ಕೃಪೆ – ಹಿಂಡವಿ
ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ʻರಂಗ ವಿಲಾಸ್ ಬಂಗಲೆಯ ನರಮೇಧ!‘ ಮತ್ತದರ ಸುತ್ತಲು ಹುಟ್ಟಿಕೊಂಡ ಕಥೆಗಳು:
ಪ್ರಸಕ್ತ ಬೆಂಗಳೂರಿನ ಕೆ.ಜಿ ರಸ್ತೆಯ ಬಳಿ ಈಗಿರುವ ಜನತಾ ಬಜಾರ್ ಒಂದು ಕಾಲದಲ್ಲಿ ರಂಗ ವಿಲಾಸ್ ಬಂಗಲೆ ಎಂದು ಕರೆಸಿಕೊಳ್ತಿತ್ತು. ಈ ಬಂಗಲೆಯಲ್ಲಿ ಆಗ ವಾಸವಿದ್ದ ಯಜಮಾನರ ಹೆಸರು ಬೇಲೂರೂ ಶ್ರೀನಿವಾಸ ಅಯ್ಯಂಗಾರ್. ನಿವೃತ್ತ ಅಡ್ವೊಕೇಟ್, ನಿವೃತ್ತಿಯ ಬಳಿಕ ಸುತ್ತ-ಮುತ್ತ ಬರುತ್ತಿದ್ದ ಅಂಗಡಿ ಕಟ್ಟಡಗಳ ಬಾಡಿಗೆಯಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಸಿರಿವಂತ ಕುಟುಂಬ ಕೂಡು ಕುಟುಂಬ. ಅಯ್ಯಂಗಾರರ ಎರಡನೆ ಪತ್ನಿಯಾಗಿದ್ದ ವೆಂಕಟಮ್ಮ ಹಾಗು ಹೆಣ್ಣು ಮಕ್ಕಳಾದ ರಂಗಲಕ್ಷ್ಮಿ, ರತ್ನ ಹಾಗು ಪ್ರಸನ್ನಾ ಮತ್ತು ಗಂಡು ಮಕ್ಕಳಾದ ಲವ, ಕುಶ ಅತ್ತೆಯವರಾದ ಸಿಂಗಮ್ಮ ಹಾಗೂ ಅಯ್ಯಂಗಾರರ ಮೊದಲನೆ ಪತ್ನಿಯ ಮಗನಾಗಿದ್ದ ಮುತ್ತಣ್ಣ ಮನೆ ಕಾವಲುಗಾರನಾಗಿದ್ದ ರಾಮಲಿಂಗಮ್ ಇವರೆಲ್ಲ ಇದೇ ಬಂಗಲೆಯಲ್ಲೆ ವಾಸವಿದ್ದರು. 1956ರ ಜೂನ್ 6ನೆ ತಾರೀಕಿನ ಬೆಳ್ಳಂಬೆಳಗ್ಗೆ ಮನೆಯ ಇಷ್ಟೂ ಜನರೂ (ರತ್ನ ಹಾಗೂ ಪ್ರಸನ್ನಾರನ್ನ ಬಿಟ್ಟು ಉಳಿದವರು) ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಗಿನ್ನು ಕರ್ನಾಟಕ ರಾಜ್ಯವು ಮೈಸೂರು ಪ್ರಾಂತ್ಯವೆಂದು ಕರೆಸಿಕೊಳ್ತಿತ್ತು. ಸ್ವತಂತ್ರಾ ನಂತರ ರಾಜ್ಯವು ಕಂಡ ಅತ್ಯಂತ ಭೀಕರ ಹಾಗೂ ಮೊಟ್ಟ ಮೊದಲ ಮಾಸ್ ನರಮೇಧ ಈ ಬೇಲೂರ್ ಶ್ರೀನಿವಾಸ ಅಯ್ಯಂಗಾರ್ ಕುಟುಂಬದ ಬರ್ಬರ ಅಮಾನುಷ ಹತ್ಯಾಕಾಂಡ
ಬೇಲೂರ್ ಶ್ರೀನಿವಾಸ ಅಯ್ಯಂಗಾರರು ಹಿರಿ ವಕೀಲರಾಗಿದ್ದವರು. ವಯಸ್ಸಾಗಿದ್ದ ಕಾರಣ ಲಾ ಪ್ರಾಕ್ಟೀಸ್ ನಿಲ್ಲಿಸಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಮೊದಲಿನಿಂದಲು ಸಿರಿವಂತರಾದದ್ದರಿಂದ ಗಾಂಧಿ ನಗರದ ಸುತ್ತಾ ಮುತ್ತಾ ಅನೇಕ ಕಟ್ಟಡಗಳನ್ನ ಕಟ್ಟಿ ಅಂಗಡಿ ಮುಂಗಟ್ಟುಗಳಿಗೆ ಬಾಡಿಗೆ ಬಿಟ್ಟಿದ್ದರು. ಒಂದು ಲೆಕ್ಕದ ಪ್ರಕಾರ ಅಂದಿನ ಕಾಲಕ್ಕೇ ಇವರಿಗೆ ತಿಂಗಳಿಗೆ ಎಲ್ಲಾ ಮೂಲಗಳಿಂದ ಸರಾಸರಿ 1500/- ರೂಪಾಯಿ ಬಾಡಿಗೆ ಹಣ ಕೈ ಸೇರುತ್ತಿತ್ತು. ಅಂದಿಗಿದು ಬಹುದೊಡ್ಡ ಮೊತ್ತ. ಸಾಲದ್ದಕ್ಕೆ ಮನೆಯಲ್ಲೇ ಚಿನ್ನ ಬೆಳ್ಳಿ ಒಡವೆಗಳ ವ್ಯಾಪಾರವನ್ನೂ ಮಾಡುತ್ತಿದ್ದರು. ನೆಮ್ಮದಿಯ ಜೀವನಕ್ಕೆ ಇದಕ್ಕಿಂತ ಇನ್ನೇನು ಬೇಕಿತ್ತು. ಇವರು ವಾಸವಿದ್ದ ಮಹಲಿನ ಹೆಸರು ರಂಗ ವಿಲಾಸ್ ಬಂಗಲೆ. ದೊಡ್ಡ ಹಜಾರವುಳ್ಳ ಐಶಾರಾಮಿ ಹದಿನಾರಂಕಣದ ಮಿನಿ ಅರಮನೆ. ಒಳಗಡೆ ಹತ್ತಾರು ಕೋಣೆಗಳಿದ್ದ ಬೃಹತ್ ಬಂಗಲೆಯದು.
ಎಂದಿನಂತೆ ಆವತ್ತೂ ಅಂದರೆ ಜೂನ್ 5ರ ರಾತ್ರಿ ಅಯ್ಯಂಗಾರರ ಪತ್ನಿ ವೆಂಕಟಮ್ಮ ಹಾಗೂ ಆಕೆಯ ಹೆಣ್ಣು ಮಕ್ಕಳಾದ ರತ್ನ, ರಂಗಲಕ್ಷ್ಮಿ ಮುಂತಾದವರು ಅಡುಗೆ ಸಿದ್ಧಪಡಿಸಿ ಎಲ್ಲರಿಗು ಬಡಿಸಿ ತಾವೂ ಊಟ ಮಾಡಿ ರಾತ್ರಿ ಹತ್ತರ ಸುಮಾರಿಗೆ ತಂತಮ್ಮ ಕೋಣೆಗಳಲ್ಲಿ ನಿದ್ರೆಗೆ ಜಾರಿದ್ದರು. ಮನೆಯ ಒಂದು ಕೋಣೆಯಲ್ಲಿ ಪತ್ನಿ ವೆಂಗಡಮ್ಮ ಹಾಗೂ ಹೆಣ್ಣು ಮಗಳು ರಂಗಲಕ್ಷ್ಮಿ, ಹಾಗೂ ಲವ ಕುಶರಿದ್ದರು. ಮುಖ್ಯ ಕೋಣೆಯಲ್ಲಿ ಅಯ್ಯಂಗಾರರು ಪವಡಿಸಿದ್ದರು. ಇನ್ನೊಂದು ಕೋಣೆಯಲ್ಲಿ ರತ್ನ ಮತ್ತು ಪಕ್ಕದ ಸಣ್ಣ ಕೋಣೆಯಲ್ಲಿ ಪ್ರಸನ್ನಾ ಇದ್ದರು. ಮನೆ ಹೊರಗಿದ್ದ ಮತ್ತೊಂದು ಸಣ್ಣ ಕೋಣೆಯಲ್ಲಿ ಅಯ್ಯಂಗಾರರ ಮೊದಲ ಪತ್ನಿಯ ಮಗ ಮುತ್ತಣ್ಣ ಮಲಗಿದ್ದ. ಮೊದಲ ಪತ್ನಿ ಸತ್ತ ಬಳಿಕ ಚಿತ್ತ ಸ್ವಾಸ್ಥ್ಯ ಕಳೆದುಕೊಂಡಿದ್ದ ಮುತ್ತಣ್ಣನನ್ನ ಹೊರಗಿನ ಸಣ್ಣ ಮನೆಯಲ್ಲಿಟ್ಟು ಆರೈಕೆ ಮಾಡಲಾಗ್ತಿತ್ತು. ಮನೆ ಹೊರಗಡೆ ಕಾವಲು ನಾಯಿ ಶೇಷ ಮಲಗಿತ್ತು. ಕಾವಲುಗಾರ ರಾಮಲಿಂಗಮ್ ಸಹ ಮಲಗಿದ್ದ. ಯಾವುದೋ ಮನೆ ಕೆಲಸದ ಸಲುವಾಗಿ ಕೆಲಸ ಮಾಡಲು ರಾಮಲಿಂಗಮ್ನ ಪತ್ನಿಯಾಗಿದ್ದ ಯೆಲ್ಲಮ್ಮಳಿಗೆ ಮರುದಿನ ಬೆಳಗ್ಗೆ ಬರಲು ಹೇಳಿದ್ದರು ವೆಂಕಟಮ್ಮ. 
ಜೂನ್ 6 ರ ಬೆಳಿಗ್ಗೆ ಸುಮಾರು 6 ಗಂಟೆಗೆ ಬಂಗಲೆ ಪ್ರವೇಶಿಸಿದ ಯೆಲ್ಲಮ್ಮನಿಗೆ ಅದರ ಗೇಟ್ ತೆರೆದಿದ್ದುದು ಗಮನಕ್ಕೆ ಬಂತು. ಒಳ ಬಂದು ಪತಿ ರಾಮಲಿಂಗಮ್ನ ಬಳಿ ಹೋದಾಗ ಪತಿ ದಿನವೂ ಆ ಸಮಯದಲ್ಲಿ ಎದ್ದು ಕುಳಿತಿರುತ್ತಿದ್ದವನು ಆ ದಿನ ರಕ್ತದ ಮಡುವಿನಲ್ಲಿ ಹೆಣವಾಗಿ ಮಲಗಿದ್ದ. ಆ ದೃಶ್ಯ ನೋಡಿದವಳೆ ಯೆಲ್ಲಮ್ಮ ಎದೆ ಬಡಿದುಕೊಂಡು ರೋಧಿಸತೊಡಗಿದಳು. ಅಲ್ಲೆ ಪಕ್ಕದ ತೋಟದಲ್ಲಿ ಹಣ್ಣು ಕೀಳುತ್ತಿದ್ದ ಅಮ್ಮಕಣ್ಣಮ್ಮ ಎಂಬಾಕೆಯೂ ಯೆಲ್ಲಮ್ಮಳ ಧ್ವನಿ ಕೇಳಿ ಬಳಿ ಸಾರಿ ಅಲ್ಲಿನ ದೃಶ್ಯ ಕಂಡು ಹೌಹಾರಿದಳು. ಸಹಾಯಕ್ಕಾಗಿ ಅಕ್ಕಪಕ್ಕದವರನ್ನ ಕೂಗಿ ಕರೆದಳು. ಒಳಗಿನ ಕೋಣೆಯೊಂದರಲ್ಲಿ ಮಲಗಿದ್ದ ರತ್ನ ಈ ಗೋಳಾಟ ಕೇಳಿ ಯಾರಿರಬಹುದೆಂದು ಎದ್ದು ತಾಯಿಯ ರೂಮಿಗೆ ಬಂದಾಗ ಆ ಕೋಣೆಯಲ್ಲು ಅಜ್ಜಿ ಸಿಂಗಮ್ಮ, ತಾಯಿ ವೆಂಕಟಮ್ಮ, ಸೋದರರಾದ ಲವ ಕುಶ ಹಾಗೂ ಸೋದರಿಯಾದ ರಂಗಲಕ್ಷ್ಮಿ ಎಲ್ಲರೂ ರೂಮಿನ ಕಾಟ್ಗಳ ಬಳಿ ರಕ್ತದ ಮಡುವಿನಲ್ಲಿ ನಿಶ್ಚೇಷ್ಟಿತರಾಗಿ ಮಲಗಿದ್ದರು.
ರಂಗಲಕ್ಷ್ಮಿ ಮಾತ್ರ ಗೋಡೆಗೆ ಒರಗಿ ಕುಳಿತ ಭಂಗಿಯಲ್ಲಿದ್ದಳು. ಆಕೆಯಲ್ಲಿನ್ನು ತುಸು ಪ್ರಾಣಸಂಚಾರವಿದ್ದಂತಿತ್ತು. ಆ ಭೀಕರ ದೃಶ್ಯ ನೋಡಿ ಅಳುತ್ತಾ ರತ್ನ ಪಕ್ಕದ ಒಳದ್ವಾರದಿಂದ ಮುಖ್ಯ ಕೋಣೆಗೆ ಆ ವಿಷಯ ತಿಳಿಸಲು ಬಂದಾಗ ತಂದೆ ಶ್ರೀನಿವಾಸ ಅಯ್ಯಂಗಾರರೂ ಸಹ ರಕ್ತ ಸಿಕ್ತವಾಗಿ ಬಿದ್ದಿದ್ದರು. ಆದರೆ ಇನ್ನೂ ಉಸಿರಾಡುತ್ತಿದ್ದರು. ಹೊರಗೆ ಕೂಗುತ್ತಾ ಬಂದ ರತ್ನಳಿಗೆ ಸತ್ತು ಬಿದ್ದ ನಾಯಿ ಹಾಗೂ ಕಾವಲುಗಾರನ ಶವಗಳ ಮುಂದೆ ರೋಧಿಸುತ್ತಾ ಕುಳಿತ ಯೆಲ್ಲಮ್ಮ ಕಾಣಿಸಿದಳು. ಯೆಲ್ಲಮ್ಮಳ ಬಳಿ ಬಂದ ರತ್ನಾ ತಾನೂ ಮರ್ಮಾಘಾತದ ಹೊಡೆತದಿಂದ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಇವರ ಗಲಭೆ ಕೇಳಿ ಮನೆಯ ಕೆಳಗೆ ವಾಸವಿದ್ದ ಕೆಲ ಬಾಡಿಗೆದಾರರು ಜಮಾಯಿಸಿದರು.
ಅಕ್ಕಪಕ್ಕದವರೆಲ್ಲ ಸೇರಿ ಅಲ್ಲಿ ನಡೆದಿದ್ದ ನರಮೇಧವನ್ನ ನೋಡಿ ಬೆಚ್ಚಿ ಬಿದ್ದರು. ಒಳಗೆ ಕಿಚನ್ ಪಕ್ಕದ ಅಂಗಳದಲ್ಲಿ ಮಲಗಿದ್ದ ರತ್ನ ಮಾತ್ರವೆ ಬದುಕುಳಿದಿದ್ದಳು. ಎದ್ದು ಬರುವಾಗ ಆಕೆ ಮುಖ್ಯ ಕೋಣೆಯ ಕಿಟಕಿಯ ಕಂಬಿಯೊಂದು ಮುರಿದಿದ್ದನ್ನೂ ಗಮನಿಸಿದ್ದಳು. ಕೆಲವು ಉಲ್ಲೇಖಗಳ ಪ್ರಕಾರ ರತ್ನ ಮೊದಲು ಎದ್ದು ಬಂದು ಹೊರಗೆ ನಿಂತಿದ್ದ ಯೆಲ್ಲಮ್ಮ, ಅಮ್ಮಕಣ್ಣಮ್ಮ ಹಾಗೂ ಸತ್ತು ಬಿದ್ದಿದ್ದ ರಾಮಲಿಂಗಮ್ನನ್ನ ನೋಡಿ ಒಳ ಬಂದವಳೆ ತಾಯಿ ಅಜ್ಜಿ ಸೋದರ ಸೋದರಿಯರ ಹೆಣಗಳನ್ನ ಕಂಡು ನಂತರ ಕೊನೆಯಲ್ಲಿ ಮೂರ್ಛಿತರಾಗಿದ್ದ ತಂದೆಯನ್ನ ಕಂಡು ಕೂಗುತ್ತಾ ಹೊರಗೆ ಬಂದು ನಾಗರಾಜ್ ಎಂಬ ನೆರೆಯವನಿಗೆ ನಡೆದ ವಿಷಯ ತಿಳಿಸಿದಳು ಎಂದು ದಾಖಲಾಗಿದೆ. ಒಟ್ಟಾರೆ ಆ ರಾತ್ರಿ ರಂಗ ವಿಲಾಸ್ ಬಂಗಲೆಯಲ್ಲಿ ಯಾರಿಗೂ ತಿಳಿಯದಂತೆ ಇಂತದ್ದೊಂದು ಪೈಶಾಚಿಕ ನರಮೇಧ ನಡೆದು ಹೋಗಿತ್ತು.
ಪಕ್ಕದ ಮನೆಯ ನಾಗರಾಜ್ ಎಂಬ ವ್ಯಕ್ತಿಗೆ ರತ್ನಾ ಗಾಬರಿಯಿಂದಲೆ ತಾನು ನೋಡಿದ ಭಯಾನಕ ದೃಶ್ಯಾವಳಿಗಳನ್ನ ವಿವರಿಸುತ್ತಿದ್ದಂತೆ ಕೊಂಚ ಧೈರ್ಯ ತಂದುಕೊಂಡು ಮನೆಯ ಹಜಾರದೊಳಕ್ಕೆ ಬಂದವನೆ ಅಳುತ್ತಾ ನಿಂತಿದ್ದ ಯೆಲ್ಲಮ್ಮ ಹಾಗು ಅಮ್ಮಕಣ್ಣಮ್ಮರ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಮಲಿಂಗಮ್ ನ ಶವವನ್ನ ನೋಡಿ ಆತ ಸತ್ತಿರುವುದನ್ನು ಖಚಿತಪಡಿಸಿಕೊಂಡನು. ಒಳಹೊಕ್ಕು ವೆಂಕಟಮ್ಮ ಇದ್ದ ಕೋಣೆಯಲ್ಲಿ ನೋಡಿದಾಗ ಅಲ್ಲಿದ್ದ ಎಲ್ಲರೂ ರಕ್ತಸಿಕ್ತರಾಗಿ ಶವವಾಗಿದ್ದರು. ರಂಗಲಕ್ಷ್ಮಿ ಮಾತ್ರ ಗೋಡೆಗೊರಗಿ ಕುಳಿತಿದ್ದುದರಿಂದಲು ಆಕೆ ತಾನು ನೋಡಿದಾಗ ಬದುಕಿದ್ದಳೆಂದು ರತ್ನಾ ಹೇಳಿದ್ದರಿಂದಲು ನಾಗರಾಜ್ ಆಕೆಯನ್ನ ನಯವಾಗಿ ತಟ್ಟಿ ಅಲುಗಾಡಿಸಿ ಮಾತಾಡಿಸಲು ಯತ್ನಿಸಿದನು. ರಂಗಲಕ್ಷ್ಮಿ ಇನ್ನು ಉಸಿರಾಡುತ್ತಿದ್ದಳಾದರೂ ಆಗಂತುಕರಿಂದ ಉಂಟಾದ ಮಾರಣಾಂತಿಕ ಹಲ್ಲೆಗೆ ನಿತ್ರಾಣಳಾಗಿದ್ದಳು. ಶ್ರೀನಿವಾಸ ಅಯ್ಯಂಗಾರರ ಬಳಿ ಬಂದಾಗಲು ಅವರಿನ್ನು ಜೀವ ಹಿಡಿದಿಟ್ಟುಕೊಂಡಿದ್ದುದು ಗಮನಕ್ಕೆ ಬಂತು. ವೆಂಕಟಮ್ಮ ಇದ್ದ ಸ್ಟೋರ್ ರೂಮಿನ ಒಡವೆ ತುಂಬಿದ್ದ ಅಲ್ಮೆರಾಗಳು ಹಾಗೂ ಒಡವೆ ಡಬ್ಬಿಗಳೆಲ್ಲ ಖಾಲಿಯಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲಿದ್ದ ಕಾಟ್ನ ಪಕ್ಕದಲ್ಲಿ ರಕ್ತಸಿಕ್ತವಾಗಿದ್ದ ಕೆಲ ಕಬ್ಬಿಣದ ರಾಡ್ಗಳೂ ಸಿಕ್ಕವು.
ರತ್ನಾಳ ಮತ್ತೊಬ್ಬ ಸೋದರಿಯಾಗಿದ್ದ ಪ್ರಸನ್ನಾ ಕೂಡ ಕಿಚನ್ ಪಕ್ಕದ ಸಣ್ಣ ಕೋಣೆಯೊಂದರಲ್ಲಿ ಮಲಗಿದ್ದವಳಿಗೆ ದೇವರ ದಯೆಯಿಂದ ಯಾವ ಅಪಾಯವೂ ಆಗಿರಲಿಲ್ಲ. ರತ್ನಾಳ ಅಳು ಕೇಳಿಸಿದ್ದರಿಂದ ಅಷ್ಟು ಹೊತ್ತೂ ಒಳ ಮಲಗಿದ್ದ ಪ್ರಸನ್ನಾ ಇದ್ಯಾವುದರ ಅರಿವೂ ಇರದೆ ಎದ್ದು ಬಂದಿದ್ದಳು. ಎದ್ದು ಬಂದು ಅಳುತ್ತಾ ನಿಂತಿದ್ದ ರತ್ನಾಳಿಂದ ಮನೆಯಲ್ಲಾಗಿದ್ದ ಘೋರವನ್ನ ತಿಳಿದು ತಾನೂ ಅಳಲಾರಂಭಿಸಿದಳು.
ಮೇಲ್ನೋಟಕ್ಕೆ ಇದು ಹಣ ಹಾಗೂ ಒಡವೆಗಾಗಿ ನಡೆದ ಕೊಲೆ ಎನ್ನುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ. ನಾಗರಾಜ್ ಮನೆಯ ಸ್ಥಿತಿಯನ್ನ ಪ್ರಮಾಣೀಕರಿಸಿಕೊಂಡವನೆ ತನ್ನ ಮಿತ್ರರಾದ ರಾಧಾಕೃಷ್ಣ ಎಂಬುವವರನ್ನ ಕೂಗಿ ಕರೆದು ನಡೆದುದನ್ನ ತಿಳಿಸಿ, ಈ ಇಬ್ಬರು ಹೆಣ್ಣು ಮಕ್ಕಳ ಬಳಿಯೆ ಇರಲು ಹೇಳಿ ತಾನು ಕಂಟ್ರೋಲ್ ರೂಮಿಗೆ ಸುದ್ದಿ ಮುಟ್ಟಿಸಿ ಬರಲು ಓಡಿದ. ಸುಮಾರು ಬೆಳಗಿನ 6.30 ಗೆ ಅಲ್ಲಿನ ಸೆಂಟ್ರಲ್ ಪೋಲಿಸ್ ಸ್ಟೇಷನ್ನಿನ ಚೀಫ್ ಶ್ರೀಕಂಠ ರೆಡ್ಡಿಯವರಿಗೆ ರಂಗ ವಿಕಾಸ್ ಬಂಗಲೆಯಲ್ಲಾಗಿದ್ದ ನಾಲ್ಕೈದು ಕೊಲೆಗಳ ಬಗ್ಗೆ ಫೋನ್ ಕರೆ ಬಂತು. ಜೀವದಿಂದಿದ್ದ ಅಯ್ಯಂಗಾರ್ ಹಾಗು ರಂಗಲಕ್ಷ್ಮಿಯರನ್ನ ಆಸ್ಪತ್ರೆಗೆ ಕರೆದೊಯ್ಯಲು ನಾಗರಾಜ್ ಸ್ಥಳೀಯ ಆ್ಯಂಬುಲೆನ್ಸಿನವರಿಗು ಕರೆ ಮಾಡಿ ಸುದ್ದಿ ತಿಳಿಸಿದ. ಸೆಂಟ್ರಲ್ ಸ್ಟೇಷನ್ನಿನ ಚೀಫ್ ಆಗಿದ್ದ ಶ್ರೀಕಂಠ ರೆಡ್ಡಿ ತಮಗೆ ಬಂದ ಸುದ್ದಿಯನ್ನ ಅಲ್ಲಿನ ಏರಿಯಾ ಸುಪರ್ದಿಯ ಇನ್ಸ್ಪೆಕ್ಟರ್ ಆಗಿದ್ದ ಸಿವಚರಣ್ ಸಿಂಗ್ ರವರಿಗೆ ರವಾನಿಸಿದರು.
ಸುಮಾರು 7 ಗಂಟೆಯ ಹೊತ್ತಿಗೆ ಸ್ಥಳಕ್ಕೆ ನಾಲ್ಕೈದು ಅಧಿಕಾರಿಗಳ ಜತೆ ಶ್ರೀಕಂಠ ರೆಡ್ಡಿ ಆಗಮಿಸಿದರು. ಅವರೊಡನೆ ಫಿಂಗರ್ ಪ್ರಿಂಟ್ ತಜ್ಞರು ಹಾಗು ಫೋಟೊಗ್ರಫರ್ ತಿಮ್ಮಯ್ಯ ಎಂಬುವವರೂ ಬಂದಿಳಿದರು. ಕಾನ್ಸ್ಟೇಬಲ್ ದ್ಯಾಮಯ್ಯ ಎನ್ನುವವರನ್ನು ಕಂಬಿ ಮುರಿದಿದ್ದ ಮನೆ ಕಿಟಕಿಯ ಮೂಲಕ ತೂರಲು ಹೇಳಿದಾಗ ಅದರ ಮೂಲಕ ಸುಲಭವಾಗಿ ಒಳ ತೂರಿ ಬಂದ ಅವನನ್ನ ನೋಡಿ ಕಳ್ಳರು ಇದರ ಮೂಲಕವೆ ಒಳಬಂದಿದ್ದಾರೆಂದು ಅಂದಾಜಿಸಲಾಯ್ತು. ಘಟನೆಯ ಪ್ರಮುಖ ಚಿತ್ರಗಳನ್ನ ತಿಮ್ಮಯ್ಯ ಸೆರೆ ಹಿಡಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮೇಲಧಿಕಾರಿಗಳು ಬಂದಿಳಿದರು, ಶವಗಳನ್ನು ಹೊತ್ತೊಯ್ಯಲು ಆ್ಯಂಬುಲೆನ್ಸ್ ಸಹ ಬಂದಿತು. ಕೂಡಲೆ ರಂಗಲಕ್ಷ್ಮಿ ಹಾಗು ಶ್ರೀನಿವಾಸ ಅಯ್ಯಂಗಾರರ ದೇಹಗಳನ್ನ ಶುಶ್ರೂಷೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಯ್ತು. ಮನೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ಕಬ್ಬಿಣದ ರಾಡುಗಳ ಹಾಗೂ ಕಂಬಿಗಳು, ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳ ಮೇಲಿರಬಹುದಾದ ಫಿಂಗರ್ ಪ್ರಿಂಟ್ ಸಾಕ್ಷಿಗಳ ಅಚ್ಚನ್ನ ಪಡೆಯಲಾಯ್ತು. ಈ ಪ್ರಕರಣದ ಕುರಿತಾಗಿ ಉಪ್ಪಾರಪೇಟೆಯ ಸ್ಟೇಷನ್ನಿನಲ್ಲಿ ಕೊಲೆ ಕೇಸ್ ದಾಖಲಾಯ್ತು. ಕೇಸ್ ಫೈಲ್ ಕೈಗೆತ್ತಿಕೊಂಡ ಇನ್ಸ್ಪೆಕ್ಟರ್ ಸಿವಚರಣ್ ಸಿಂಗ್ರವರ ಮುಂದಾಳತ್ವದಲ್ಲಿ ತನಿಖೆ ಶುರುವಾಯ್ತು. ಕೊಲೆಯಾದ ಬಂಗಲೆಯಲ್ಲಿ ಸಿಕ್ಕ ರಕ್ತಸಿಕ್ತಗೊಂಡ ಬಟ್ಟೆಗಳು, ಕಬ್ಬಿಣದ ರಾಡ್ಗಳು, ಕೆಲ ಸಿನಿಮಾ ಟಿಕೇಟ್ನ ಚೂರುಗಳೆಲ್ಲವನ್ನು ವಶಕ್ಕೆ ತೆಗೆದುಕೊಂಡ ಅವರು ಪ್ರತಿಯೊಂದನ್ನು ಪರೀಕ್ಷೆಗೊಳಪಡಿಸಿದರು. ಜೂನ್ ಆರನೆ ತಾರೀಕಿನ ಸಂಜೆ ಸುಮಾರು 6.30ಕ್ಕೆ ಚಿಕಿತ್ಸೆ ಫಲಿಸದೆ ಶ್ರೀನಿವಾಸ ಅಯ್ಯಂಗಾರರು ಕೊನೆಯುಸಿರೆಳೆದರು. ಮಾರಣಾಂತಿಕ ಪೆಟ್ಟು ತಿಂದಿದ್ದ ರಂಗಲಕ್ಷ್ಮಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಶ್ರೂಷೆ ಮುಂದುವರಿಯಿತು.
ಜೂನ್ ಎಂಟನೆ ತಾರೀಕಿನವರೆಗು ಕೇಸಿಗೆ ಸಂಬಂಧಿತವಾದ ಯಾವ ಸಾಕ್ಷಿಗಳೂ ಸಿಕ್ಕಿರಲಿಲ್ಲ. ಆದರೆ ಶೇಷಾದ್ರಿಪುರಂನ ದಫೇದಾರ್ ಆಗಿದ್ದ ವೇದಗಿರಿ ಎಂಬುವವರಿಗೆ ಆ ಮಾರ್ಗದಲ್ಲಿ ಅನುಮಾನಾಸ್ಪದವಾಗಿ ಓಡಾಡ್ತಿದ್ದ ವ್ಯಕ್ತಿಯೋರ್ವ ಕಂಡು ಬಂದ. ಅವನ ಹೆಸರು ಚನ್ನ. ಅವನ ಬಳಿ ಸುತ್ತಿಟ್ಟುಕೊಂಡಿದ್ದ ಒಂದಷ್ಟು ಕಬ್ಬಿಣ ಹಾಗು ಉಕ್ಕಿನ ಸಲಾಕೆಗಳಿದ್ದವು. ಅನುಮಾನ ಬಂದು ಆತನನ್ನ ಬಂಧಿಸಿ ಪ್ರಶ್ನಿಸಿದಾಗ ತಾನು ಬಾರ್ ಬೆಂಡಿಂಗ್ ಕೆಲಸಕ್ಕೆ ಬಂದದ್ದಾಗಿ ತಿಳಿಸಿದ. ಸುತ್ತ ಎಲ್ಲೂ ಕಬ್ಬಿಣ ಕೆಲಸದ ಕಾರ್ಯಾಲಯ ಇರದುದ್ದರಿಂದಲು ಹಾಗೂ ಕೆಲಸದ ವೇಳೆಯಲ್ಲೆ ಅನಾಮತ್ತು ಅಡ್ಡಾಡುತ್ತಿದ್ದ ಚನ್ನನ ನಡವಳಿಕೆ ಗೊಂದಲ ಉಂಟು ಮಾಡಿದ್ದರಿಂದ, ಅವನನ್ನ ತಕ್ಷಣ ಸೆರೆ ಹಿಡಿದು ಸ್ಟೇಷನ್ನಿಗೆ ಕರೆದೊಯ್ದು ಪೋಲಿಸ್ ರೀತಿಯಲ್ಲಿ ವಿಚಾರಣೆ ಮಾಡಿದಾಗ ಅವನು ಪಕ್ಕದ ಚಿಕ್ಕನಾಯಕನಹಳ್ಳಿಯವನೆಂದು ತಿಳಿದು ಬಂತು.
ಆ ರಾತ್ರಿ ಐಯ್ಯಂಗಾರ್ ಮನೆಯ ಸುತ್ತ ಕಳ್ಳತನ ಮಾಡಲು ಬಂದಿರುವುದಾಗಿ ಹೇಳಿದ್ದ ಚೆನ್ನ. ಜೂನ್ 5ರ ಐಯ್ಯಂಗಾರ ಮನೆಯ ಕಳ್ಳತನಕ್ಕೆ ತನಗೆ ತಿಳಿದಿದ್ದ ಇತರೆ ಮೂರು ಜನ ಕಳ್ಳರು ಬಂದಿದ್ದರೆಂಬ ಆತಂಕಕಾರಿ ವಿಷಯವನ್ನ ಬಹಿರಂಗ ಪಡಿಸಿದ. ಅವನ ಹೇಳಿಕೆಯ ಮೇಲೆ ಆ ಮೂವರು ಆರೋಪಿಗಳು ಕೃಷ್ಣಾ ರೆಡ್ಡಿ, ಮುನಿಸ್ವಾಮಿ ಹಾಗು ಗೋವಿಂದ ರೆಡ್ಡಿ ಎಂಬುವವರೆಂದು ತಿಳಿಯಿತು. ಚಿಕ್ಕಪೇಟೆಯ ಬಳಿ ಇದ್ದ ಗುರುಮೂರ್ತಿ ಬೀದಿಯ ಬಳಿ ಆ ರಾತ್ರಿ ಕೃಷ್ಣಾ ರೆಡ್ಡಿ ತನ್ನ ನಿವಾಸಕ್ಕೆ ವಾಪಸಾಗುವ ವೇಳೆ ಅವನನ್ನ ಅಲ್ಲೇ ಹಿಡಿಯಬಹುದೆಂದು ಚನ್ನ ಹೇಳಿದ. ಹಾಗೆಯೆ ದಫೇದಾರ್ ವೇದಗಿರಿ ತನ್ನ ಸಹೋದ್ಯೋಗಿಗಳೊಂದಿಗೆ ಆ ರಾತ್ರಿ ಕೃಷ್ಣಾ ರೆಡ್ಡಿಯ ನಿವಾಸದ ಬಳಿ ಮರೆಯಾಗಿ ಅವನಿಗಾಗಿ ಕಾದು ಕುಳಿತರು. ಆ ರಾತ್ರಿ ಸುಮಾರು ಎಂಟಕ್ಕೆ ಕೃಷ್ಣಾ ರೆಡ್ಡಿಯನ್ನ ಹಿಡಿಯಲಾಯ್ತು. ಅವನ ಬಳಿ ಒಂದಷ್ಟು ಬಾರ್ ಕೇಬಲ್ಗಳೂ ಹಾಗೂ ಉಕ್ಕಿನ ಸಲಾಕೆಗಳು ದೊರೆತವಲ್ಲದೆ, ಅವನ ಜೇಬಲ್ಲಿ ಒಡವೆಗಳ ಗಂಟೂ ಸಹ ಸಿಕ್ಕಿತು. ಅವನ ಸಹಾಯದಿಂದ ಎರಡೆ ದಿನದಲ್ಲಿ ಉಳಿದ ಇಬ್ಬರನ್ನೂ ಹಿಡಿಯಲಾಯಿತು. ಮುನಿಸ್ವಾಮಿಯನ್ನ ಚಿಕ್ಕಪೇಟೆಯ ಒಡವೆ ಅಂಗಡಿಯೊಂದರ ಬಳಿ ಬಂಧಿಸಿದರೆ, ಗೋವಿಂದ ರೆಡ್ಡಿಯನ್ನ ಈಗಿನ ಕೆ.ಆರ್ ಮಾರ್ಕೆಟ್ ಬಳಿಯ ಟ್ಯಾಕ್ಸಿ ನಿಲ್ದಾಣದ ಬಳಿಯೆ ಹಿಡಿಯಲಾಯ್ತು. ಇವರೆಲ್ಲರೂ ದೂರದೂರುಗಳಿಂದ ಬೆಂಗಳೂರಿಗೆ ಬಂದಿದ್ದ ಕಳ್ಳರು. ಎಲ್ಲರನ್ನೂ ಬಂಧಿಸಿ ವಿವರ ಕಲೆ ಹಾಕಿದರು ಪೊಲೀಸರು.
ಎರಡು ಮೂರು ಬಾರಿ ಗಾಂಧಿ ಬಜಾರಿನ ಅಯ್ಯಂಗಾರ್ ಮನೆಯ ರೋಡಲ್ಲೆ ಓಡಾಡಿದೆವೆಂದೂ ಮನೆಯಲ್ಲಿ ಇರುವ ನಗ ನಾಣ್ಯ, ಸದಸ್ಯರ ದಿನಚರಿ ಎಲ್ಲವನ್ನು ಲೆಕ್ಕ ಹಾಕಿ 5ನೆ ತಾರೀಕಿನ ರಾತ್ರಿ ಎಲ್ಲರೂ ಮಲಗಿಯಾದ ಮೇಲೆ ಮೊದಲು ಮನೆಯ ನಾಯಿ ಹಾಗು ಕಾವಲುಗಾರರನ್ನ ಕೊಂದು ಮುಗಿಸಿ, ನಂತರ ಕಿಟಕಿಯ ಮೂಲಕ ಒಳ ತೂರಿ ಬಂದು ಮಲಗಿದ್ದವರನ್ನ ಕಬ್ಬಿಣ ಸಲಾಕೆಗಳ ಸಹಾಯದಿಂದ ಬಡಿದು ಜೀವ ತೆಗೆದು, ನಗನಾಣ್ಯ ದೋಚಿ ಅದೆ ರಾತ್ರಿ ಪರಾರಿಯಾದೆವೆಂದು ಅಪರಾಧಿಗಳು ಒಪ್ಪಿಕೊಂಡರು. ಎಲ್ಲರ ಕೈ ಬೆರಳ ಅಚ್ಚುಗಳನ್ನ ಪಡೆದು ಸಿಕ್ಕಿದ್ದ ಸಾಕ್ಷಿಗಳೊಂದಿಗೆ ಹೋಲಿಸಿದಾಗ ಅಚ್ಚುಗಳು ಪರಸ್ಪರ ಹೋಲಿಕೆಯಾದವು. ಅಪರಾಧಿಗಳನ್ನ ಕಳ್ಳತನ, ಕೊಲೆ ಹಾಗು ಕೊಲೆಯತ್ನದ ಆರೋಪದಡಿ ಬಂಧಿಸಿದರು. ಆರೋಪಿಗಳಿಗೆ ಮರಣದಂಡನೆ ಸಜೆ ಲಭ್ಯವಾಯ್ತು. 1958ರಲ್ಲಿ ಮೂರೂ ಆಪಾದಿತರನ್ನು ಹೈ ಕೋರ್ಟ್ ತೀರ್ಪಿನಂತೆ ನೇಣಿಗೇರಿಸಲಾಯಿತು. ಆಸ್ಪತ್ರೆಯಲ್ಲಿದ್ದ ರಂಗಲಕ್ಷ್ಮಿ ನಿಧಾನವಾಗಿ ಚೇತರಿಸಿಕೊಂಡರು. ಆಪಾದಿತರಿಂದ ಹಿಂಪಡೆದ ರಂಗ ವಿಲಾಸ್ ಪರಿವಾರದವರ ಕೆಲ ಒಡವೆಗಳು ಅಯ್ಯಂಗಾರ್ ಕುಟುಂಬದವರ ಕೈ ಸೇರಿದವು. ಕೇವಲ ಹಣದಾಸೆಯಿಂದಾಗಿ ಒಂದು ಭವ್ಯ ಕೂಡು ಕುಟುಂಬ ಕಳ್ಳರ ಸಂಚಿಗೆ ಈ ರೀತಿ ಬಲಿಯಾಗಿತ್ತು. ಕ್ರಮೇಣ ರಂಗ ವಿಲಾಸ್ ಬಂಗಲೆ ಈ ಹತ್ಯಾಕಾಂಡವನ್ನು ಖ್ಯಾತ ಪತ್ರಕರ್ತ ರವಿ ಬೆಳಗೆರೆ ಸುದೀರ್ಘ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಈಗ ರಂಗ ವಿಲಾಸ್ ಕಟ್ಟಡವನ್ನ ಧ್ವಂಸಗೊಳಿಸಿ ಅಲ್ಲಿ ದೊಡ್ಡ ಸಿಂಡಿಕೇಟ್ ಬ್ಯಾಂಕ್ ಎದ್ದು ನಿಂತಿದೆ. ಆರೋಪಿಗಳನ್ನ ನೇಣಿಗೇರಿಸಿದ ಕಾರಾಗೃಹ ಅಲ್ಲಿಂದ ಹೊಸೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದೆ. ಅಲ್ಲಿದ್ದ ಹಳೆ ಜೈಲು ಇವತ್ತು ಫ್ರೀಡಂ ಪಾರ್ಕ್ ಎಂಬ ಹೆಸರಿನ ಸಾರ್ವಜನಿಕ ಆಡಿಟೊರಿಯಂ ಆಗಿದೆ.
ಆಗಿನ ರಂಗವಿಲಾಸ್ ಬಂಗಲೆಯ ಬೇಲೂರು ಶ್ರೀನಿವಾಸ್ ಅಯ್ಯಂಗಾರ್ ರವರ ಕುಟುಂಬವನ್ನು ನಿರ್ಧಾಕ್ಷಿಣ್ಯವಾಗಿ ಕೊಂದ ಮೂವರ ಆರೋಪಿಗಳನ್ನು ಗಲ್ಲಿಗೇರಿಸಿದ ಸ್ಥಳದ ಕುರಿತಾಗಿ ಇನ್ನೊಂದು ವಾದವಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಹಿಂಭಾಗದ ಪೋಡುಗ್ರಾಮದಲ್ಲಿ ಸಾರ್ವಜನಿಕವಾಗಿ ನೇಣಿಗೇರಿಸಲಾಯಿತು ಎನ್ನುವ ವಾದವಿದೆ. ಪ್ರಮುಖ ಆರೋಪಿ ಕೃಷ್ಣಾರೆಡ್ಡಿಯವರ ಬಾವ ಲಕ್ಷ್ಮಯ್ಯ ಪೋಡು ಗ್ರಾಮದವನು. ಹೀಗಾಗಿ ಈ ವಾದ ಹೆಚ್ಚು ಚಾಲ್ತಿಯಲ್ಲಿದೆ. ಅಂದು ಆರೋಪಿಗಳ ವಿಚಾರಣೆಗೆ ತೆಗೆದುಕೊಂಡಿದ್ದ ಕಾಲ ಕೇವಲ ಎರಡು ವರ್ಷ ಮಾತ್ರ. ಕೃಷ್ಣಾರೆಡ್ಡಿಯ ನಂತರದ ತಲೆಮಾರಿನ ಕುಟುಂಬದ ಸದಸ್ಯರನ್ನು ತಮ್ಮ “ಕ್ರೈಂ ಡೈರಿ” ಕಾರ್ಯಕ್ರಮಕ್ಕಾಗಿ ಪತ್ರಕರ್ತ ರವಿಬೆಳೆಗೆರೆ ಸಂದರ್ಶನ ಮಾಡಿದ್ದರಂತೆ. ಅವರುಗಳನ್ನು ನೇಣಿಗೇರಿಸಿದ ಅದೇ ಸ್ಥಳದಲ್ಲಿ ಇತ್ತೀಚೆಗೆ ಸುಸಜ್ಜಿತ ಮನೆಯೊಂದು ನಿರ್ಮಾಣವಾಗಿದೆ.
ರಂಗವಿಲಾಸ ಬಂಗಲೆಯ ಬಹುತೇಕರೂ ಕೊಲೆಯಾದ ನಂತರ ಈ ಬಂಗಲೆಯನ್ನು ಹೋಟೆಲ್ ಮಾಡಲಾಗಿತ್ತಂತೆ. ಆದರೆ ಹೋಟೆಲ್ನ ಅಡುಗೆ ಕೋಣೆಯಲ್ಲಿ ಪಾತ್ರೆ ಪಗಡೆಗಳು ತಟ್ಟೆ ಲೋಟಗಳು ಅತ್ತಿಂದಿತ್ತ ಚಲಿಸುವುದು, ಹಾರಾಡುವುದು ಎಲ್ಲಾ ನಡೆಯುತ್ತಿತ್ತು. ಹೀಗಾಗಿ ಹೋಟೆಲ್ ಬಂದ್ ಮಾಡಿ ಖಾಲಿ ಮಾಡಲಾಯ್ತು. ನಂತರ ಆ ಬಂಗಲೆಯನ್ನು ಕೆಡವಿ ಹರಾಜು ಹಾಕಿದರು. ಈಗ ಅದೇ ಜಾಗದಲ್ಲೇ ಸಿಂಡಿಕೇಟ್ ಬ್ಯಾಂಕ್ ಹೆಡ್ ಆಫೀಸ್ ಇರುವುದು ಎಂದೂ ಕೆಲವರು ಹೇಳುತ್ತಾರೆ.
ಹತ್ಯಾಕಾಂಡದ ಒಬ್ಬ ಅಪರಾಧಿ ಕೃಷ್ಣ ಐಯ್ಯಂಗಾರ್ರ ಕಕ್ಷಿದಾರನಾಗಿದ್ದರು, ಹಣದ ದುರಾಸೆಗಾಗಿ ಮಾನವೀಯತೆ ಮರೆತು ರಾಕ್ಷಸನಾದ ಎಂದು ಕೆಲವರು ಮಾತಾಡಿಕೊಂಡರೇ, ಹಂತಕರಾದ ಗೋವಿಂದರೆಡ್ಡಿ, ಕೃಷ್ಣ, ಮುನಿಸ್ವಾಮಿ ಮುಂತಾದವರು ವೃತ್ತಿಪರ ಕಳ್ಳರಾಗಿದ್ದರು. ಅವರಿಗೆ ಯಾವುದೋ ಒಂದು ಕೇಸಿನಲ್ಲಿ ಬೇಲೂರು ಶ್ರೀನಿವಾಸ ಅಯ್ಯಂಗಾರರಿಂದಲೇ ಶಿಕ್ಷೆಯಾಗಿತ್ತು, ಆ ಜಿದ್ದಿನಿಂದಲೇ ಅವರ ಕುಟುಂಬವನ್ನು ಕೊಲ್ಲಲಾಯ್ತು ಅನ್ನುವ ಮಾತುಗಳೂ ಇವೆ. ಈ ಹಂತಕರ ಜೊತೆ ಚಿಕ್ಕನಾಯಕನಹಳ್ಳಿಯ ಚನ್ನ ಎಂಬುವನು ಇದ್ದನಲ್ಲ, ಈ ಹತ್ಯಾಕಾಂಡಕ್ಕೂ ಮೊದಲು ಒಮ್ಮೆ ನಡೆಸಿದ ದರೋಡೆ ಯತ್ನ ನಾಯಿಗಳ ಬೊಗಳುವಿಕೆಯಿಂದ ವಿಫಲವಾಗಿದ್ದಾಗ ಚೆನ್ನನೂ ಇದ್ದ. ಆದರೆ ಎರಡನೇ ಪ್ರಯತ್ನದಲ್ಲಿ ಚೆನ್ನ ಇರಲಿಲ್ಲ, ಅಪರಾಧಿಗಳು ಸಿಕ್ಕಿಬಿದ್ದಿದ್ದು ಮಾತ್ರ ಚೆನ್ನನಿಂದಲೇ. ಮೂವರ ಪಾತಕಿಗಳ ಪತ್ನಿಯರು ಕ್ಷಮದಾನಕ್ಕಾಗಿ ಮೈಸೂರಿನ ಮಹಾರಾಜರಲ್ಲಿಗೂ ಹೋಗಿದ್ದರಂತೆ. ಇನ್ನು ಕಳ್ಳತನದ ಪ್ಲಾನ್ ರೂಪಿಸುವಾಗ ಜಯಮ್ಮ ಎನ್ನುವ ಹೆಂಗಸು ಸಹ ಇದ್ದಳಂತೆ. ಅಡ್ಡ ಬಂದವರನ್ನು ಕೊಂದೇ ಒಡವೆಗಳನ್ನು ಕದ್ದ ತರಬೇಕು ನ್ನುವ ಮಾತಾದಾಗ ಅವಳು ವಿರೋಧಿಸಿದ್ದಳಂತೆ. ತಿರುಪೆ ಎತ್ತಿಯಾದರೂ ಬದುಕೋಣ, ಈ ಕೊಲ್ಲುವ ಕೆಲಸ ಬೇಡ ಬಿಟ್ಚುಬಿಡಿ ಅಂದಿದ್ದಳಂತೆ ಜಯಮ್ಮ. ಆಗ ಅವಳ ಗಂಡ ನಿನಗೇನು ಗೊತ್ತು ಒಳಕ್ಕೆ ಹೋಗು ಎಂದು ಗದರಿದ್ದನಂತೆ. ಈತರಹದ ಹತ್ತಾರು ಕಥೆಗಳು ಇವತ್ತಿಗೂ ಬೆಂಗಳೂರಿನ ಹಳೆಯ ತಲೆಗಳು ಈ ಹತ್ಯಾಕಾಂಡದ ಕುರಿತು ಮಾತಾಡಿಕೊಳ್ಳುತ್ತಾರೆ.
ಮಾಹಿತಿ ಮತ್ತು ಲೇಖನ:
-ಇಂದೂದರ್ ಒಡೆಯರ್ ಚಿತ್ರದುರ್ಗ, ಹವ್ಯಾಸಿ ಬರಹಗಾರ
-ಸುದರ್ಶನ್ ರೆಡ್ಡಿ ಡಿ.ಎನ್, ಇತಿಹಾಸ ಅಧ್ಯಯನಕಾರರು ಹಾಗೂ ಲೇಖಕರು








