ಭಾರತೀಪುರ ತಿರುವುನಲ್ಲಿ ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ
ಶಿವಮೊಗ್ಗ: ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟೀಯ ಹೆದ್ದಾರಿಯಲ್ಲಿ ಬರುವ ಭಾರತೀಪುರ ಹೇರ್ ಪಿನ್ ತಿರುವಿನಲ್ಲಿ ಸಾಕಷ್ಟು ಅಪಘಾತಗಳಾಗುತ್ತಿದ್ದು, ಇದನ್ನು ತಪ್ಪಿಸಲು ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಹೆದ್ದಾರಿ ಮಂತ್ರಾಲಯ ಅನುಮತಿ ನೀಡಿದೆ. ಈ ಕಾಮಗಾರಿಗೆ 58 ಕೋಟಿ ರೂ ವೆಚ್ಚವಾಗಲಿದ್ದು, ಕಾಮಗಾರಿ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಇದಷ್ಟೇ ಅಲ್ಲದೇ ಕೇಂದ್ರ ಹೆದ್ದಾರಿ ಮಂತ್ರಾಲಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಿಂದ ಆಗುಂಬೆವರೆಗೆ 14.77 ಕಿ.ಮೀ. ರಾಷ್ಟ್ರೀಯ ಹೆದ್ದಾರಿ 169-Aಗೆ ದ್ವಿಪಥ (10 ಮೀಟರ್) ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು 96.20 ಕೋಟಿ ರೂ.ಗೆ ಅನುಮೋದನೆ ನೀಡಿದೆ ಎಂದು ತಿಳಿಸಿದರು.