ಕೊಪ್ಪಳ : ಕಾಂಗ್ರೆಸ್ ಆಡಳಿತದ ಪಾಪದ ಫಲದಿಂದ ಇಂದು ಪುಂಡ ಪೋಕರಿಗಳು ಮೆರೆಯುತ್ತಿದ್ದಾರೆ. ಇಂದು ಶಾಸಕರನ್ನೂ ಬಿಡದಂತೆ ಪುಂಡ ಪೋಕರಿಗಳನ್ನು ಕಾಂಗ್ರೆಸ್ ಬೆಳೆಸಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳ ಅವರು ಕುಷ್ಟಗಿ ತಾಲೂಕಿನ ಹನುಮಸಾಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬೆಂಗಳೂರು ಗಲಭೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಜಿ.ಹಳ್ಳಿ , ಡಿ.ಜೆ ಹಳ್ಳಿ ಗಲಾಟೆ ಕೇಸ್ ನಲ್ಲಿ ಕಾಂಗ್ರೆಸ್ ನವರಿಗೆ ಮತ ಬ್ಯಾಂಕ್ ಮುಖ್ಯ. ಕಾಂಗ್ರೆಸ್ ನವರಿಗೆ ದಲಿತ ಶಾಸಕನ ರಕ್ಷಣೆ ಮುಖ್ಯ ಅಲ್ಲ. 70 ವರ್ಷದಲ್ಲಿ 56 ವರ್ಷ ಕಾಂಗ್ರೆಸ್ ಆಡಳಿತ ಮಾಡಿದರೂ ಯಾರ ರಕ್ಷಣೆ ಮಾಡಿಲ್ಲ. ಯಾರನ್ನೂ ಕಾಂಗ್ರೆಸ್ ಉದ್ದಾರ ಮಾಡಿಲ್ಲ. ಸಂವಿಧಾನದ ಆಶಯದ ಪ್ರಕಾರದ ದೀನ ದಲಿತರ ಉದ್ದಾರ ಆಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಶಾಸಕ ಅಖಂಡ ಶ್ರೀನಿವಾಸ್ ದಲಿತ ಅಥವಾ ಹಿಂದೂ ವಾಖ್ಯಾನದ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹಿರಿಯ ರಾಜಕಾರಣಿಯಾಗಿ ಈ ರೀತಿ ಮಾತನಾಡೋದು ಸರಿ ಅಲ್ಲ. ಬಸವಣ್ಣ ನಮಗೆ ಹೇಳಿದ್ದು ಒಂದೇ ಕುಲ, ಗಂಡು, ಹೆಣ್ಣು ಎರಡೇ ಜಾತಿ ಎಂದು ಸಿದ್ದುಗೆ ಟಾಂಗ್ ನೀಡಿದರು.









