ವಿಚಿತ್ರ ಖಯಾಲಿಯ ಕಾಂಟ್ರೋವರ್ಶಿಯಲ್ ಪಾಪ್ ಗಾಯಕ ಟೆಂಟಾಶಿಯನ್

1 min read

ವಿಚಿತ್ರ ಖಯಾಲಿಯ ಕಾಂಟ್ರೋವರ್ಶಿಯಲ್ ಪಾಪ್ ಗಾಯಕ ಟೆಂಟಾಶಿಯನ್ ಮತ್ತವನ ನಿಗೂಢ ಕಗ್ಗೊಲೆ ಹಿಂದಿನ ಸತ್ಯ:

ಎಕ್ಸ್ ಎಕ್ಸ್ ಎಕ್ಸ್ ಟೆಂಟಾಶಿಯನ್ ಈ ಹೆಸರು ಇತ್ತೀಚಿನ ಅಮೇರಿಕನ್-ಪಾಪ್ ಸಂಗೀತ ಲೋಕದಲ್ಲಿ ತೀವ್ರ ಸಂಚಲನ ಹಾಗು ಕ್ರೇಜ಼್ ಸೃಷ್ಟಿಸಿತ್ತು. ಈ ಯುವಕ ಅಮೇರಿಕದ ಖ್ಯಾತ ರ್ಯಾಪರ್ ಸಿಂಗರ್ ಹಾಗು ಸಾಂಗ್ ರೈಟರ್ ಆಗಿದ್ದವ. ವಿಶ್ವವೇ ಮೆಚ್ಚುವಂತಹ ಹಾಡುಗಳನ್ನ ರಚಿಸಿ ಹಾಡಿದ ಈ ಸಿಂಗರ್ ಅತಿ ಸಣ್ಣ ವಯಸ್ಸಿಗೇ ಸಂಗೀತದಲ್ಲಿ ಹೆಸರು ಮಾಡಿದ್ದ ಪ್ರತಿಭಾವಂತ. ತನ್ನ ಅಸಾಧ್ಯ ಗಾಯನದಿಂದ ಹಾಗು ಮಾರ್ಮಿಕ ಹಾಡುಗಳಿಂದ ಜಗತ್ತಿನಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನ ಸಂಪಾದಿಸಿದ ವ್ಯಕ್ತಿ ಈ ಎಕ್ಸ್ ಎಕ್ಸ್ ಎಕ್ಸ್ ಟೆಂಟಾಶಿಯನ್.

ಈತನ ಹೆಸರನ್ನ ಈಗ ಕೇಳದವರು ಅತ್ಯಂತ ವಿರಳ ಎನ್ನಬಹುದು. ದೇಶ ಭಾಷೆ ಮತಗಳ ಗಡಿಯಾಚೆಗೂ ಸದ್ದು ಮಾಡಿರುವ ಈ ಕಿರಿ ಗಾಯಕ ಯಾರು? ಈತನ ಹಿನ್ನೆಲೆಯೇನು? ಹಾಗೂ ಅತಿ ಮುಖ್ಯವಾಗಿ ಈತನ ಕಗ್ಗೊಲೆ ಏಕೆ ಮತ್ತು ಯಾವ ಕಾರಣಕ್ಕಾಗಿ ಜರುಗಿತು ಅನ್ನುವುದೂ ಅತ್ಯಂತ ಕುತೂಹಲದ ವಿಚಾರ. ಹೌದು! ಎಕ್ಸ್ ಎಕ್ಸ್ ಎಕ್ಸ್ ಟೆಂಟಾಶಿಯನ್ ಇಂದು ಬದುಕಿಲ್ಲ. ಆತನನ್ನ ಹತ್ಯೆ ಮಾಡಿ ಇಂದಿಗೆ ಮೂರು ವರ್ಷಗಳ ಮೇಲಾಗಿದೆ. ಈತನ ಹತ್ಯೆ ಅಮೇರಿಕದ ರ್ಯಾಪ್‌ ಪಾಪ್ ಸಂಗೀತ ಲೋಕವನ್ನೆ ಅಲುಗಾಡಿಸಿದ್ದ ಒಂದು ದುರ್ಭೀಕರ ಪ್ರಕರಣ.‌ ಹುಟ್ಟಿದಾಗಿಂದಲು ವಿವಾದಗಳ ಸುಳಿಗಳಲ್ಲೆ ಸಿಲುಕುತ್ತಾ ಬಂದ ಟೆಂಟಾಶಿಯನ್ ಮೂಲತಃ ಅಮೇರಿಕದವನು; ಜನಿಸಿದ್ದು ಅಮೇರಿಕದ ಫ್ಲೋರಿಡಾದಲ್ಲಿ.

ಈತನ ಪೂರ್ತಿ ಹೆಸರು ಜಾಹ್ಸೆ ಡ್ವೇಯ್ನ್ ರಿಕಾರ್ಡೊ ಆನ್ ಫ್ರಾಯ್. 1998ರ ಜನವರಿ 23ರಂದು ಜನಿಸಿದ ಟೆಂಟಾಶಿಯನ್ ಹುಟ್ಟಿದ ಕ್ಷಣದಿಂದಲೆ ತಂದೆಯ ಪ್ರೀತಿಯಿಂದ ವಂಚಿತನಾದವನು. ಅವನ ತಾಯಿ ಇನ್ನೂ ಗರ್ಭವತಿಯಾಗಿದ್ದಾಗಲೆ ಅವನ ತಂದೆ ಮನೆ ಬಿಟ್ಟು ದೂರ ಹೋಗಿದ್ದರು. ಈತನ ತಾಯಿಯ ಹೆಸರು ಕ್ಲಿಯೊಪಾತ್ರ ಬರ್ನಾರ್ಡ್. ತಂದೆಯ ಹೆಸರು ಡ್ವೇಯ್ನ್ ಆನ್ ಫ್ರಾಯ್. ತಂದೆ ತಾಯಂದಿರಿಬ್ಬರೂ ಪರಸ್ಪರ ದೂರವಾಗಿದ್ದ ಕಾರಣ ಟೆಂಟಾಶಿಯನ್ ಮೊದಲಿಂದಲು ತನ್ನ ಅಜ್ಜಿಯೊಂದಿಗೇ ಹೆಚ್ಚಿನ ಸಮಯ ಕಳೆಯಬೇಕಾಗಿ ಬಂತು. ಅಜ್ಜಿಯೊಂದಿಗೆ ಬೆಳೆಯುತ್ತಿದ್ದ ಮಗನನ್ನು ನೋಡಲೆಂದು ಆಗಾಗ ಅವನ ತಾಯಿ ಕ್ಲಿಯೊಪಾತ್ರ ಬರುತ್ತಿದ್ದರು. ಹೀಗೆ ಬಂದವರು ಕೆಲವು ದಿನಗಳ ಕಾಲ ಅವನೊಡನೆ ಇದ್ದು ನಂತರ ಹೊರಟು ಹೋಗುತ್ತಿದ್ದರು.

ತಾಯಿಯ ಕತೆ ಇಷ್ಟಾದರೆ ಅತ್ತ ತಂದೆ ಒಮ್ಮೆಯೂ ಸಹ ಮಗನನ್ನು ಕಾಣಲು ಬರುತ್ತಲೆ ಇರಲಿಲ್ಲ. ಇದು ಟೆಂಟಾಶಿಯನ್‌ಗೆ ಮೊದಮೊದಲು ಅತೀವ ಬೇಸರ ಮೂಡಿಸಿತ್ತು. ತನ್ನ ತಂದೆ ತನ್ನನ್ನೇಕೆ ನೋಡಲು ಬರುತ್ತಿಲ್ಲ ಎಂದು ಸದಾ ಆತ ಯೋಚಿಸುತ್ತಾ ಇರುತ್ತಿದ್ದ.‌ ಈ ವಿಷಯ ಆತನಲ್ಲಿ ತನ್ನ ತಂದೆಯ ಮೇಲೆ ದ್ವೇಷ ಭಾವನೆ ಬರುವಂತೆ ಮಾಡಿತ್ತು. ಟೆಂಟಾಶಿಯನ್ ಮುಂಗೋಪಿಯಾಗಿದ್ದವ. ಯಾವಾಗಲು ಕೋಪದಿಂದಲೆ ಇರುತ್ತಿದ್ದ ಟೆಂಟಾಶಿಯನ್ ಸದಾ ನೆರೆಮನೆಯವರ ಜತೆ ಹಾಗು ತನ್ನ ಶಾಲಾ ಸಹಪಾಠಿಗಳ ಜತೆ ಜಗಳ ಮಾಡಿಕೊಳ್ಳುತ್ತಿದ್ದ. ಅನೇಕ ಸಲ ಆತ ಜಗಳ ಮಾಡಿಕೊಂಡು ಒದೆ ತಿಂದದ್ದೂ ಇದೆ. ಇದೇ ಕಾರಣಕ್ಕೆ ಶಾಲೆಗಳಲ್ಲು ಸಹ ಆತನ ಅಡ್ಮಿಷನ್ ಕ್ಯಾನ್ಸಲ್ ಮಾಡಿಸಿ ಡಿಸ್ಮಿಸ್ ಮಾಡಲಾಗ್ತಿತ್ತು‌‌. ಯಾವುದೇ ಶಾಲೆಗೆ ಹೋದರೂ ಸಹ ಅವನ ವರ್ತನೆ ಮಾತ್ರ ಬದಲಾಗಲಿಲ್ಲ. ಅವನು ಸಹಪಾಠಿಗಳ ಜತೆ ಸದಾ ಸಣ್ಣ ಸಣ್ಣ ಕಾರಣಕ್ಕೂ ಕದನಕ್ಕಿಳಿಯುತ್ತಿದ್ದ.

ಅವನ ಜೀವನ ಹೀಗೇ ಅನಿಶ್ಚಿತವಾಗಿ ಸೂತ್ರ ಇಲ್ಲದ ಗಾಳಿಪಟದ ಹಾಗೆ ಎತ್ತೆತ್ತಲೊ ಸಾಗಿತ್ತು. ಹೀಗಿದ್ದಾಗಲೆ 2012ರಲ್ಲೊಮ್ಮೆ ಟೆಂಟಾಶಿಯನ್ ಪರ್ಮಿಟ್ ಇಲ್ಲದ ಗನ್ ಒಂದನ್ನ ನೇರ ಶಾಲೆಗೇ ತಂದು ಅದನ್ನ ಸಹಪಾಠಿಯೊಬ್ಬನಿಗೆ ಗುರಿಯಿಟ್ಟು ಬೆದರಿಕೆ ಹಾಕಿ ಆತನ ಬಳಿ ಇದ್ದ ಹಣ ದೋಚಲು ಯತ್ನಿಸಿದ್ದ. ಈ ಘಟನೆ ಬಯಲಾಗಿ ಟೆಂಟಾಶಿಯನ್‌ನನ್ನು ಬಂಧಿಸಿ ಜೈಲಿಗೆ ಹಾಕಲಾಯ್ತು. ಆತನಿನ್ನು ಅಪ್ರಾಪ್ತನಾಗಿದ್ದ ಕಾರಣ ಟೀನೇಜ್ ಡಿಟೆನ್ಷನ್ ಕೇಂದ್ರಕ್ಕೆ ಸೇರಿಸಲಾಯ್ತು. ಅಂದರೆ ಬಾಲಾಪರಾಧಿಗಳ ಬಂಧೀಖಾನೆ; ಹದಿನೆಂಟು ವರ್ಷಕ್ಕು ಕೆಳಪಟ್ಟ ಯಾರೆ ಆದರು ಕ್ರೈಮ್ ಮಾಡಿದರೆ ಅವರನ್ನ ಕೂಡಿ ಹಾಕುವ ಜಾಗ. ಇಲ್ಲಿ ಟೆಂಟಾಶಿಯನ್ ಒಂದು ವರ್ಷದ ವರೆಗು ಇರಬೇಕಾಯ್ತು. ಇಲ್ಲಿಂದ ಹೊರ ಬಂದಾಗ ಅವನು ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದ. ಈ ಖಿನ್ನತೆಯಿಂದಾಗಿ ಡ್ರಗ್ಸ್ ಸೇವನೆ ದುಷ್ಚಟಕ್ಕೆ ಬಲಿಯಾಗಿದ್ದ. ಸುಲಭವಾಗಿ ಸಿಗುತ್ತಿದ್ದ ಸ್ಯಾನಕ್ಸ್ (Xanax) ಎಂಬ ಡ್ರಗ್‌ ಅಡಿಕ್ಟ್‌ ಆದ. ಈ ಮಾತ್ರೆಯನ್ನ ವೈದ್ಯರ ಸಲಹೆಯ ಮೇರೆಗೆ ಮಾತ್ರವೆ ಸೇವಿಸಬೇಕು‌‌. ಆದರೆ ಟೆಂಟಾಶಿಯನ್ ಕದ್ದು ಮುಚ್ಚಿ ಈ ಮಾತ್ರೆಗಳನ್ನ ಸೇವಿಸಲಾರಂಭಿಸಿದ್ದ. ಈ ಅಪರಾಧಕ್ಕಾಗಿ ಮತ್ತೆ ಆತನನ್ನ ಸೆರೆ ಹಿಡಿದು ಎರಡು ತಿಂಗಳ ಕಾಲ ಜೈಲಿಗೆ ಹಾಕಲಾಯ್ತು.

ಈ ಅವಧಿಯಲ್ಲಿ ಅವನ ಮನಸ್ಸು ಸಂಗೀತದ ಕಡೆಗೆ ಸೆಳೆಯತೊಡಗಿತ್ತು. ಜೈಲಿಂದ ಹೊರಬಂದ ನಂತರವಂತೂ ಸಂಗೀತವೆ ಅವನ ದಿನಚರಿಯಾಗಿ ಬದಲಾಯಿತು. ಕ್ರಮೇಣ ತನಗೆ ತೋಚಿದಂತೆ ಹಾಡುಗಳನ್ನ ರಚಿಸಿ ಹಾಡುತ್ತಾ ಕಾಲ ಕಳೆಯಲಾರಂಭಿಸಿದ. 2014ರ ಮಾರ್ಚ್ ನಲ್ಲಿ ಟೆಂಟಾಶಿಯನ್ ಬರೆದು ಹಾಡಿದ ಮೊದಲ ಹಾಡನ್ನ ಸೌಂಡ್ ಕ್ಲೌಡ್ (Sound Cloud) ಎಂಬ ವೆಬ್ ಸೈಟಿನಲ್ಲಿ ಅಪ್ಲೋಡ್ ಮಾಡಲಾಯ್ತು; ಅದರ ಹೆಸರು ‘ವೈಸ್ ಸಿಟಿ’ (Vice City). ಅಮೇರಿಕಾದಾದ್ಯಂತ ಸದ್ದು ಮಾಡಿದ ಈ ಹಾಡು ಯುವಕರ ಫೇವರಿಟ್ ಲಿಸ್ಟ್ ಸೇರಿತು. ಈ ಹಾಡಿನಿಂದಲೆ ಟೆಂಟಾಶಿಯನ್‌ನ‌ ಹೆಸರು ಅಮೇರಿಕದ ತುಂಬಾ ಪ್ರಚಾರ ಪಡೆದಿತ್ತು. ಈ ಹಾಡು ಪಾಪ್ಯುಲರ್ ಆದಂತೆಲ್ಲ ಅದನ್ನೆ ಮುಂದುವರಿಸಿದ ಟೆಂಟಾಶಿಯನ್ ಕೆಲ ದಿನಗಳ ಬಳಿಕ ಒಬ್ಬ ಯುವತಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿದ. ಆಕೆಯ ಹೆಸರು ಜೆನೀವಾ ಅಯಾಲಾ. ಇಬ್ಬರ ಪರಿಚಯ ಗಾಢ ಪ್ರೀತಿಗೆ ತಿರುಗಿತ್ತು. ಪರಸ್ಪರ ಒಬ್ಬರನ್ನೊಬ್ಬರು ಇಷ್ಟ ಪಟ್ಟು ಪ್ರೀತಿ ಸಾಫಲ್ಯಗೊಂಡಿತ್ತು. ಹೀಗಿದ್ದಾಗ ಒಮ್ಮೆ ಕಾರಿನಲ್ಲಿ ಇಬ್ಬರೂ ಪ್ರಯಾಣಿಸುವಾಗ ಜೆನೀವಾ ಬೇರೆ ಗಾಯಕ ಹಾಡಿದ ಹಾಡನ್ನ ಕೇಳುತ್ತಿದ್ದಳೆಂಬ ಒಂದೆ ಕ್ಷುಲ್ಲಕ ಕಾರಣಕ್ಕಾಗಿ ರಕ್ತ ಕಾರುವ ಹಾಗೆ ಟೆಂಟಾಶಿಯನ್ ಆಕೆಯನ್ನ ಚಚ್ಚಿಬಿಟ್ಟ.

ಅವನಿಗೆ ಆತನೊಡನೆ ಇದ್ದವರು ಬೇರೆ ಗಾಯಕರ ಹಾಡುಗಳನ್ನ ಕೇಳಿದರೆ ವಿಪರೀತ ಸಿಟ್ಟು ಬರುತ್ತಿತ್ತು. ಈ ಘಟನೆ ನಡೆದ ಬಳಿಕ ಕೆಲವೇ ದಿನಗಳಲ್ಲಿ ಇಬ್ಬರೂ ದೂರವಾದರು‌. ಪ್ರೀತಿಯಲ್ಲಿ ಇಂತ ಗೊಡವೆಗಳು ಸಾಮಾನ್ಯ ಎನ್ನುವ ಮಾತಿನಂತೆ ಅವರು ಮತ್ತೆ ಕೆಲ ದಿನಗಳ ಬಳಿಕ ವಿಚಿತ್ರವೆನ್ನುವಂತೆ ಒಂದಾದರೂ ಕೂಡಾ. ಆದರೆ ಅವರ ಸಂಬಂಧದ ನಡುವೆ ಅನೇಕ ಭಿನ್ನ‌ಮತಗಳು, ಮನಸ್ತಾಪಗಳಿದ್ದೆ ಇದ್ದವು. ಟೆಂಟಾಶಿಯನ್ ತನ್ನ ಅಗ್ರೆಸಿವ್ ಗುಣದಿಂದಾಗಿ ಜೆನಿವಾಳ ನೆಮ್ಮದಿ‌ ಕೆಡಿಸುತ್ತಿದ್ದ. ಇದೇ ಕಾರಣಕ್ಕೆ ಆಕೆ ಅವನ ಮೇಲೆ ಡೊಮೆಸ್ಟಿಕ್ ಅಬ್ಯುಸ್ ಕೇಸ್ ಹಾಕಿದಳು‌. ಟೆಂಟಾಶಿಯನ್ ನಿಂದಾಗಿ ತಾನು ಗರ್ಭಿಣಿ ಆಗಿರುವುದಾಗಿಯು, ಅವನು ಬಹಳ ಸಲ ಕೊಲ್ಲುವ ಬೆದರಿಕೆ ಹಾಕಿದ್ದಾನೆಂದೂ, ಈವರೆಗು ಕಾನೂಬದ್ಧವಾಗಿ ಮದುವೆಯಾಗಿಲ್ಲವೆಂದೂ, ಮದುವೆಗೆ ಟೆಂಟಾಶಿಯನ್ ಒಪ್ಪುತ್ತಿಲ್ಲವೆಂದೂ ಜೆನೀವಾ ದೂರು ನೀಡಿದಳು. ಈ ಆರೋಪಗಳ ಅಡಿ ಅವನನ್ನ ಬಂಧಿಸಿ ವಿಚಾರಿಸಿದಾಗ ತನಗೆ ಇದರ ಬಗ್ಗೆ ಏನೂ ಸಹ ತಿಳಿಯದೆಂದೆ ಅವನು ವಾದಿಸಿದ. ಪೊಲೀಸರು ಟೆಂಟಾಶಿಯನ್‌ಗೆ ಇದಕ್ಕಾಗಿ ಮತ್ತೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದರು. ಶಿಕ್ಷೆ ಮುಗಿಸಿ ಹೊರಬಂದ ಟೆಂಟಾಶಿಯನ್ ಈಗ ಮತ್ತಷ್ಟು ಕೋಪಾವಿಷ್ಟನಾದ. ಅವನ ಹಾಗೂ ಜೆನೀವಾ ನಡುವಿನ ಸಂಬಂಧ ಆಗಾಗ ಗಲಭೆ ಏರ್ಪಡುತ್ತ ಹಾಗೆಯೆ ಇತ್ತು. ಟೆಂಟಾಶಿಯನ್ ಮತ್ತೆ ಹಾಡುಗಳ ರಚನೆಯಲ್ಲಿ ತೊಡಗಿಕೊಂಡ. ತನ್ನ ಪ್ರೇಯಸಿ ಜೇನೀವಾಳ ಮೇಲಿನ ಕೋಪದಲ್ಲಿ ಒಂದು ಹಾಡನ್ನು ಕೂಡಾ ರಿಲೀಸ್ ಮಾಡಿದ. ಅದರ ಹೆಸರು ಲುಕ್ ಅಟ್ ಮಿ. ಅದು ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಯಿತು. ಆ ಹಾಡಿಗೆ ತಲೆದೂಗದವರೆ ಇಲ್ಲ ಎನ್ನಿಸುವಷ್ಟು ಅದು ಖ್ಯಾತಿ ಪಡೆಯಿತು. 2015-16ರ ನಡುವೆ ಸ್ಯಾಡ್, ಮೂನ್ ಲೈಟ್ ಮುಂತಾದ ಹಾಡುಗಳಿಂದ ಟೆಂಟಾಶಿಯನ್ ಅಮೇರಿಕನ್ ರ್ಯಾಪ್ ಲೋಕದ ಸಂಚಲನಾತ್ಮಕ ಸಿಂಗರ್ ಆಗಿ ಬದಲಾಗಿದ್ದ.

ನಂತರದ ದಿನಗಳಲ್ಲಿ ಅವನು ಅಮೇರಿಕದ ಅತಿ ದೊಡ್ಡ ಸೆಲೆಬ್ರಿಟಿಯೆ ಆಗಿ ಹೋದ. ತನ್ನ ಟ್ಯಾಲೆಂಟನ್ನೆಲ್ಲ ಬಸಿದು ಹಾಡಿದ, ಪಬ್ಲಿಕ್‌ನಲ್ಲಿ ಆತ್ ಕಾಣಿಸಿಕೊಂಡರೆ ಸಾಕು ಜನ ಮುಗಿಬಿದ್ದು ಮುತ್ತುತ್ತಿದ್ದರು. ಬಹು ಬೇಗನೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಹ ಆತನನ್ನು ಅರಸಿ ಬಂದವು. ಬೆಸ್ಟ್ ಹಿಪ್ ಹಾಪ್ ಆರ್ಟಿಸ್ಟ್ ಆಫ್ ದಿ ಇಯರ್, ಹಾಗು ಆತನ 17 ಎಂಬ ಆಲ್ಬಮ್‌ಗೆ ಆ ವರ್ಷದ ಬೆಸ್ಟ್ ಆಲ್ಬಮ್ ಎಂಬ ಬಿರುದು ದಕ್ಕಿತು. ಅವನು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದ್ದ ಸಮಯವದು. ಇಲ್ಲಿಯವರೆಗೆ ಎಲ್ಲವು ಸುಗಮವಾಗಿತ್ತು. ಆದರೆ 2018ರ ಜೂನ್‌ನಲ್ಲಿ ಅಚಾನಕ್ ಆಗಿ ಇಂತಹ ಯುವ ಪ್ರತಿಭಾವಂತನ ಬದುಕು ಅಂತ್ಯಗೊಂಡಿತು. ಟೆಂಟಾಶಿಯನ್ ಆಗಂತುಕರ ಗುಂಡಿನ ದಾಳಿಗೆ ಒಳಗಾಗಬೇಕಾಯ್ತು.

ಅವನ ಈ ಅಸಹಜ ಸಾವು ಅಮೇರಿಕಾದಾದ್ಯಂತ ಸೆನ್ಸೇಷನ್ ಉಂಟು ಮಾಡಿತು. ಅವನ ಸಾವು ಹೇಗೆ ಸಂಭವಿಸಿತು? ಅದಕ್ಕೆ ಕಾರಣರಾದವರು ಯಾರು? ಎಂದು ನಾವು ಹಂತ ಹಂತವಾಗಿ ನೋಡುವುದಾದರೇ, ಅದು 2018ರ ಜೂನ್ 18ನೆ ತಾರೀಖಿನ ಮಧ್ಯಾಹ್ನ, ಟೆಂಟಾಷಿಯನ್ ಆ ಹೊತ್ತಿಗಾಗಲೆ ಪ್ರಖ್ಯಾತ ಸೆಲೆಬ್ರಿಟಿ ಆಗಿಬಿಟ್ಟಿದ್ದ. ಅಂದು ಅವನು ಫ್ಲೋರಿಡಾದ ಬೀಚ್ ಫೀಲ್ಡ್ ಬಳಿಯ ತನ್ನ‌ ಖಾತೆಯಿದ್ದ ಖಾಸಗಿ ಬ್ಯಾಂಕ್ ಹೋಗಿ ಒಂದಷ್ಟು ಹಣವನ್ನ ವಿತ್ ಡ್ರಾ ಮಾಡಿ ಹೊರ ಬಂದ. ಹಣ ಡ್ರಾ ಮಾಡಿದ ತಕ್ಷಣ ತನ್ನ ಕಾರಲ್ಲಿ ಹತ್ತಿರದ ಟೂ ವೀಲರ್ ಶೋರೂಮ್‌ ಪ್ರವೇಶಿಸಿದ ಟೆಂಟಾಶಿಯನ್ ಅಲ್ಲಿ ಸುಮಾರು ಅರ್ಧ ಗಂಟೆಯ ಸಮಯ ಕಳೆದ; ಅವನು ಹೊಸ ಬೈಕ್ ಖರೀದಿಸುವ ಹವಣಿಕೆಯಲ್ಲಿದ್ದ. ಶೋರೂಮ್‌ನಿಂದ ಹೊರ ಬಂದ ಟೆಂಟಾಶಿಯನ್ ಇನ್ನೇನು ತನ್ನ ಕಾರನ್ನೇರಿ ಹೊರಡಬೇಕೆನ್ನುವಷ್ಟರಲ್ಲಿ ಅವನನ್ನೇ ಹಿಂಬಾಲಿಸಿ ಬಂದ ಇನ್ನೊಂದು ಕಡುಕಪ್ಪು ವರ್ಣದ ಕಾರ್ ಅವನಿಗೆದುರಾಗಿ ನಿಂತಿತು. ಅದರಿಂದ ಕೆಳಗಿಳಿದ ಇಬ್ಬರು ಅಪರಿಚಿತರು ಗನ್ ಹಿಡಿದು ಟೆಂಟಾಷಿಯನ್ ಇದ್ದ ಕಾರಿನ ಕಡೆಗೆ ಗುರಿ ಮಾಡಿ ನುಗ್ಗಿ ಬಂದರು. ಕೂಡಲೆ ಟೆಂಟಾಷಿಯನ್ ಕಾರ್ ಡ್ರೈವರ್ ಅಲ್ಲಿಂದ ಪರಾರಿಯಾದ. ಆಗಂತುಕರು ಕಾರಲ್ಲಿದ್ದ ಟೆಂಟಾಷಿಯನ್‌ಗೆ ಬೆದರಿಕೆ ಹಾಕಿ ಅವನ ಬಳಿಯಿದ್ದ ಹಣ ಕೊಡುವಂತೆ ಆಗ್ರಹಿಸಿದರು. ಆದರೆ ಟೆಂಟಾಷಿಯನ್ ಹಣ ಕೊಡಲು ಪ್ರತಿರೋಧಿಸಿದ; ಅವನೆಡೆಗೆ ಗುರಿಯಿಟ್ಟಿದ್ದ ಗನ್‌ಗಳು ಅನಾಮತ್ತು ಆರೇಳು ಬುಲೆಟ್‌ಗಳನ್ನು ಉಗುಳಿದವು.

ಹಣೆ ಹಾಗು ಎದೆಗೆ ತಗುಲಿದವು ಗುಂಡೇಟಿನಿಂದ ಟೆಂಟಾಷಿಯನ್ ಕುಸಿದು ಕೂತರೆ, ಆತನ ಬಳಿ ಇದ್ದ ಹಣದ ಚೀಲವನ್ನ ಖದೀಮರು ಅಪಹರಿಸಿ ಪರಾರಿಯಾದರು. ಘಟನೆಯನ್ನು ಗಮನಿಸಿದ ದಾರಿಹೋಕರು ಟೆಂಟಾಷಿಯನ್ ಕಾರ್ ಬಳಿಗೆ ಹೋಗಿ ರಕ್ತದ ಮಡುವಲ್ಲಿ ಬಿದ್ದಿದ್ದ ಆತನನ್ನ ತಕ್ಷಣ ಹತ್ತಿರದ ಬ್ರೊವಾರ್ಡ್ ಆಸ್ಪತ್ರೆಗೆ ಸಾಗಿಸಿದರು. ಆದರೆ ಆ ಹೊತ್ತಿಗಾಗಲೆ ಟೆಂಟಾಷಿಯನ್ ಪ್ರಾಣ ಬಿಟ್ಟಿದ್ದ. ಆ ದಿನ ನಡೆದ ಈ ಘೋರ ಪ್ರಕರಣ ಅಲ್ಲಿನ ಸಿಸಿಟಿವಿಯಲ್ಲು ರೆಕಾರ್ಡ್ ಆಗಿತ್ತು. ಈ ಹತ್ಯೆಗೆ ಸಂಬಂಧಿಸಿದಂತೆ ಡೆಡ್ರಿಕ್ ವಿಲಿಯಮ್ಸ್, ಟ್ರಾವಿಯೊನ್ ನ್ಯೂಸಮ್, ರಾಬರ್ಟ್ ಅಲ್ಲೆನ್ ಹಾಗು ಮೈಖೆಲ್ ಬೋಟ್ ರೈಟ್ ಎಂಬ ನಾಲ್ವರನ್ನ ಅರೆಸ್ಟ್ ಮಾಡಲಾಯ್ತು. ನಿಮಗೆಲ್ಲ ಈಗೊಂದು ಅನುಮಾನ ಮೂಡಬಹುದು. ಇವರೆಲ್ಲ ಯಾರು? ಯುವ ಸೆಲೆಬ್ರಿಟಿಯ ಮೇಲೆ ಇವರಿಗೆಲ್ಲ ಏನಾದರೂ ಧ್ವೇಷವಿತ್ತೆ? ಈ ಹತ್ಯೆಯು ಪೂರ್ವ ನಿಯೋಜಿತವೆ? ಆದರೆ ವಾಸ್ತವದಲ್ಲಿ ಹೇಳುವುದಾದರೆ ಇದು ಪೂರ್ವ ನಿಯೋಜಿತ ಹತ್ಯೆ ಆಗಿರಲಿಲ್ಲ. ಹಂತಕರಿಗೆ ಟೆಂಟಾಷಿಯನ್‌ ಮೇಲೆ ಯಾವ ತಕರಾರು-ದ್ವೇಷ ಇರಲಿಲ್ಲ. ಇದೊಂದು ಸಾಮಾನ್ಯ ರಾಬರಿ ಪ್ರಕರಣ. ಕೊಲೆಗಡುಕರಿಗೆ ಬೇಕಿದ್ದದ್ದು ಅವನ ಬಳಿ ಇದ್ದ ಹಣ ಮಾತ್ರ. ಅವನು ಆ ದಿನ ಬ್ಯಾಂಕ್‌ನಿಂದ ದೊಡ್ಡ ಅಮೌಂಟ ಅನ್ನ ಡ್ರಾ ಮಾಡಿದ್ದ, ಅದು ಈ ಖದೀಮರ ಗಮನಕ್ಕೆ ಬಂದಿತ್ತು. ಅವನನ್ನೆ ಹಿಂಬಾಲಿಸಿದ್ದ ಖದೀಮರಲ್ಲಿ ಇಬ್ಬರು ಅವನ ಜತೆಯೇ ಶೋರೂಮ್ ಒಳಗೂ ಬಂದಿದ್ದರು. ಈ ದೃಶ್ಯಗಳೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದವು. ಇಬ್ಬರೂ ಹಂತಕರು ಅಲ್ಲಿ ಎಂಟ್ರಿಯಾಗಿ ಮುಖದ ಮಾಸ್ಕನ್ನ ಖರೀದಿಸಿದ್ದೂ ಸಿಸಿಟಿವಿಯ ದೃಶ್ಯಾವಳಿಯಲ್ಲಿತ್ತು.

ಬಳಿಕ ಹೊರ ಬಂದ ಟೆಂಟಾಷಿಯನ್ ಕಾರನ್ನ ತಮ್ಮ ಕಾರಲ್ಲಿ ಅಡ್ಡಗಟ್ಟಿದ ಅವರು ಗನ್ ತೋರಿಸಿ ಹೆದರಿಸುವ ಗದ್ದಲದಲ್ಲಿ ಅವರ ಗನ್‌ಗಳ ಟ್ರಿಗರ್ ಬೈ ಛಾನ್ಸ್ ಆಗಿ ಫೈರ್ ಆಗಿಬಿಟ್ಟಿದ್ದವು. ವಾಸ್ತವದಲ್ಲಿ ಉದ್ದೇಶ ಅವನನ್ನ ಕೊಲ್ಲುವುದಾಗಿರಲೆ ಇಲ್ಲ; ಇದು ಕೇವಲ ಆ್ಯಕ್ಸಿಡೆಂಟ್ ಮಾತ್ರ. ಇದೇ ಮಾತನ್ನು ಅಪರಾಧಿಗಳು ಕೋರ್ಟ್‌ನಲ್ಲೂ ಹೇಳಿದ್ದರು. ಈ ಘರ್ಷಣೆಯಲ್ಲಿ ಬಲಿಯಾದದ್ದು ಮಾತ್ರ ಇಡೀ ದೇಶವೆ ಮೆಚ್ಚಿದ್ದ ಉದಯೋನ್ಮುಖ ರ್ಯಾಪರ್. ಟೆಂಟಾಷಿಯನ್ ಬದುಕೆ, ಹವ್ಯಾಸ ಮತ್ತು ಖಯಾಲಿ ಎಲ್ಲವೂ ವಿಚಿತ್ರ. ಹಾಗೆಯೇ ಅವನು ವಿಧಿಯ ಪಾಲಿಗೂ ನಿಷ್ಠುರದ ಆಯ್ಕೆಯಾಗಿಬಿಟ್ಟ. ಚಿಕ್ಕಂದಿನಲ್ಲೆ ತಾಯ್ತಂದೆಯರ ಆರೈಕೆಗಳಿಂದ ವಂಚಿತನಾದ ಆತ ಗಲಾಟೆ ಗದ್ದಲಗಳಲ್ಲೆ ಜೀವನ ಕಳೆದವನು. ಅಜ್ಜಿಯ ಆರೈಕೆಯಲ್ಲಿ ಬೆಳೆದ ಅವನಿಗೆ ಮುಂದೆ ಪ್ರೇಯಸಿಯ ಸಾಂಗತ್ಯದ ಸುಖವು ಸಹ ಪೂರ್ತಿಯಾಗಿ ಸಿಗಲಿಲ್ಲ. ಆದರೂ ಸಂಗೀತದಲ್ಲಿದ್ದ ತನ್ನ ಒಲವಿನಿಂದಾಗಿ ಆತ ಯಶಸ್ಸಿನ ಒಂದೊಂದೆ ಮೆಟ್ಟಿಲೇರಿದ್ದ. ಆದರೆ ವಿಧಿಯ ಲೆಕ್ಕಾಚಾರ ಬೇರೆಯೆ ಇತ್ತು. ಆಗಂತುಕ ಹಂತಕರ ಎಡವಟ್ಟಿನಿಂದಾಗಿ ಜಗತ್ತು ಒಬ್ಬ ಪ್ರತಿಭಾವಂತ ಯುವ ಹಾಡುಗಾರನನ್ನ ಬಹು ಬೇಗ ಕಳೆದುಕೊಂಡಿತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd