ಮತಾಂತರ ನಿಷೇಧ ವಿಧೇಯಕ ಮಂಡನೆ | ಲಖನ್ ಜಾರಕಿಹೊಳಿ ಬೆಂಬಲ ಪಡೆಯುವ ಸಾದ್ಯತೆ Saaksha Tv
ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದ್ದು, ಬಿಜೆಪಿಯವರು ಪಕ್ಷೇತರ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲ ಪಡೆಯುವ ಸಾದ್ಯತೆಗಳವೆ,
ಸದ್ಯ 75 ಸದಸ್ಯ ಬಲದ ಪರಿಷತ್ ನಲ್ಲಿ 37 ಬಿಜೆಪಿ, 26 ಕಾಂಗ್ರೇಸ್ ಹಾಗೂ ಜೆಡಿಎಸ್ 10 ಸಂಖ್ಯಾ ಬಲ ಹೊಂದಿದೆ. ಸರಳ ಬಹುಮತಕ್ಕೆ ಬಿಜೆಪಿಗೆ ಒಂದು ಸ್ಥಾನದ ಕೊರತೆ ಇರುವುದರಿಂದ ಮೇಲ್ಮನೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರಕ್ಕಾಗಿ ಲಕನ್ ಜಾರಕಿಹೊಳಿಯ ಬೆಂಬಲ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಸಂಬಂಧ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ಹಾಗೂ ಸಭಾ ನಾಯಕ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮುಖದಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ವಿಧಾನಪರಿಷತ್ ಸದಸ್ಯರ ಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕದ ಬಗ್ಗೆ ಚರ್ಚಿಸಲಾಯಿತು. ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ವಿಧೇಯಕವನ್ನು ಮೇಲ್ಮನೆಯಲ್ಲಿ ಪಾಸ್ ಮಾಡುವ ಕಾರ್ಯನೀತಿ ಬಗ್ಗೆ ಈ ಸಂದರ್ಭದಲ್ಲಿ ಮಾತುಕತೆ ನಡೆಯಿತು.
ಈ ನಿಟ್ಟಿನಲ್ಲಿ ಲಖನ್ ಜಾರಕಿಹೊಳಿಯನ್ನು ವಿಧೇಯಕ ಪರ ಮತ ಹಾಕಲು ಮನವೊಲಿಸಲು ನಿರ್ಧರಿಸಲಾಗಿದೆ. ಈ ಮಧ್ಯೆ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಜತೆಗೂಡಿ ಸಂಜೆ ಶಕ್ತಿ ಭವನದಲ್ಲಿ ಸಿಎಂ ಬೊಮ್ಮಾಯಿರನ್ನು ಭೇಟಿಯಾಗಿದ್ದು, ಕುತೂಹಲ ಕೆರಳಿಸಿದೆ.
ಮೇಲ್ಮನೆ ಬಿಜೆಪಿ ಸದಸ್ಯರ ಸಭೆಯಲ್ಲಿ ಪರಿಷತ್ ಉಪಸಭಾಪತಿ ಹಾಗೂ ಮುಖ್ಯ ಸಚೇತಕ ಆಯ್ಕೆ ಸಂಬಂಧವೂ ಚರ್ಚೆ ನಡೆಸಲಾಯಿತು. ಆದರೆ, ಕೊನೆಗೆ ಆಯ್ಕೆ ಹೊಣೆಯನ್ನು ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ಗೆ ನೀಡಲಾಗಿದೆ.