ಸ್ನೇಹಿತ ಶ್ರೀಕಾಂತ್ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಹಣ, ಚಿನ್ನ ಇಟ್ಟಿದ್ದಳು ಎಂಬುವುದು ಬಯಲಿಗೆ ಬಂದಿದೆ. ಇದರೊಂದಿಗೆ ಶ್ರೀಕಾಂತ್ ಹೆಸರಿನಲ್ಲಿ ಉಡುಪಿಯ ಹಿರಿಯಡ್ಕದಲ್ಲಿ ಎರಡು ಹಂತಸ್ತಿನ ಮನೆ ಕಟ್ಟಿಸುತ್ತಿದ್ದಳು. ಪ್ರಸಾದ್ ಬೈಂದೂರನನ್ನು ಮತ್ತೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಚೈತ್ರಾ ಕುಂದಾಪುರ ಮತ್ತು ಪ್ರಸಾದ್ ಬೈಂದೂರು ಹಣದ ಡೀಲ್ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಮಾಜಿ ಸಚಿವರ ಹೆಸರು ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ.








