ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಎದ್ದಿರುವ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಶೀತಲ ಸಮರ ಇದೀಗ ಬೀದಿಗೆ ಬಂದಿದ್ದು, ರಾಜಕೀಯ ಪೈಪೋಟಿ ಈಗ ಜಾತಿ ಸಂಘರ್ಷವಾಗಿ ಬದಲಾಗುವ ಆತಂಕ ಸೃಷ್ಟಿಯಾಗಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಪರವಾಗಿ ಕುರುಬ ಸಮುದಾಯ ಹಾಗೂ ಅಹಿಂದ ವರ್ಗ ಅಖಾಡಕ್ಕಿಳಿದಿದ್ದರೆ, ಇನ್ನೊಂದೆಡೆ ಡಿ.ಕೆ. ಶಿವಕುಮಾರ್ ಪರ ಒಕ್ಕಲಿಗ ಸಮುದಾಯ ಗುಡುಗಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಹೈಕಮಾಂಡ್ ತೀವ್ರ ಇಕ್ಕಟ್ಟಿಗೆ ಸಿಲುಕಿದೆ.
ಕಾಂಗ್ರೆಸ್‌ಗೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಕುರುಬ ಸಮುದಾಯ
ಕುರುಬರು ಇಲ್ಲದ ಊರಿಲ್ಲ ಎಂಬ ಮಾತಿನಂತೆ, ರಾಜ್ಯಾದ್ಯಂತ ನಿರ್ಣಾಯಕ ಸಂಖ್ಯೆಯಲ್ಲಿರುವ ಕುರುಬ ಸಮುದಾಯ ತನ್ನ ನಾಯಕನ ರಕ್ಷಣೆಗಾಗಿ ಕಂಕಣ ತೊಟ್ಟಿದೆ. ಶುಕ್ರವಾರ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ನೇರ ಹಾಗೂ ಖಡಕ್ ಸಂದೇಶವನ್ನು ರವಾನಿಸಲಾಗಿದೆ. ಸಿದ್ದರಾಮಯ್ಯ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಶೋಷಿತರ ಧ್ವನಿ. ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಸಾಹಸಕ್ಕೆ ಕೈ ಹಾಕಿದರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನೇ ಸಂಪೂರ್ಣವಾಗಿ ಬಹಿಷ್ಕರಿಸಬೇಕಾಗುತ್ತದೆ ಎಂದು ಸಮುದಾಯದ ಮುಖಂಡರು ಗುಟುರು ಹಾಕಿದ್ದಾರೆ.
ಸಿದ್ದರಾಮಯ್ಯ ಅಹಿಂದ ವರ್ಗದ ಪ್ರಶ್ನಾತೀತ ನಾಯಕ
ಕುರುಬ ಸಂಘದ ಮುಖಂಡರು ಮಂಡಿಸಿದ ಪ್ರಮುಖ ವಾದವೆಂದರೆ, ಸಿದ್ದರಾಮಯ್ಯ ಕೇವಲ ಕುರುಬ ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಅವರು ದಶಕಗಳಿಂದ ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ವರ್ಗದ ಪರವಾಗಿ ಬಂಡೆಯಂತೆ ನಿಂತವರು. ಸರ್ವ ಧರ್ಮಗಳ ಏಳಿಗೆಗಾಗಿ ದುಡಿಯುತ್ತಿರುವ, ಕಳಂಕ ರಹಿತ ವ್ಯಕ್ತಿತ್ವ ಹೊಂದಿರುವ ನಾಯಕನ ಘನತೆಗೆ ಧಕ್ಕೆ ತರುವ ಕೆಲಸವನ್ನು ಸ್ವಪಕ್ಷೀಯರೇ ಮಾಡುತ್ತಿರುವುದು ದುರಂತ. ಅಚಾನಕ್ ಆಗಿ ಸೃಷ್ಟಿಯಾದ ಬೆಳವಣಿಗೆಗಳಿಂದ ಒಬ್ಬ ಮೇರು ರಾಜಕಾರಣಿಗೆ ಘಾಸಿಯಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಹೈಕಮಾಂಡ್ ಕೂಡಲೇ ಎಚ್ಚೆತ್ತುಕೊಂಡು ಸಿಎಂ ಬೆಂಬಲಕ್ಕೆ ನಿಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ, ಒಂದು ವೇಳೆ ಹೈಕಮಾಂಡ್ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಹೋರಾಟ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರುವುದಿಲ್ಲ. ಇದು ರಾಷ್ಟ್ರವ್ಯಾಪಿ ಹೋರಾಟವಾಗಿ ರೂಪಗೊಳ್ಳಲಿದೆ. ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ಒಕ್ಕೂಟಗಳು ಸಿಎಂ ಬೆಂಬಲಕ್ಕೆ ನಿಂತಿದ್ದು, ನಾಯಕತ್ವ ಬದಲಾವಣೆಗೆ ಕೈ ಹಾಕಿದರೆ ಅಹಿಂದ ವರ್ಗದ ಸುಮಾರು 80ಕ್ಕೂ ಹೆಚ್ಚು ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂಬ ಸ್ಫೋಟಕ ಎಚ್ಚರಿಕೆಯನ್ನು ನೀಡಲಾಗಿದೆ.
ಇನ್ನೊಂದೆಡೆ, ಒಕ್ಕಲಿಗ ಪಾಳಯ ಕೂಡ ಸುಮ್ಮನೆ ಕುಳಿತಿಲ್ಲ. ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಬಹಿರಂಗವಾಗಿಯೇ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಪ್ರತಿಪಾದಿಸಿದ ಬೆನ್ನಲ್ಲೇ, ಒಕ್ಕಲಿಗ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡದಿದ್ದರೆ ನಾವೆಲ್ಲರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಒಂದೇ ಒಂದು ವೋಟು ಕೂಡ ಕಾಂಗ್ರೆಸ್‌ಗೆ ಬೀಳದಂತೆ ನೋಡಿಕೊಳ್ಳುತ್ತೇವೆ ಎಂದು ಹೈಕಮಾಂಡ್‌ಗೆ ನೇರ ಸವಾಲು ಹಾಕಿದ್ದಾರೆ.
ಹೈಕಮಾಂಡ್ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ?
ಕಳೆದ ನಾಲ್ಕೈದು ತಿಂಗಳುಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಮುಸುಕಿನ ಗುದ್ದಾಟ ನಡೆಯುತ್ತಿದ್ದರೂ, ಹೈಕಮಾಂಡ್ ಜಾಣ ಕುರುಡು ಪ್ರದರ್ಶಿಸಿತ್ತು. ಪಕ್ಷಕ್ಕೆ ಸ್ಪಷ್ಟ ಬಹುಮತವಿದೆ, ಸರ್ಕಾರಕ್ಕೆೇನೂ ಆಗುವುದಿಲ್ಲ ಎಂಬ ಉಡಾಫೆಯ ಮನೋಭಾವವೇ ಇಂದಿನ ಈ ವಿಷಮ ಪರಿಸ್ಥಿತಿಗೆ ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದ್ದು, ಎರಡು ಪ್ರಬಲ ಸಮುದಾಯಗಳ ನಡುವಿನ ಈ ಕಾದಾಟದಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾಗುವ ಭೀತಿ ಎದುರಾಗಿದೆ.
ಒಟ್ಟಿನಲ್ಲಿ, ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಅಧಿಕಾರದ ತಿಕ್ಕಾಟ ಈಗ ಜಾತಿ ಸಮರಕ್ಕೆ ನಾಂದಿ ಹಾಡಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.








