Congress | ಬಿಜೆಪಿಯನ್ನು ನಂಬಿ ಹೋದವರಿಗೆ ಸಿಗುವ ಉಡುಗೊರೆ ನಂಬಿಕೆ ದ್ರೋಹ
ಬೆಂಗಳೂರು : ಬಿಜೆಪಿಯನ್ನು ನಂಬಿ ಹೋದವರಿಗೆ ಸಿಗುವ ಉಡುಗೊರೆ ನಂಬಿಕೆ ದ್ರೋಹ ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ.
ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪರಿಷತ್ ಸದಸ್ಯ ಆರ್.ಶಂಕರ್ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಸಭೆಯಲ್ಲಿ ಆರ್ ಶಂಕರ್ ನೋವು ತೋಡಿಕೊಂಡರು. ರಾಣೆಬೆನ್ನೂರಿನಲ್ಲಿ ಸ್ಪರ್ಧೆಗೆ ಅವಕಾಶ ಕೊಡಲಿಲ್ಲ. ಆರ್.ಶಂಕರ್ ಗೆ ಟಿಕೆಟ್ ಕೊಡಲೇ ಇಲ್ಲ. ಅಶೋಕ್, ಬೊಮ್ಮಾಯಿ ಶಂಕರ್ ಮನೆಗೆ ಹೋಗಿ ಕರೆದುಕೊಂಡು ಬಂದರು. ಈಗ ಆಗಿದ್ದೇನು ? ಪ್ರತಾಪ್ ಗೌಡ ಪಾಟೀಲ್ ಕಥೆ ಏನಾಯ್ತು ? ನಾನು ಬೀದಿಗೆ ಬಿದ್ದಿದ್ದೇವೆ. 17 ಜನ ಬಾಂಬೆ ಬಾಯ್ಸ್ ನಾವು ಹೋಗಿದ್ವಿ. ಇದರಲ್ಲಿ ಕೆಲವರಿಗೆ ಅನ್ಯಾಯವಾಗಿದೆ ಎಂದು ಪಕ್ಷದ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ಕೊಟ್ಟರು.

ಇದನ್ನೆ ಅಸ್ತ್ರವಾಗಿಸಿಕೊಂಡು ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ. “ಆಪರೇಷನ್ ಕಮಲಕ್ಕೆ ನೀಡಿದ ಆಸೆ, ಅಮಿಷಗಳನ್ನು ಆಪರೇಷನ್‌ಗೆ ಒಳಪಟ್ಟವರೇ ಬಹಿರಂಗಪಡಿಸಿದ್ದಾರೆ. ಆಪರೇಷನ್ ಮಾಡಿಸಿಕೊಂಡವರ ಬೇಡಿಕೆಯನ್ನೇ ಪೂರೈಸದ ಬಿಜೆಪಿ ಜನತೆಗೆ ನೀಡಿದ ಭರವಸೆ ಈಡೇರಿಸುವುದೇ?! ಬಿಜೆಪಿಯನ್ನು ನಂಬಿ ಹೋದವರಿಗೆ ಸಿಗುವ ಉಡುಗೊರೆ ನಂಬಿಕೆ ದ್ರೋಹ ಮಾತ್ರ, ಮತದಾರರಾದರೂ ಸರಿ, ಶಾಸಕರಾದರೂ ಸರಿ! ಎಂದು ಬರೆದುಕೊಂಡಿದೆ.