ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಸಚಿವರಾದ ಕೃಷ್ಣಭೈರೇಗಡೌ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ, ಇಬ್ಬರು ನಾಯಕರ ವಿರುದ್ಧ ಡಿನೋಟಿಫಿಕೇಶನ್ (Denotification) ಆರೋಪ ಮಾಡಿದ್ದಾರೆ.
2007ರಲ್ಲಿ ಬೆಂಗಳೂರಿನ ಗಂಗೇನಹಳ್ಳಿಯ 1.11 ಎಕೆರ ಭೂಮಿಯನ್ನು ಸತ್ತವರ ಹೆಸರಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಜಂಟಿಯಾಗಿ ಡಿನೋಟಿಫೈ ಮಾಡಿಸಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಈ ಕುರಿತು ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿತ್ತು. ಆದರೆ, 2021ರಿಂದ ಲೋಕಾಯುಕ್ತದಿಂದ ಯಾವುದೇ ಪ್ರಗತಿಯಾಗಿಲ್ಲ ಎಂದು ದೂರಿದ್ದಾರೆ.
1976 ರಲ್ಲಿ ಗಂಗೇನಹಳ್ಳಿಯಲ್ಲಿ ಬಿಡಿಎ (BDA) ನೋಟಿಫಿಕೇಶನ್ ಆಗಿದೆ. ಅದರಲ್ಲಿ 1.11 ಎಕ್ರೆ ಜಾಗ ಡಿನೋಟಿಫೈ ಮಾಡಲು 30 ವರ್ಷದ ನಂತರ ಅರ್ಜಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಡಿನೋಟಿಫೈಗೆ ರಾಜಶೇಖರಯ್ಯ ಎಂಬವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಜಮೀನಿಗೂ ರಾಜಶೇಖರಯ್ಯಗೂ ಯಾವುದೇ ಸಂಬಂಧ ಇಲ್ಲ. ಆದರೆ, ಸಿಎಂ ಆಗಿದ್ದ ವೇಳೆ ಕುಮಾರಸ್ವಾಮಿ ಡಿನೋಟಿಫಿಕೇಶನ್ ಗೆ ಸೂಚಿಸುತ್ತಾರೆ.
2007 ರಲ್ಲಿ ಇದೇ ಜಮೀನನ್ನು ಅನಿತಾ ಕುಮಾರಸ್ವಾಮಿ ತಾಯಿ ವಿಮಲಾ ಅವರಿಗೆ ಜಿಪಿಎ ಮಾಡಲಾಗಿದೆ. ಜಿಪಿಎ ರಾಜಶೇಖರಯ್ಯ ಮಾಡಿಸಿಕೊಳ್ಳದೇ ಮೂಲ ಮಾಲೀಕರ 21 ಮಂದಿ ವಾರಸುದಾರರಿಂದ ಆಗುತ್ತದೆ. ಆನಂತರ ಕುಮಾರಸ್ವಾಮಿ ಬಾಮೈದ ಚನ್ನಪ್ಪ ಎಂಬುವವರ ಹೆಸರಿಗೆ ರಿಜಿಸ್ಟ್ರರ್ ಆಗುತ್ತದೆ. 2008ರಲ್ಲಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಡಿನೋಟಿಫೈಯಿಂದ ಕೈಬಿಡುವಂತೆ ಸೂಚಿಸುತ್ತಾರೆ. ಈ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.