ಮೈಸೂರು : ರಾಜ್ಯ ಸರಕಾರ ಕೋವಿಡ್ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ, ಲೆಕ್ಕಕೊಡಿ ಎಂಬ ಅಭಿಯಾನ ಆರಂಭಿಸಿದ್ದಾರೆ. ಈ ಬಗ್ಗೆ ಇದೀಗ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಭ್ರಷ್ಟಾಚಾರದ ಬಿಲ ಎಲ್ಲೆಲ್ಲಿ ಇವೆ ಅಂತಾ ಕಾಂಗ್ರೆಸ್ನವರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ ಅವರು, ಭ್ರಷ್ಟಾಚಾರದ ಬಿಲ ಎಲ್ಲೆಲ್ಲಿ ಇವೆ ಅಂತಾ ಕಾಂಗ್ರೆಸ್ ನವರಿಗೆ ಗೊತ್ತಿದೆ. ಏಕೆಂದರೆ ಆ ಬಿಲ ಸೃಷ್ಟಿ ಮಾಡಿದವರೇ ಕಾಂಗ್ರೆಸಿಗರು. ಎಲ್ಲಿ ಹೇಗೆ ಭ್ರಷ್ಟಾಚಾರ ಮಾಡಬಹುದು ಎಂಬುದು ಅವರಿಗೆ ಚೆನ್ನಾಗಿ ಅನುಭವವಿದೆ. ಇದೇ ಅನುಭವ ಇಟ್ಟುಕೊಂಡು ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಲಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂದುವರಿದು ಮಾತನಾಡಿದ ಅವರು, ಸದ್ಯ ಈಗ ಸೋಂಕಿತರ ಜೀವ ಉಳಿಸುವ ಕೆಲಸ ಮಾಡಬೇಕಿದೆ. ಲೆಕ್ಕ ಎಲ್ಲೂ ಹೋಗಲ್ಲ, ಸದನ ಕರೆದಾಗ ಲೆಕ್ಕ ಕೊಡುತ್ತೇವೆ. ಇದು ಸರಕಾರಕ್ಕೆ ಸಹಕಾರ ಕೊಡುವ ಸಮಯ, ಲೆಕ್ಕ ಕೇಳುವ ಸಮಯವಲ್ಲ. ವಿಪಕ್ಷಗಳು ಇದನ್ನು ಅರ್ಥ ಮಾಡಿಕೊಳ್ಳಲಿ. ರಾಜ್ಯದಲ್ಲಿ ದಿನ 5 ಸಾವಿರ ಕೇಸ್ ಬರ್ತಿವೆ. ಆ ಬಗ್ಗೆ ಮಾಹಿತಿ ಪಡೆಯಿರಿ. ಅದು ಬಿಟ್ಟು ಲೆಕ್ಕ ಕೇಳೋಕೆ ಈ ಕಾಲ ಪಕ್ವವಲ್ಲ ಎಂದು ಕಾಂಗ್ರೆಸ್ ಗೆ ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.








