ನವದೆಹಲಿ : ‘ಕೊರೊನಾ ವೈರಸ್ ಕಾಣಿಸಿಕೊಳ್ಳುವ ಮುನ್ನ ಇದ್ದ ಆರ್ಥಿಕ ದುಃಸ್ಥಿತಿಗೆ ಕಾರಣರ್ಯಾರು’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರ “ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ದೇವರಾಟ” ಎಂಬ ಹೇಳಿಕೆಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ನಿರ್ಮಲಾ ಸೀತಾರಾಮನ್ ಕೊರೊನಾ ಮಹಾಮಾರಿ ಕಾಣಿಸಿಕೊಂಡ ನಂತರ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇದಕ್ಕೆ ದೇವರಾಟವೇ ಕಾರಣ ಎಂದಿದ್ದರು. ಇದಕ್ಕೆ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿರುವ ಚಿದಂಬರಂ, ಪ್ರಸ್ತುತ ಹಣಕಾಸು ಸ್ಥಿತಿ ದೇವರಾಟ ಎಂದು ನಿರ್ಮಲಾ ಅವರು ಹೇಳಿಕೆ ನೀಡಿದ್ದಾರೆ. ಸೋಂಕು ಕಾಣಿಸಿಕೊಂಡ ನಂತರ ಆರ್ಥಿಕ ದುಃಸ್ಥಿತಿ ಎದುರಾಗಿದೆ ಎನ್ನುವುದಾದರೆ 2017-2018 , 2018-2019 ಮತ್ತು 2019-2020ರ ಅವಯಲ್ಲಿನ ಆರ್ಥಿಕ ದಿವಾಳಿಗೆ ಕಾರಣರ್ಯಾರು ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ಜಿಎಸ್ ಟಿ ಬಾಕಿಯಿಂದ ಎದುರಾಗಿರುವ ನಷ್ಟವನ್ನು ಆಯಾ ರಾಜ್ಯಗಳೇ ಭರಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಹೇಳಿಕೆಗೂ ಚಿದಂಬರಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟರೆ ಅದನ್ನು ನಿಭಾಯಿಸುವ ಹೊಣೆ ಕೇಂದ್ರ ಸರ್ಕಾರದ್ದು. ಈ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿರುವವರು ಗಮನ ಹರಿಸಬೇಕು. ಇಂದಿನ ಪರಿಸ್ಥಿತಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುವ ರೀತಿ ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದೆ ಎಂದಿದ್ದಾರೆ.