ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಪ್ಪುವಿನ ಮತಾಂತರದ ಸಿದ್ಧಾಂತಕ್ಕೆ ಪೂರಕವಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರ ಹೊರಟಿದೆ. ಕಾಂಗ್ರೆಸ್ ಪಕ್ಷವು ಪಿಎಎಫ್ ಐ, ಕೆಎಫ್‍ಡಿ ಪರವಾಗಿದೆಯೇ? ಎಂದು ಪ್ರಶ್ನಿಸಿದ ಅವರು, ಈ ರೀತಿ ಜನಾದೇಶದ ದುರ್ಬಳಕೆಗೆ ಬಿಜೆಪಿ ಅವಕಾಶ ಕೊಡುವುದಿಲ್ಲ. ಹಿಂದೂಗಳು ದುಡ್ಡಿನ ಆಮಿಷ, ಲವ್ ಜಿಹಾದ್, ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ಆಗದೆ ಮತಾಂತರ ಆದ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಯಾರಿಗಾಗಿ ಈ ಕಾಯ್ದೆ ತರುತ್ತಿದೆ? ಎಂದು ಪ್ರಶ್ನಿಸಿದ ಅವರು, ಬಲವಂತದ ಮತಾಂತರ ಸಲ್ಲದು ಎಂಬ ಭಾವನೆ ಹಾಗೂ ನಿಲುವನ್ನು ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಹೊಂದಿದ್ದರು. ಮತಾಂತರ ಆಗುವುದಾದರೆ ಕಾನೂನು ಪ್ರಕಾರ ಆಗಬೇಕೆಂಬ ನಮ್ಮ ಕಾಯ್ದೆಯಲ್ಲಿ ತಪ್ಪೇನಿದೆ? ಎಂದು ಕೇಳಿದರು.
ಟಿಪ್ಪು ಕೊಡಗಿನಲ್ಲಿ 50ರಿಂದ 60 ಸಾವಿರ ಜನರನ್ನು ಮತಾಂತರ ಮಾಡಿದ್ದ. ಆತನನ್ನು ವೈಭವೀಕರಿಸಿ ಅವನ ಜಯಂತಿ ಮಾಡಿದರು. ಸದ್ಯ ಕಾಯ್ದೆ ಹಿಂಪಡೆಯಲು ಹೊರಟಿದ್ದಾರೆ. ಇದನ್ನು ಹಿಂಪಡೆಯಲು ನಾವು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.








