Congress’ President Elections: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸುವ ನಾಯಕರಾರು ?
ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಳ್ಳಲು ರಾಹುಲ್ ಗಾಂಧಿ ಹಿಂದೇಟು ಹಾಕುತ್ತಿರುವುದರಿಂದ ಗಾಂಧಿ ಕುಟುಂಬವನ್ನ ಹೊರತುಪಡಿಸಿ ಬೇರೋಬ್ಬರು ಅಧ್ಯಕ್ಷ ಪದವಿಯಲ್ಲಿ ಕೂರಲಿದ್ದಾರೆ ಎನ್ನವ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಆದರೆ ಆ ಹುದ್ದೆಯನ್ನು ಯಾರು ಅಲಂಕರಿಸಲಿದ್ದಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ರಾಹುಲ್ ಗಾಂಧಿಯನ್ನ ಮನವೊಲಿಸಲು ನಡೆದ ಹಲವಾರು ಪ್ರಯತ್ನಗಳು ವಿಫಲವಾಗಿವೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗಿರುವ ನಾಯಕರಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (71) ಮುಂಚೂಣಿಯಲ್ಲಿದ್ದಾರೆ. ವೇಳಾಪಟ್ಟಿಯ ಪ್ರಕಾರ, ಈ ಹುದ್ದೆಗೆ ನಾಮನಿರ್ದೇಶನ ಪ್ರಕ್ರಿಯೆಯು ಭಾನುವಾರದಿಂದ (ಆಗಸ್ಟ್ 21) ಪ್ರಾರಂಭವಾಗಲಿದೆ. ಆದರೆ ಪಕ್ಷದಲ್ಲಿ ಅನಿಶ್ಚಿತತೆ ಕಾರಣದಿಂದ ಪಕ್ಷ ಅಧಿಕೃತವಾಗಿ ಪ್ರತಿಕ್ರಿಯಿಸುತ್ತಿಲ್ಲ.
ಅಶೋಕ್ ಗೆಹ್ಲೋಟ್ ಅವರೊಂದಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್, ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಸಹ ಪರಿಗಣಿಸಲಾಗಿದೆ.
ನಿಗದಿಯಂತೆ ಚುನಾವಣೆ ನಡೆದರೆ ಸೆಪ್ಟೆಂಬರ್ 20ರಂದು ಫಲಿತಾಂಶ ಹೊರಬೀಳಲಿದೆ. ಮುಂದಿನ ವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಮತದಾರರ ಪಟ್ಟಿಯನ್ನು ಮಂಡಿಸಲಿದ್ದಾರೆ. CWC ಸದಸ್ಯರು ಮತ್ತು ಕಾಂಗ್ರೆಸ್ ಅಧ್ಯಕ್ಷರನ್ನು ಈ ಮತದಾರರು ಆಯ್ಕೆ ಮಾಡುತ್ತಾರೆ.
ಗಾಂಧಿ ಕುಟುಂಬದ ಹಿನ್ನೆಲೆ ಇಲ್ಲದ ಸೀತಾರಾಮ್ ಕೇಸರಿ ಅವರು 1996ರಿಂದ 1998 ರವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ನಂತರ ಸೋನಿಯಾ ಗಾಂಧಿ ಪಕ್ಷದ ಅಧಿಕಾರವನ್ನು ವಹಿಸಿಕೊಂಡರು. ಪ್ರಸ್ತುತ ಅವರು ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರೋಗ್ಯದ ಕಾರಣದಿಂದ ಆಕೆ ಆ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿರಲಿಲ್ಲ.