ಭಾರಿ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದ್ದು, ಆಮ್ ಆದ್ಮಿ ಪಾರ್ಟಿ ದರ್ಬಾರ್ ಮುಂದುವರಿಸಿದೆ. ಸದ್ಯದ ಮಾಹಿತಿ ಪ್ರಕಾರ ಆಪ್ 53, ಬಿಜೆಪಿ 17 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಯಾವುದೇ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ. ಎಕ್ಸಿಟ್ ಪೋಲ್ ಗಳಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಮತದಾರರು ಯಾರನ್ನು ದೆಹಲಿ ಗದ್ದುಗೆಯಲ್ಲಿ ಕೂರಿಸುತ್ತಾರೆ ಎಂಬುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
ಪೂರ್ವ ದೆಹಲಿಯ ತ್ರಿಲೋಕಪುರಿ, ಕೊಂಡ್ಲಿ, ಪಾತ್ ಪರಗಂಜ್, ಲಕ್ಷ್ಮಿನಗರ, ಕೃಷ್ಣನಗರ, ಗಾಂಧಿನಗರ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಅಕ್ಷರಧಾಮ್ ಟೆಂಪಲ್ ಸಮೀಪದ ಕಾಮನ್ ವೆಲ್ತ್ ಗೇಮ್ಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿದೆ. ಇದೇ ರೀತಿ ನೈಋತ್ಯ ದೆಹಲಿಯ ವಿಕಾಸಪುರಿ, ಮಟಿಯಾಲ, ನಜಾಫ್‌ಗಢ, ಪಾಲಂ, ಉತ್ತಮ್ ನಗರ, ದ್ವಾರಕಾ, ಬಿಜ್ವಾಸಾನ್‌ಗಳ ಮತ ಎಣಿಕೆ ದ್ವಾರಕಾ ಸೆಕ್ಟರ್ 9ರ ಐಐಟಿಯಲ್ಲಿ, ಎಸ್‌ಸಿಇಆರ್ ಟಿ ದ್ವಾರಕಾ ಸೆಕ್ಟರ್ 6ರಲ್ಲಿ ಉಳಿದವುಗಳ ಮತ ಎಣಿಕೆ ನಡೆಯುತ್ತಿದೆ.
ಫೆಬ್ರವರಿ 8ರಂದು ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಒಟ್ಟು ಮತದಾನ ಪ್ರಮಾಣ ಶೇ 62.59 ಆಗಿತ್ತು ಎಂದು ಚುನಾವಣಾ ಆಯೋಗ ಘೋಷಿಸಿತ್ತು.