ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾದಕ ವಸ್ತು ಪ್ರಕರಣಗಳಲ್ಲಿ ಕಾಂಗ್ರೆಸ್ (Congress) ನಾಯಕರು ಭಾಗಿಯಾಗುತ್ತಿರುವುದು ಅಪಾಯಕಾರಿ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ 5,600 ಕೋಟಿ ರೂ. ಮೌಲ್ಯದ ಕೊಕೇನ್ (Cocaine) ಪತ್ತೆಯಾಗಿರುವ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕನ ಕೈವಾಡದ ಆರೋಪದ ವಿಚಾರವಾಗಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾದಕ ವಸ್ತುಗಳ ವಿಷಯದಲ್ಲಿ ಮೋದಿ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿ ಅಳವಡಿಸಿಕೊಳ್ಳುತ್ತಿದೆ. ಇಂತಹ ಪ್ರಕರಣಗಳಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಜಾಬ್, ಹರಿಆಮ ಸೇರಿದಂತೆ ಉತ್ತರ ಭಾರತದಲ್ಲಿ ಮಾದಕ ವಸ್ತುಗಳಿಂದ ಯುವಕರು ಅನುಭವಿಸುತ್ತಿರುವ ದುಸ್ಥಿತಿಯನ್ನು ಎಲ್ಲರೂ ನೋಡುತ್ತಿದ್ದಾರೆ. ನಮ್ಮ ಸರ್ಕಾರವು ಮಾದಕ ವಸ್ತುಗಳ ಡೀಲರ್ ಗಳ ರಾಜಕೀಯ ಸ್ಥಾನ ಅಥವಾ ಸ್ಥಾನಮಾನವನ್ನು ನೋಡದೆ ಇಡೀ ಮಾದಕ ದ್ರವ್ಯ ಜಾಲವನ್ನು ನಾಶಪಡಿಸುವ ಕೆಲಸ ಮಾಡುತ್ತಿದೆ ಎಂದು ಗುಡುಗಿದ್ದಾರೆ.
ದಕ್ಷಿಣ ದೆಹಲಿಯಲ್ಲಿ ಬುಧವಾರ ನಡೆದ ದಾಳಿಯಲ್ಲಿ 5,600 ಕೋಟಿ ರೂ. ಮೌಲ್ಯದ 562 ಕೆಜಿ ಕೊಕೇನ್ (Cocaine) ಮತ್ತು 40 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾದ ಪ್ರಕರಣದ ಹಿಂದೆ ಕಾಂಗ್ರೆಸ್ನ (Congress) ಮಾಜಿ ಕಾರ್ಯಕರ್ತ ಇರುವುದು ಪೊಲೀಸ್ ಮೂಲಗಳು ದೃಢ ಪಡಿಸಿವೆ. ಹೀಗಾಗಿ ಅಮಿತ್ ಶಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.