ADVERTISEMENT
Wednesday, February 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮೂಲ ನಿಷ್ಠಾವಂತರು ವರ್ಸಸ್‌ ಅಲೆಮಾರಿಗಳು ಎನ್ನುವ ಸಂಘರ್ಷಕ್ಕೆ ಬಲಿಯಾಗಲಿದೆಯೇ ತೀರ್ಥಹಳ್ಳಿ ಕಾಂಗ್ರೆಸ್‌

Namratha Rao by Namratha Rao
October 24, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕೃಪೆ – ಹಿಂಡವಿ

ಮೂಲ ನಿಷ್ಠಾವಂತರು ವರ್ಸಸ್‌ ಅಲೆಮಾರಿಗಳು ಎನ್ನುವ ಸಂಘರ್ಷಕ್ಕೆ ಬಲಿಯಾಗಲಿದೆಯೇ ತೀರ್ಥಹಳ್ಳಿ ಕಾಂಗ್ರೆಸ್‌:

Related posts

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

February 4, 2026
ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

February 4, 2026

“ಆರ್‌ಎಂ ಮಂಜುನಾಥ್‌ ಗೌಡರು ಮತ್ತು ಕಿಮ್ಮನೆ ರತ್ನಾಕರ್‌ ನಡುವಿನ ಶೀತಲ ಸಮರ ರಂಪ ರಾಡಿ; ನಾಯಕರ ಸಮನ್ವಯದ ಕೊರತೆಯಿಂದ ಲಾಭ ಯಾರಿಗೆ?”

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ನಾಯಕರ ನಡುವಿನ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿದ್ದಷ್ಟೇ ಅಲ್ಲದೆ ಈಗ ಮತ್ತಷ್ಟು ರಾಡಿಯಾಗಿ ಗಬ್ಬು ನಾರುತ್ತಿದೆ. ಇಂತದ್ದೊಂದು ಸ್ಥಿತಿ ಬಂದೇ ಬರುತ್ತದೆ ಎಂದು ರಾಜಕಾರಣದ ಅಆಇಈ ಗೊತ್ತಿರುವ ಯಾರಾದರೂ ಊಹಿಸಬಹುದಿತ್ತು. ಆದರೆ ರಾಜ್ಯ ಕಾಂಗ್ರೆಸ್‌ ನಾಯಕರು ಹಾಗೆ ಯೋಚಿಸದೇ ಇದ್ದ ಪರಿಣಾಮ ಕೇವಲ ತೀರ್ಥಹಳ್ಳಿ ತಾಲೂಕಿನ ಕಾಂಗ್ರೆಸ್‌ ಸ್ಥಿತಿ ಮಾತ್ರವಲ್ಲ ಜಿಲ್ಲೆಯ ಕಾಂಗ್ರೆಸ್‌ ಮರ್ಯಾದೆ ಮೂರಾಬಟ್ಟೆಯಾಗಿದೆ. ಇದು ಸಿದ್ದರಾಮಯ್ಯ ಆಪ್ತ ಕಿಮ್ಮನೆ ರತ್ನಾಕರ್‌ ವರ್ಸಸ್‌ ಡಿಕೆಶಿ ಬೆಂಬಲಿತ ಆರ್‌.ಎಂ ಮಂಜುನಾಥ್‌ ಗೌಡರ ನಡುವಿನ ಸ್ಟ್ರೈಟ್‌ ಫೈಟ್‌. ಕಾಂಗ್ರೆಸ್‌ ತನ್ನ ಇತಿಹಾಸದ ತಪ್ಪುಗಳಿಂದ ಯಾವತ್ತೂ ಪಾಠ ಕಲಿಯುವುದಿಲ್ಲ ಅನ್ನುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಬಣಗಳಿರುವುದು ಮತ್ತೊಮ್ಮೆ ಸಾಬೀತಾಗಿದೆ. ಮತ್ತು ಮೂಲ ಕಾಂಗ್ರೆಸಿಗರು ಹಾಗೂ ವಲಸಿಗ ನಾಯಕರ ನಡುವೆ ತೀವ್ರ ಭಿನ್ನಾಭಿಪ್ರಾಯ ಇರುವುದು ಸ್ಪಷ್ಟವಾಗುತ್ತಿದೆ. ಗುಂಪುಗಾರಿಕೆ, ಸ್ವಜನಪಕ್ಷಪಾತ ಅನ್ನುವ ಕಾಂಗ್ರೆಸ್‌ನ ಹಳೆಯ ರೋಗಕ್ಕೆ ಮದ್ದೇ ಇಲ್ಲವೇನೋ ಎಂದು ಹತಾಶೆಯಿಂದ ಹೇಳುತ್ತಿದ್ದಾರೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು.

ಯಾವತ್ತೂ ಮಧು ಬಂಗಾರಪ್ಪ ಕಾಂಗ್ರೆಸ್‌ ಮೊಗಸಾಲೆಗೆ ಧುಮುಕಲು ಸಿದ್ಧರಾದರೂ ಅವತ್ತೇ ಆರ್‌ಎಂ ಮಂಜುನಾಥ ಗೌಡರೂ ಸಹ ಕಾಂಗ್ರೆಸ್‌ ಬಾಗಿಲು ಬಡಿಯುವುದು ನಿಕ್ಕಿಯಾಗಿತ್ತು. ಆಗಲೇ ರಾಜ್ಯ ನಾಯಕರು ಮುಂದಾಗುವ ವಿದ್ಯಮಾನಗಳನ್ನು ಅವಲೋಕಿಸಬೇಕಿತ್ತು. ಕಾರಣ ತೀರಾ ಸ್ಪಷ್ಟ. ತೀರ್ಥಹಳ್ಳಿಯಲ್ಲಿ ಸಹಜವಾಗಿಯೇ ನಾಯಕತ್ವದ ಕುರಿತಾಗಿ ಭಿನ್ನಾಭಿಪ್ರಾಯ ಮೂಡುತ್ತದೆ. ಸೈದ್ಧಾಂತಿಕವಾಗಿ ಆರ್‌ಎಂಎಂ ಮತ್ತು ಕಿಮ್ಮನೆ ವಿರೋಧಿಗಳು. ೨೦೧೩ರ ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ ಆಗ ಕೆಜೆಪಿಯಿಂದ ಸ್ಫರ್ಧಿಸಿದ್ದ ಆರ್.ಎಮ್.ಮಂಜುನಾಥ್‌ ಗೌಡರನ್ನು ೧೩೪೩ ಮತಗಳ ಅಂತರದಲ್ಲಿ ಸೋಲಿಸಿದ್ದರು. ಅದರ ನಂತರದ ಚುನಾವಣೆಯಲ್ಲಿ ಅಂದರೆ ೨೦೧೮ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಫರ್ಧಿಸಿದ್ದ ಮಂಜುನಾಥ್‌ ಗೌಡರು ಮತ ವಿಭಜನೆ ಮಾಡಿದ್ದರಿಂದಲೇ ಆರಗ ಜ್ಞಾನೇಂದ್ರ ವಿರುದ್ಧ ೨೧,೯೫೫ ಮತಗಳ ಅಂತರದಲ್ಲಿ ಕಿಮ್ಮನೆ ರತ್ನಾಕರ್‌ ಸೋಲು ಕಾಣಬೇಕಾಗಿತ್ತು. ಈ ಹಿಂದಿನಿಂದಲೂ ಕಿಮ್ಮನೆ ರತ್ನಾಕರ್‌ ಕಾಂಗ್ರೆಸ್‌ ವಿಚಾರಧಾರೆಯೊಂದಿಗೆ ಗಟ್ಟಿಯಾಗಿ ಗುರುತಿಸಿಕೊಂಡು ನಿಂತವರು. ಆದರೆ ಆರ್‌ಎಂಎಂ ಕೆಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಎಲ್ಲಾ ಪರ್ಯಟನೆ ಮುಗಿಸಿ ಈಗ ಮತ್ತೊಮ್ಮೆ ಕಾಂಗ್ರೆಸ್‌ ಹೊಸ್ತಿಲು ದಾಟಿದವರು. ಇಂತಹ ಕಣ್ಣಿಗೆ ಕಾಣುವ ಸತ್ಯವನ್ನು ಜಿಲ್ಲೆಯ ನಾಯಕರಾಗಲೀ ರಾಜ್ಯ ನಾಯಕರಾಗಲಿ ಗುರುತಿಸದೇ ಇರುವುದನ್ನು ನೇರವಾಗಿ ಹೇಳುವುದಾದರೆ ಅದು ಸುಸೈಡ್‌ ಅಟೆಂಪ್ಟ್‌ ಅಷ್ಟೆ. ಈ ಕಾರಣದಿಂದಲೇ ಕಿಮ್ಮನೆಯವರು ತುಂಬಿದ ಸಭೆಯಲ್ಲಿ ಖುದ್ದು ಮಂಜುನಾಥ್‌ ಗೌಡರ ಎದುರೇ ಅವರ ಹೆಸರು ಹೇಳದೆ ಅಲೆಮಾರಿ ಎನ್ನುವ ಪದ ಬಳಸಿದ್ದು. ಈ ಸಂಗತಿಗಳು ಅಂಗೈ ಗೆರೆಗಳಂತೆ ಸ್ಪಷ್ಟ. ಇಲ್ಲಿ ಎದ್ದು ಕಾಣುವ ವೈಫಲ್ಯ ತೀರ್ಥಹಳ್ಳಿಯ ಈ ಇಬ್ಬರು ನಾಯಕರ ನಡುವಿನ ಸಮನ್ವಯದ ಕೊರತೆಯಲ್ಲ. ರಾಜ್ಯ ನಾಯಕರು ಈ ಇಬ್ಬರೂ ನಾಯಕರನ್ನು ಕೂರಿಸಿಕೊಂಡು ಮಾತಾಡದೇ ಇದ್ದಿದ್ದು.

ಕೆಲವು ದಿನಗಳ ಹಿಂದೆ ಶರಾವತಿ, ಚಕ್ರ, ಸಾವೇಹಕ್ಲು, ವರಾಹಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ, ತೀರ್ಥಹಳ್ಳಿ ತಾಲ್ಲೂಕಿನ ಕಲ್ಲುಕೊಪ್ಪದಿಂದ ತೀರ್ಥಹಳ್ಳಿ ತಾಲೂಕು ಕಚೇರಿಯವರೆಗೆ ಸುಮಾರು 45 ಕಿಮೀ. ಪಾದಯಾತ್ರೆ ನಡೆಯಿತಲ್ಲ, ಅದರ ಸಂಪೂರ್ಣ ರೂಪುರೇಷೆ ಆರ್‌ಎಂ ಮಂಜುನಾಥ್‌ ಗೌಡರದ್ದು. ಅಸಲು ಸಮಸ್ಯೆ ಶುರುವಾಗಿದ್ದೇ ಇಲ್ಲಿ. ಕಿಮ್ಮನೆ ರತ್ನಾಕರ್‌ ಅವರನ್ನು ಕೆರಳಿಸಿದ್ದು ಆ ಪಾದಯಾತ್ರೆಯಲ್ಲಿ ಜೆಡಿಎಸ್‌ನ ಶ್ರೀಕಾಂತ್‌ ಜೆಡಿಎಸ್‌ ಬಾವುಟದೊಂದಿಗೆ ಕಾಣಿಸಿಕೊಂಡಿದ್ದಲ್ಲ. ವಾಸ್ತವವಾಗಿ ಮಂಜುನಾಥ್‌ ಗೌಡರು ಈ ಪಾದಯಾತ್ರೆ ಕಾರ್ಯಕ್ರಮ ರೂಪಿಸುವ ಮೊದಲು ಕಿಮ್ಮನೆಯವರ ಬಳಿ ಮಾತುಕಥೆ ನಡೆಸಬೇಕಿತ್ತು. ಅವರ ನೇತೃತ್ವದಲ್ಲಿಯೇ ಈ ಪಾದಯಾತ್ರೆ ನಡೆಯಬೇಕಿತ್ತು. ದೀರ್ಘಕಾಲ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡವರಿಗೆ ಅಂತದ್ದೊಂದು ಇಗೋ ಇರುವುದು ಸಹಜ. ಅದರಲ್ಲೂ ತಮ್ಮ ಬದ್ಧ ಎದುರಾಳಿ ತಮ್ಮದೇ ಪಕ್ಷಕ್ಕೆ ಬಂದಾಗ ಒಂದು ಮಟ್ಟಿನ ಅಭದ್ರತೆ ಊಂಟಾಗುವುದೂ ಸಹಜವೇ. ರಾಜಕಾರಣದಿಂದ ಕಿಮ್ಮನೆ ಹಣ ಮಾಡಲಿಲ್ಲ ಅನ್ನುವುದು ತೀರ್ಥಹಳ್ಳಿಯ ಎಲ್ಲರಿಗೂ ತಿಳಿದಿರುವಂತದ್ದೆ. ಹಾಗಿದ್ದಾಗ ಪಕ್ಷಕ್ಕಾಗಿ ಜೀವನ ಸವೆಸಿದ ತಮಗೆ ಪಕ್ಷ ಒಂದು ಗೌರವ ಕೊಡಬೇಕು ಎಂದು ಅವರು ಬಯಸಿದರೆ ತಪ್ಪೇನಿಲ್ಲ. ಇದನ್ನು ಆರ್‌ಎಂ ಮಂಜುನಾಥ ಗೌಡರು ಅರ್ಥ ಮಾಡಿಕೊಳ್ಳಬೇಕಿತ್ತು ಅಥವಾ ರಾಜ್ಯ ನಾಯಕರು ಈ ಸೂಕ್ಷ್ಮ ಪರಿಸ್ಥಿತಿಯನ್ನು ಮೊದಲೇ ಅವಲೋಕಿಸಬೇಕಿತ್ತು.

ಆದರೆ ಇಲ್ಲೇ ಸಿದ್ಧರಾಮಯ್ಯ ಮತ್ತು ಡಿಕಿಶಿ ನಡುವಿನ ಗೊಂದಲ ಬಗೆಹರಿದಿಲ್ಲ, ಇನ್ನು ತೀರ್ಥಹಳ್ಳಿಯ ನಾಯಕತ್ವ ಗೊಂದಲವನ್ನು ಇವರು ಹೇಗೆ ಬಗೆಹರಿಸಿಯಾರು. ಇನ್ನು ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವ ಸಾಮರ್ಥ್ಯವಿರುವ ಮಧು ಬಂಗಾರಪ್ಪನವರಾದರೂ ಇಂತದ್ದೊಂದು ಸನ್ನಿವೇಶ ಎದುರಾಗಬಹುದಾದ ಸಾಧ್ಯತೆ ಊಹಿಸಬಹುದಿತ್ತು. ಪಾದಯಾತ್ರೆಯೇನೋ ನಡೆಯಿತು. ಆದರೆ ತದನಂತರ ಬಹಿರಂಗ ಸಭೆಯಲ್ಲಿ ಮೂಲ ಕಾಂಗ್ರೆಸಿಗರು ಮತ್ತು ವಲಸಿಗರ ನಡುವೆ ಘರ್ಷಣೆ, ಅಲೆಮಾರಿ ಅನ್ನುವ ಪದಬಳಕೆ, ಅದರ ನಂತರ ಶರಾವತಿ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯಿಂದ ಸಂಚಾಲಕ ಲೋಕೇಶ್ ಸುದ್ದಿಗೋಷ್ಠಿ ನಡೆಸಿ ಕಿಮ್ಮನೆ ವಿರುದ್ಧ ಕಿಡಿಕಾರಿದ್ದು ಇವೆಲ್ಲವೂ ಉರಿವ ಬೆಂಕಿಗೆ ತುಪ್ಪ ಸುರಿದಂತಾಯಿತು ಅಷ್ಟೆ. ಕೊನೇ ಪಕ್ಷ ಕಾಗೋಡು ತಿಮ್ಮಪ್ಪನವರಂತೆ ಇಬ್ಬರೂ ನಾಯಕರಿಗೆ ಕಿವಿ ಹಿಂಡುವ ಪ್ರಯತ್ನ ಶಿವಮೊಗ್ಗ ಕಾಂಗ್ರೆಸ್‌ನ ಉಳಿದವರು ಮಾಡದೇ ಇದ್ದಿದ್ದರಿಂದ ಈಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.

ಯಾವಾಗ ಕಿಮ್ಮನೆ ರತ್ನಾಕರ್‌ ಆರ್‌ಎಂಎಂ ವಿರುದ್ಧದ ತಮ್ಮ ದೀರ್ಘ ಕಾಲದ ಅಸಹನೆಯನ್ನು ಬಹಿರಂಗವಾಗಿ ತೋಡಿಕೊಂಡರೋ ಆಗಲೇ ಜಿಲ್ಲೆಯ ಉಳಿದ ನಾಯಕರು ಎಚ್ಚೆತ್ತುಕೊಂಡಿದ್ದರೆ ಈಗ ರಂಪ ರಾಡಿ ಆಗುತ್ತಿರಲಿಲ್ಲ. ಒಂದು ಕಡೆ ಜೆಡಿಎಸ್ ಮುಖಂಡ ಶ್ರೀಕಾಂತ್ರನ್ನು ಕಾಂಗ್ರೆಸ್‌ಗೆ ಕರೆತರುವ ತೆರೆಮರೆಯ ಪ್ರಯತ್ನಗಳಾಗುತ್ತಿವೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಇವೆಲ್ಲವೂ ಅಗತ್ಯ ಎಂದು ಮನವರಿಕೆ ಮಾಡಿಕೊಟ್ಟು ಕಿಮ್ಮನೆಯವರ ಜವಾಬ್ದಾರಿ ಪಕ್ಕಾ ಮಾಡಿದ್ದರೂ ಸಾಕಿತ್ತು. ಎರಡು ಬಾರಿ ಶಾಸಕರಾಗಿರುವ ಮತ್ತು ಒಮ್ಮೆ ಸಚಿವರಾಗಿ ಅನುಭವ ಹೊಂದಿರುವ ಕಿಮ್ಮನೆ ರತ್ನಾಕರ್‌ ಸ್ವಭಾವತಃ ಸರಳ ಸಜ್ಜನ ಎನ್ನುವ ಹಣೆಪಟ್ಟಿ ಹೊಂದಿರುವ ಕಾಂಗ್ರೆಸ್‌ ನಾಯಕ. ಕಾಂಗ್ರೆಸ್‌ನ ಕೆಲವೇ ಥಿಂಕ್‌ ಟ್ಯಾಂಕ್‌ ನಾಯಕರ ಪೈಕಿ ಕಿಮ್ಮನೆಯವರೂ ಒಬ್ಬರು. ಹಾಗಾಗಿಯೇ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿಸಿರುವುದು. ಇನ್ನು ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಬಂಡಿ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್, ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ತಾ.ಪಂ. ಮಾಜಿ ಸದಸ್ಯ ಎರಗಿ ಉಮೇಶ್, ಬಿ.ಜಿ ಚಂದ್ರಮೌಳಿ, ಪಟ್ಟಣ ಪಂಚಾಯತ್‌ ಸದಸ್ಯ ಅಶ್ವಿನಿ ಕುಮಾರ್ ಮುಂತಾದವರು ಕಿಮ್ಮನೆಯವರೊಂದಿಗೆ ಗುರುತಿಸಿಕೊಂಡಿದ್ದಾರೆ. ಕಿಮ್ಮನೆಯವರೇನಾದರೂ ಮುಷ್ಕರ ಹೂಡಿದರೆ ಅದರ ನಷ್ಟ ತೀರ್ಥಹಳ್ಳಿ ತಾಲೂಕು ಕಾಂಗ್ರೆಸ್‌ಗೆ ವಿನಃ ಅವರಿಗಲ್ಲ.  ‌

ಈಗ ಕಿಮ್ಮನೆಯವರು ಅಸಮಧಾನವೇ ಕಾಂಗ್ರೆಸ್‌ಗೆ ಬಾರಿ ಸಂಕಟ ತಂದೊಡ್ಡಬಹುದು. ಈ ನಡುವೆ ಮೊನ್ನೆ ಅಕ್ಟೋಬರ್ 2ರ ಗಾಂಧಿ ಜಯಂತಿಯ ದಿನದಂದು ಮಂಡಗದ್ದೆ ಅರಣ್ಯಾಧಿಕಾರಿಗಳ ದೌರ್ಜನ್ಯದ ವಿರುದ್ಧ ಪಾದಯಾತ್ರೆ ಮತ್ತು ಧರಣಿ ಸತ್ಯಾಗ್ರಹ ನಡೆಸುವ ಕಿಮ್ಮನೆಯವರ ಪ್ರಯತ್ನಕ್ಕೆ ಆರ್‌ಎಂಎಂ ಅಡ್ಡಿ ಮಾಡಿದ್ದು ಮತ್ತಷ್ಟು ಹೊಲಸು ಮಾಡಿದೆ. ಕಿಮ್ಮನೆ ರತ್ನಾಕರ್‌ ಪಾದಯಾತ್ರೆ ವಿಫಲಗೊಳಿಸಲು ತಮ್ಮ ಮೇಲೆ ಸ್ವತಃ ಆರ್‌ ಎಂ ಮಂಜುನಾಥ ಗೌಡರೇ ಒತ್ತಡ ತಂದು ವೀಡಿಯೋ ಮಾಡಿಸಿದರು ಎನ್ನುವ ಮೂಲಕ ಕೊಪ್ಪಸರ ಮಂಜುನಾಥ್‌ ಆರೋಪಿಸಿದ್ದಾರೆ. ಪಾದಯಾತ್ರೆಗೆ ಸಹಕಾರ ನೀಡಬಾರದು ಮತ್ತು ಕಿಮ್ಮನೆ ರತ್ನಾಕರ್‌ ಪಾದಯಾತ್ರೆಗೆ ವಿರುದ್ಧ ಹೇಳಿಕೆ ನೀಡಬೇಕು. ಇಲ್ಲದಿದ್ದರೆ ಮುಂದೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಅರಣ್ಯ ಇಲಾಖೆ, ಕೋರ್ಟು ಕಚೇರಿ ತಿರುಗಬೇಕಾಗುತ್ತದೆ ಎಂದು ಆರ್‌ಎಂಎಂ ಬೆದರಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ಕೊಪ್ಪಸರ ಮಂಜುನಾಥ್‌ ಮತ್ತು ಕುಟುಂಬ ಹೇಳಿಕೆ ನೀಡಿದ್ದು ಈಗ ಮತ್ತೊಂದು ವಿವಾದ ಹುಟ್ಟುಹಾಕಿದೆ.

ಅಸಲಿಗೆ ಅಕ್ಟೋಬರ್‌ ೨ರಂದು ಇದೇ ಕೊಪ್ಪಸರ ಮಂಜುನಾಥ್‌ ನಿವಾಸದಿಂದಲೇ ಪಾದಯಾತ್ರೆ ಆರಂಭವಾಗಬೇಕಿತ್ತು. ಸಿಂಗನ ಬಿದರೆ ಗ್ರಾಮ ಹೆಗಲತ್ತಿ ಕೊಪ್ಪದಿಂದ ಪಾದಯಾತ್ರೆಗೆ ಚಾಲನೆ ಸಿಗಬೇಕಿತ್ತು. ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಹಾಗೂ ಬಿಜೆಪಿಯೇತರ ವ್ಯಕ್ತಿಗಳ ಮೇಲೆ ಬಿಜೆಪಿ ಮುಖಂಡರು ಮತ್ತು ಗೃಹ ಸಚಿವರ ಮಾರ್ಗದರ್ಶನದ ಮೇರೆಗೆ ಮೂರು ವರ್ಷಗಳಿಂದ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಬಡ ರೈತರ ಮೇಲೆ ಅರಣ್ಯ ಇಲಾಖೆ ಸುಳ್ಳು ಕೇಸುಗಳನ್ನು ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದೆ. ಅರಣ್ಯಾಧಿಕಾರಿಗಳ ತಾರತಮ್ಯ ನೀತಿಯ ವಿರುದ್ಧ ಹೆಗಲತ್ತಿ ಕೊಪ್ಪಾಸರ ಮಂಜುನಾಥ ಪೂಜಾರಿ ಅವರ ಮನೆಯಿಂದ ಮಂಡಗದ್ದೆ ಅರಣ್ಯ ಕಚೇರಿ ವರೆಗೆ ಹದಿನಾರು ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಿಮ್ಮನೆ ರತ್ನಾಕರ್‌ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.

ಆದರೆ ಅದಕ್ಕೂ ಒಂದು ದಿನ ಮೊದಲೇ ಕೊಪ್ಪಸರ ಮಂಜುನಾಥ್‌ ತಮಗೆ ಅರಣ್ಯ ಇಲಾಖೆಯಿಂದ ಯಾವುದೇ ಕಿರುಕುಳ ಉಂಟಾಗಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಕಿಮ್ಮನೆ ರತ್ನಾಕರ್‌ ಅವರೇ ತಮ್ಮ ಕುಟುಂಬದ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಆದರೂ ಕಿಮ್ಮನೆ ರತ್ನಾಕರ್‌ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರ ಸಹಿತ ಅರಣ್ಯ ಇಲಾಖೆಯ ಕಿರುಕುಳಕ್ಕೆ ಒಳಗಾದ ಕುಟುಂಬದವರೊಂದಿಗೆ ಯಶಸ್ವಿ ಪಾದಯಾತ್ರೆ ನಡೆಸಿಬಿಟ್ಟರು. ಇದಾದ ನಂತರವೇ ಕೊಪ್ಪಸರ ಮಂಜುನಾಥ್‌ ಸುದ್ದಿಗೋಷ್ಠೀ ನಡೆಸಿ ಆರ್‌ ಎಂ ಮಂಜುನಾಥ್‌ ಗೌಡರ ಬೆಂಬಲಿಗರಾದ ರಾಘು, ವಿಶ್ವನಾಥ್‌ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿ ಫೈನಾನ್ಸ್‌ ಒಂದರಲ್ಲಿ ಒತ್ತಡ ತಂದು ವೀಡಿಯೋ ಮಾಡಿಸಿದ್ದರು ಎಂದು ಪ್ಲೇಟ್‌ ಬದಲಾಯಿಸಿದ್ದು.

ಇಷ್ಟೆಲ್ಲಾ ಆದ ನಂತರ ತೀರ್ಥಹಳ್ಳಿ ಮತ್ತು ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಎರಡು ಬಣವಾಗಿರುವುದು ಸ್ಪಷ್ಟ. ಒಂದು ಮೂಲ ಹಾಗೂ ನಿಷ್ಠ ಕಾಂಗ್ರೆಸಿಗರು ಮತ್ತೊಂದು ವಲಸಿಗರು ಅಥವಾ ಕಿಮ್ಮನೆಯವರ ಭಾಷೆಯಲ್ಲಿ ಹೇಳುವುದಾದರೆ ಅಲೆಮಾರಿಗಳು. ಇದು ನಿಜಕ್ಕೂ ಜಿಲ್ಲೆಯ ಕಾಂಗ್ರೆಸ್‌ ನಾಯಕರಿಗೆ ಅಗ್ನಿಪರೀಕ್ಷೆಯ ಸಮಯ. ಬಿಜೆಪಿಯಲ್ಲಿಯೂ ಮೂಲ ಮತ್ತು ವಲಸಿಗ ಎನ್ನುವ ಅಸಮಧಾನಗಳಿವೆ. ಆದರೆ ಚುನಾವಣೆ ಬಂದಾಗ ಎರಡೂ ಪಾಳೆಯ ಒಟ್ಟಾಗಿ ನಿಂತು ತಮ್ಮ ಅಭ್ಯರ್ಥಿಯ ಗೆಲುವಿಗೆ ನಿದ್ದೆಗೆಡುತ್ತವೆ. ಇಷ್ಟೇ ವ್ಯತ್ಯಾಸ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ. ಹಿಂದೆ ಬಂಗಾರಪ್ಪ ಶಿವಮೊಗ್ಗದ ಉಸ್ತುವಾರಿ ಹೊತ್ತಾಗ ಇಂತಹ ಅನೇಕ ಸಮಸ್ಯೆಗಳನ್ನು ಲೀಲಾಜಾಲವಾಗಿ ಬಗೆಹರಿಸುತ್ತಿದ್ದರು. ಎಲ್ಲಾದರೂ ಅಪಸ್ವರ ಕೇಳಿಬಂದರೆ ಮುಲಾಜಿಲ್ಲದೆ ಗುಡುಗುತ್ತಿದ್ದರು. ಈಗ ಮಧು ಬಂಗಾರಪ್ಪನವರ ಮೇಲೆ ಅಂತದ್ದೊಂದು ಮಹತ್ವದ ಹೊಣೆಯಿದೆ. ಈಗಾಗಲೇ ಹರಿದು ಊರುಬಾಗಿಲಾಗಿರುವ ಪಕ್ಷದ ಸ್ಥಿತಿಯನ್ನು ಇನ್ನಷ್ಟು ಅದ್ವಾನವಾಗದಂತೆ ತಡೆಯಬೇಕಿದ್ದರೆ ಅವರು ರಂಗಪ್ರವೇಶ ಮಾಡಲೇಬೇಕು. ಜಿಲ್ಲೆಯ ನಾಯಕರ ನಡುವೆ ಮಾತುಕಥೆ ನಡೆಸಿ ಸಮನ್ವಯ ಸಾಧಿಸಬೇಕು. ಇಲ್ಲವಾದರೆ ದೋಬಿ ಕಾ ಕುತ್ತಾ ನ ಘರ್‌ ಕಾ ನಾ ಘಾಟ್‌ ಕಾ ಅಷ್ಟೆ..

-ಮುಕ್ತಾರ್‌ ಅಲಿ, ವರದಿಗಾರ

ಬಾಕ್ಸ್‌-೧:

ಕಿಮ್ಮನೆ ಯಾಕೆ ಆರ್‌ಎಂಎಂ ವಿರುದ್ಧ ಗುರ್‌ ಅಂತಾರೆ?

ಕಿಮ್ಮನೆ ರತ್ನಾಕರ್‌ ಅವರ ಅಸಮಾಧಾನಗಳಿಗೆ ನಿಜವಾದ ಕಾರಣಗಳೇನೆಂದರೆ ಒಂದು ಆರ್‌ಎಂಎಂ ಮೊದಲಿನಿಂದಲೂ ಕಿಮ್ಮನೆಯವರ ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿ. ಮಂಜುನಾಥ್‌ ಗೌಡರು ಕಾಂಗ್ರೆಸ್‌ ಸೇರುವುದನ್ನು ಮೊದಲಿಂದಲೂ ಕಿಮ್ಮನೆ ವಿರೋಧಿಸುತ್ತಲೇ ಬಂದಿದ್ದರು. ಇದರ ಮಧ್ಯೆ ಕಾಂಗ್ರೆಸ್ಸಿಗೆ ಸೇರಿದ ಮಾರನೇ ದಿನದಿಂದಲೇ ಆರ್‌ಎಂಎಂ ಗುಂಪುಗಾರಿಕೆ ನಡೆಸುತ್ತಿದ್ದಾರೆ. ಹೀಗಾಗಿ, ಅವರನ್ನು ಪಕ್ಷದಿಂದ ಹೊರ ಹಾಕುವುದು ಜಿಲ್ಲಾ ರಾಜ್ಯ ಘಟಕಕ್ಕೆ ಅನಿವಾರ್ಯ ಎಂದು ಅಸಮಧಾನ ತೋಡಿಕೊಂಡಿದ್ದರು ಕಿಮ್ಮನೆ. ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಘಟಕವನ್ನು ಕಡೆಗಣಿಸಿ ಪಕ್ಷದ ಮುಖಂಡರ ಪೋಟೊ ಬಳಸಿ ಖಾಸಗಿ ಕಾರ್ಯಕ್ರಮ, ಪಾದಯಾತ್ರೆ ಚಳವಳಿ ಹಮ್ಮಿಕೊಂಡು ಭಾಗವಹಿಸಿ ಎಂದು ಕಾಂಗ್ರೆಸಿಗರನ್ನು ಆಹ್ವಾನಿಸಲಾಗಿದೆ. ಅವರ ಈ ವರ್ತನೆ ಪಕ್ಷ ವಿರೋಧಿ ಚಟುವಟಿಕೆ ಎಂದು ಭಾವಿಸಬೇಕು ಎಂದು ಕಿಮ್ಮನೆ ದೂರಿದ್ದರು.

ಹಣ, ಹೆಂಡ, ಬಿರಿಯಾನಿ ಮೂಲಕ ತೀರ್ಥಹಳ್ಳಿ ಕೇತ್ರದಲ್ಲಿ, ಜನಮನ್ನಣೆ ಪಡೆಯಬಹುದೆಂಬ ಭಾವನೆ ಮಂಜುನಾಥ್‌ ಗೌಡರಿಗಿದೆ ಅನ್ನುವುದು ಕಿಮ್ಮನೆಯವರ ಅತಿ ಮುಖ್ಯ ಆರೋಪ. ಇದರ ಜೊತೆ ಶರಾವತಿ ಸಂತ್ರಸ್ತರು, ಬಗರ್‌ ಹುಕುಂ ಸಾಗುವಳಿ ರೈತರಿಗೆ ನ್ಯಾಯ ಕೊಡಿಸಲು ಕಳೆದ 35 ವರ್ಷದಿಂದ ಹೋರಾಟ ಮಾಡದ ಮಂಜುನಾಥ ಗೌಡರು ಈಗ ಎದ್ದು ಕುಳಿತಿರುವುದೇಕೆ? ಹಾಗೆಯೇ ತಮ್ಮ‌ ಜತೆಗೆ ಬರದಿದ್ದರೆ ಜಿಪಂ, ತಾಪಂ ಚುನಾವಣೆಯಲ್ಲಿ ಟಿಕೆಟ್ ಸಿಗದಂತೆ ಮಾಡುವ ಧಮಕಿ ಹಾಕುತ್ತಿರುವುದೇಕೆ ಅನ್ನುವುದು ಕಿಮ್ಮನೆಯವರ ಬಹುರಂಗ ಪ್ರಶ್ನೆ.

ಬಾಕ್ಸ್‌-೨:

ತೀರ್ಥಹಳ್ಳಿ ಕಾಂಗ್ರೆಸ್‌ಗೆ ರಮೇಶ್‌ ಹೆಗ್ಡೆ ಎಂಬ ಪರ್ಯಾಯ ನಾಯಕ?

ಈ ನಡುವೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದಲ್ಲಿ ಇಬ್ಬರೂ ಮುಖಂಡರ ನಡುವೆ ಉಲ್ಭಣಗೊಂಡಿರುವ ಭಿನ್ನಮತ ಗಾಯ ವಾಸಿಯಾಗದ ಸ್ಥಿತಿ ತಲುಪಿರುವ ಕಾರಣ ಹೊಸ ದಾರಿ ಹಿಡಯಬೇಕು ಅನ್ನುವ ಮಾತುಗಳು ಕೇಳಿಬರುತ್ತಿವೆ. ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೇಸ್‌ಗೆ ಕಾರ್ಯಕರ್ತರನ್ನು ಒಂದಾಗಿಸಿ ಒಗ್ಗಟ್ಟಾಗಿ ಮುನ್ನೆಡೆಸುವ ಸಮರ್ಥ ಮುಖಂಡರನ್ನು ನೇಮಿಸಬೇಕು ಅನ್ನುವ ಆಗ್ರಹಗಳೂ ಕೇಳಿ ಬಂದಿವೆ. ತೀರ್ಥಹಳ್ಳಿ ಮೂಲದ ಶಿವಮೊಗ್ಗ ನಗರಸಭೆಯ ಮಾಜಿ ಅಧ್ಯಕ್ಷ, ಹಾಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆಯವರಿಗೆ ತೀರ್ಥಹಳ್ಳಿ ಜವಾಬ್ದಾರಿ ವಹಿಸಬೇಕು ಅನ್ನುವ ಮಾತುಗಳು ಕಾರ್ಯಕರ್ತರ ವಲಯದಿಂದ ಕೇಳಿ ಬರುತ್ತಿದೆ.

ಬಿ.ಎ.ರಮೇಶ್ ಹೆಗ್ಡೆ ಮೂಲತಃ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯವರು. ರಾಜಕೀಯದ ಪಡಸಾಲೆಯಲ್ಲಿ ಹೆಚ್ಚು ಅನುಭವ ಪಡೆದಿದ್ದು ಶಿವಮೊಗ್ಗದ ರಾಜಕಾರಣದಲ್ಲಾದರೂ ಒಬ್ಬ ರಾಜಕಾರಣಿಗೆ ಇರಬೇಕಾದ ಎಲ್ಲಾ ರೀತಿಯ ಅನುಭವ ಅವರಿಗಿದೆ. ಆಳವಾದ ಅಧ್ಯಯನ, ಯಾವುದೇ ವಿಷಯದಲ್ಲಾದರೂ ನಿರ್ಧಿಷ್ಟವಾಗಿ ನಿಷ್ಟುರವಾಗಿ ಮಾತನಾಡುವ ಸಾಮರ್ಥ್ಯವಿದೆ. ಮಲೆನಾಡಿನ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಸಮಗ್ರವಾದ ಮಾಹಿತಿಯೊಂದಿಗೆ, ಕಾನೂನು ಬದ್ಧವಾಗಿ ವಿಚಾರ ಮಂಡಿಸುವ ವಾಕ್ಪಟು. ಮಲೆನಾಡಿನ ನಿರಂತರ ಸಮಸ್ಯೆಗಳಾದ ಅರಣ್ಯ ಹಕ್ಕು, ಬಗರ್ ಹುಕುಂ, ಒತ್ತುವರಿ ವಿಚಾರ, ಮುಳುಗಡೆ ಸಂತ್ರಸ್ಥರ ಸಮಸ್ಯೆ ಮುಂತಾದ ವಿಷಯಗಳ ಬಗ್ಗೆ ಹಲವು ವರ್ಷಗಳಿಂದ ಸರ್ಕಾರಗಳ ಗಮನಕ್ಕೆ ಅಂಕಿ ಅಂಶಗಳ ಮೂಲಕ ಸೂಕ್ತ ಮಾಹಿತಿ ನೀಡುತ್ತ ಬಂದಿದ್ದಾರೆ. ಅಧಿಕಾರಿಶಾಹಿ ವ್ಯವಸ್ಥೆಯ ಹಿರಿಯ ಅಧಿಕಾರಿಗಳಿಗಿಂತ ಹೆಚ್ಚಿನ ಮಾಹಿತಿಯುಳ್ಳ ಒಬ್ಬ ಪಕ್ವ ರಾಜಕಾರಣಿ ಅವರು. ಪ್ರಸ್ತುತ ಚಳುವಳಿ ರೂಪ ಪಡೆದಿರುವ ಶರಾವತಿ ಸಂತ್ರಸ್ಥರ ಬೇಡಿಕೆಯ ಹೋರಾಟಕ್ಕೆ ಹಲವು ವರ್ಷಗಳ ಹಿಂದೆ ಜೀವ ತುಂಬಿದವರೇ ರಮೇಶ್ ಹೆಗಡೆ.

ಶಿವಮೊಗ್ಗದ ಮಹಾನಗರ ಪಾಲಿಕೆಯ ಸದಸ್ಯರಾಗಿದ್ದರೂ, ತೀರ್ಥಹಳ್ಳಿ ಕ್ಷೇತ್ರದ ಯಾವುದೇ ಸಮಸ್ಯೆಗಳಿಗೂ ಪರಿಹಾರದ ಕಲ್ಪಿಸಿಕೊಡುವ ಬದ್ಧತೆ, ಪ್ರಾಮಾಣಿಕತೆ ರಮೇಶ್‌ ಹೆಗ್ಡೆಯವರಿಗಿದೆ. ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ, ಬಡವರ, ಕೂಲಿ ಕಾರ್ಮಿಕ ವರ್ಗದವರ ನಾಡಿಮಿಡಿತ ಅರಿತ ಪಕ್ವ ಜನಪ್ರತಿನಿಧಿಯಾಗುವ ಎಲ್ಲಾ ಸೂಚನೆ ಇರುವ ರಮೇಶ್ ಹೆಗ್ಡೆ ತೀರ್ಥಹಳ್ಳಿ ಕ್ಷೇತ್ರಕ್ಕೆ ಅವಶ್ಯಕವಾಗಿದ್ದಾರೆ ಎಂಬ ಮಾತು ತಾಲೂಕಿನ ಹಲವರ ಅನಿಸಿಕೆ ಆಗಿದೆ.

ರಮೇಶ್ ಹೆಗ್ಡೆ ಮನಸು ಮಾಡಿದ್ದರೆ ಮೂರು ದಶಕಗಳ ರಾಜಕಾರಣದಲ್ಲಿ ರಾಜಕೀಯ ವಲಯದಲ್ಲಿ ಉನ್ನತ ಹುದ್ದೆ ಏರಬಹುದಿತ್ತು. ಹಣ, ಅಂತಸ್ತು, ಪ್ರಭಾವ ಬಳಸಿ ಕಾಂಗ್ರೇಸ್ ಪಕ್ಷದಲ್ಲಿ ಮೆರೆಯಬಹುದಿತ್ತು. ಆದರೆ ಈ ವ್ಯಕ್ತಿ ಜನಸಾಮಾನ್ಯರ ನಡುವೆಯೆ ರಾಜಕಾರಣ ಮಾಡುತ್ತ ಬಂದರು. ಏಕೆಂದರೆ ಅವರ ತಂದೆ ಈ ರಾಜ್ಯ ಕಂಡ ಅಪರೂಪದ ವ್ಯಕ್ತಿತ್ವದ ಅಪ್ಪಟ ಕಮ್ಯುನಿಷ್ಟ್ ಮುಖಂಡರಾದ ಬಿ.ಅಪ್ಪಣ್ಣ ಹೆಗ್ಡೆ. ಕಾಂಗ್ರೇಸ್ ಹೈಕಮಾಂಡ್ ತೀರ್ಥಹಳ್ಳಿ ಕ್ಷೇತ್ರದಲ್ಲಿ ಉಲ್ಭಗೊಂಡಿರುವ ಭಿನ್ನಮತದ ಗಾಯಕ್ಕೆ ಎಷ್ಟೆ ಚಿಕಿತ್ಸೆ ನೀಡಿದರೂ ಶಮನವಾಗುವುದು ಕಷ್ಟ. ಈ ನಿಟ್ಟಿನಲ್ಲಿ ಮೂರನೇ ಶಕ್ತಿಯಾಗಿ ಬಿ.ಎ.ರಮೇಶ್ ಹೆಗಡೆ ಎಂಬ ಹೊಸ ಅಲೆಯ ಶಕ್ತಿಯನ್ನು ಮೂಡಿಸಬೇಕು. ಯಾವುದೇ ಗುಂಪುಗಾರಿಕೆ ಮಾಡದೇ ರಾಜ್ಯ ನಾಯಕರ ಕಣ್ಣಲ್ಲಿಯೂ ಸದಭಿಪ್ರಾಯ ಹೊಂದಿರುವ ರಮೇಶ್ ಹೆಗ್ಡೆ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರೆ ಉತ್ತಮ ಅನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ʻರಂಗ ವಿಲಾಸ್ ಬಂಗಲೆಯ ನರಮೇಧ!’ ಮತ್ತದರ ಸುತ್ತಲು ಹುಟ್ಟಿಕೊಂಡ ಕಥೆಗಳು

ಚೆಹರೆ-ಅಣಕು ಕಟಕಟೆಯಲ್ಲಿ ನಿಂತ ಯುವಕನ ರೋಮಾಂಚಕ ಕಥನ 

ಸಿಲ್ಕ್‌ ಸ್ಮಿತಾ ಎಂಬ ಮಾದಕ ಬೆಡಗಿಯ ಅಪ್ಪಟ ಹೃದಯವಂತಿಕೆ ಮತ್ತು ದುರಂತ ಅಂತ್ಯ

ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ಅಡಿಗರು ಮತ್ತು ಬೇಂದ್ರೆಯವರ ಪ್ರತಿಕ್ರಿಯೆ

Tags: #saakshatvbengalurubiographyBJPCongresskarnatakapoliticsspecial articalteerthahalli
ShareTweetSendShare
Join us on:

Related Posts

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

ರೇಷನ್ ಕಾರ್ಡ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಈ ದಾಖಲೆಗಳನ್ನು ನೀಡಿದರೆ ಮನೆ ಬಾಗಿಲಿಗೆ ಬರಲಿದೆ ಬಿಪಿಎಲ್ ಕಾರ್ಡ್

by Shwetha
February 4, 2026
0

ಬೆಂಗಳೂರು: ಕರ್ನಾಟಕದಲ್ಲಿ ಪಡಿತರ ಚೀಟಿಗಾಗಿ ಕಾಯುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್...

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

ನವರಾತ್ರಿಗಿಲ್ಲದ ವಿನಾಯಿತಿ ರಂಜಾನ್ ಗೆ ಏಕೆ? ಕಾಂಗ್ರೆಸ್ ತುಷ್ಟೀಕರಣ ನೀತಿ: ಉರ್ದು ಶಾಲೆಗಳ ಸಮಯ ಬದಲಾವಣೆಗೆ ಬಿಜೆಪಿ ಕೆಂಡಾಮಂಡಲ

by Shwetha
February 4, 2026
0

ಬೆಂಗಳೂರು: ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ಉರ್ದು ಶಾಲೆಗಳ ಕಾರ್ಯನಿರ್ವಹಣಾ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಇದೀಗ ರಾಜಕೀಯ ವಲಯದಲ್ಲಿ ಭಾರೀ...

ಅನೈತಿಕ ಸಂಬಂಧ ಕೊಲೆಗೆ ಕಾರಣ: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಅರೆಸ್ಟ್

ಅನೈತಿಕ ಸಂಬಂಧ ಕೊಲೆಗೆ ಕಾರಣ: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಅರೆಸ್ಟ್

by Shwetha
February 4, 2026
0

ಅನೈತಿಕ ಸಂಬಂಧದ ವಿಚಾರವಾಗಿ ನಡೆದ ಗಲಾಟೆಯೊಂದು ಭೀಕರ ಕೊಲೆಯಾಗಿ ಮಾರ್ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಅವರಗುಪ್ಪ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಖ್ಯಾತ ಜ್ಯೋತಿಷಿ...

ಧರ್ಮರಾಯಸ್ವಾಮಿ ದೇಗುಲದಲ್ಲಿ ಭಾರೀ ಚಿನ್ನಾಭರಣ ಕಳ್ಳತನ: ಮುಜರಾಯಿ ಅಧಿಕಾರಿಗಳ ಮೇಲೆ ಅನುಮಾನ

ಧರ್ಮರಾಯಸ್ವಾಮಿ ದೇಗುಲದಲ್ಲಿ ಭಾರೀ ಚಿನ್ನಾಭರಣ ಕಳ್ಳತನ: ಮುಜರಾಯಿ ಅಧಿಕಾರಿಗಳ ಮೇಲೆ ಅನುಮಾನ

by Shwetha
February 4, 2026
0

ಬೆಂಗಳೂರಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಭಾರೀ ಚಿನ್ನಾಭರಣ ಕಳ್ಳತನ ನಡೆದಿರುವ ಆರೋಪ ಹೊರಬಿದ್ದಿದ್ದು, ಇದು ಭಕ್ತ ಸಮುದಾಯದಲ್ಲಿ ಆಘಾತ ಮೂಡಿಸಿದೆ. ಪ್ರಾಥಮಿಕ...

ಪ್ರಧಾನಿ ನಿಂದನೆಗೆ ಸಿಟಿ ರವಿ ‘ಪಾಕಿಸ್ತಾನದ ನಾಲಿಗೆ’ ತಿರುಗೇಟು: ಪರಿಷತ್ ರಣರಂಗ, ನಜೀರ್ ಕ್ಷಮೆಗೆ ಪಟ್ಟು ಹಿಡಿದ ಬಿಜೆಪಿ!

ಪ್ರಧಾನಿ ನಿಂದನೆಗೆ ಸಿಟಿ ರವಿ ‘ಪಾಕಿಸ್ತಾನದ ನಾಲಿಗೆ’ ತಿರುಗೇಟು: ಪರಿಷತ್ ರಣರಂಗ, ನಜೀರ್ ಕ್ಷಮೆಗೆ ಪಟ್ಟು ಹಿಡಿದ ಬಿಜೆಪಿ!

by Shwetha
February 4, 2026
0

ವಿಧಾನಪರಿಷತ್ತಿನಲ್ಲಿ ಸೃಷ್ಟಿಯಾಗಿರುವ ನಜೀರ್ ಅಹ್ಮದ್ ಅವರ ಹೇಳಿಕೆ ಮತ್ತು ಸಿಟಿ ರವಿ ಅವರ ತಿರುಗೇಟಿನ ವಿವಾದ ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ. ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram