ಇಂದು ಪಕ್ಷದ ಎಲ್ಲಾ ಸಂಸದರೊಂದಿಗೆ ಸಭೆ ನಡೆಸಲಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ
ಹೊಸದಿಲ್ಲಿ, ಜುಲೈ 11: ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತಮ್ಮ ಪಕ್ಷದ ಲೋಕಸಭಾ ಸದಸ್ಯರ ಜತೆ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಸೋನಿಯಾ ಗಾಂಧಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ನ ಸಂಸದರ ಜತೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆಯಾಗಬಹುದು ಎಂಬ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ದೇಶದಲ್ಲಿ ತೀವ್ರಗತಿಯಲ್ಲಿ ಏರಿಕೆ ಕಂಡಿರುವ ಕೊರೊನಾ ವೈರಸ್ ಪ್ರಕರಣ, ಭಾರತ-ಚೀನಾ ಗಡಿ ಸಂಘರ್ಷ, ದೇಶದ ಆರ್ಥಿಕ ಕುಸಿತ, ವಲಸೆ ಕಾರ್ಮಿಕರ ಸಂಕಷ್ಟ, ಏರುತ್ತಿರುವ ಇಂಧನ ಬೆಲೆ, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಹಲವು ನೀತಿ-ನಿರ್ಧಾರಗಳನ್ನು ಸರ್ಕಾರವು ಕೈಗೊಂಡಿರುವ ಬಗ್ಗೆ ಚರ್ಚೆ ನಡೆಯಬಹುದು ಎಂದು ವಿಶ್ಲೇಷಿಸಲಾಗಿದೆ.
ಕೈ ಪಕ್ಷದ ಎಲ್ಲಾ ಸಂಸದರೊಂದಿಗೂ ಸೋನಿಯಾ ಗಾಂಧಿ ಚರ್ಚೆ ನಡೆಸಲಿದ್ದು, ಪಕ್ಷದ ಎಲ್ಲಾ ಸಂಸದರು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.








