Congress protest : ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ಪ್ರತಿಭಟನೆ – TMC ಸೇರಿ 17ಕ್ಕೂ ಹೆಚ್ಚು ಪಕ್ಷಗಳ ಬೆಂಬಲ…
ಸಂಸದ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹತೆ ಮತ್ತು ಅದಾನಿ ಪ್ರಕರಣವನ್ನ ಪ್ರಸ್ತಾಪಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಕಪ್ಪು ಬಟ್ಟೆಯನ್ನ ಧರಿಸಿ ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆಯಲ್ಲಿ 17 ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
ಮತ್ತೊಂದೆಡೆ ವಿರೋಧ ಪಕ್ಷದ ಸಂಸದರು ಲೋಕಸಭೆಯಲ್ಲಿ ಕೋಲಾಹಲಾ ಸೃಷ್ಟಿಸಿದ್ದಾರೆ. ಸಂಸದರೊಬ್ಬರು ಸ್ಪೀಕರ್ ಓಂ ಬಿರ್ಲಾ ಅವರ ಆಸನದ ಬಳಿ ತಲುಪಿ ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ. ನಂತರ ಸ್ಪೀಕರ್ ಸದನವನ್ನ ಮುಂದೂಡಿ ನಿರ್ಗಮಿಸಿದ್ದಾರೆ. ಉಭಯ ಸದನಗಳ ಕಲಾಪ ಬೆಳಗ್ಗೆ 11 ಗಂಟೆಗೆ ಆರಂಭವಾಯಿತು. ಪ್ರತಿಪಕ್ಷಗಳ ಗದ್ದಲದಿಂದಾಗಿ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ಲೋಕಸಭೆಯ ಕಲಾಪವನ್ನು ಸಂಜೆ 4 ಗಂಟೆಯವರೆಗೆ ಮುಂದೂಡಲಾಯಿತು.
ಪ್ರಜಾಪ್ರಭುತ್ವಕ್ಕೆ ಕಪ್ಪು ಅಧ್ಯಾಯ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ. ಮೊದಲ ಬಾರಿಗೆ ಆಡಳಿತ ಪಕ್ಷ ಸಂಸತ್ತನ್ನ ಸ್ಥಗಿತಗೊಳಿಸುತ್ತಿದೆ. ಏಕೆ? ಯಾಕೆಂದರೆ ಮೋದಿಜಿಯ ಆತ್ಮೀಯ ಗೆಳೆಯನ ಕರಾಳ ಕೃತ್ಯಗಳು ಬಯಲಾಗುತ್ತಿವೆ! ಜೆಪಿಸಿ ಬೇಡಿಕೆಗೆ ಅವಿರೋಧ ವಿರೋಧ ವ್ಯಕ್ತವಾಗುತ್ತಿದೆ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಸಂಸತ್ ಕಲಾಪ ಆರಂಭಕ್ಕೂ ಮುನ್ನ ತಮ್ಮ ಚೇಂಬರ್ ನಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ನಡೆಸಿದರು. ಕಾಂಗ್ರೆಸ್, ಡಿಎಂಕೆ, ಎಸ್‌ಪಿ, ಜೆಡಿಯು, ಬಿಆರ್‌ಎಸ್, ಸಿಪಿಎಂ, ಆರ್‌ಜೆಡಿ, ಎನ್‌ಸಿಪಿ, ಸಿಪಿಐ, ಎಎಪಿ ಮತ್ತು ಟಿಎಂಸಿ ಸೇರಿದಂತೆ 17 ಪಕ್ಷಗಳು ಇದರಲ್ಲಿ ಭಾಗವಹಿಸಿದ್ದವು.
ಈ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಉಪಸ್ಥಿತಿ ಅಚ್ಚರಿ ಮೂಡಿಸಿದೆ. ಈ ಅಧಿವೇಶನದಲ್ಲಿ, ಟಿಎಂಸಿ ಇದುವರೆಗೆ ಯಾವುದೇ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜೊತೆಗೂಡಿ ಬಂದಿಲ್ಲ. ಟಿಎಂಸಿ ನಾಯಕರ ಆಗಮನದ ವೇಳೆ, ಪ್ರಜಾಪ್ರಭುತ್ವ ರಕ್ಷಣೆಗೆ ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದು ಖರ್ಗೆ ಹೇಳಿದರು.
‘Black shirt’ protest for Rahul Gandhi, surprise TMC visit and Parliament chaos