ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾಗೆ ಕೊರೊನಾ ದೃಢ
ಗಾಂಧಿನಗರ, ಜೂನ್ 29: ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
79 ವರ್ಷದ ಶಂಕರ್ ಸಿಂಗ್ ವಘೇಲಾ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಇದೀಗ ಅವರ ಗಂಟಲು ದ್ರವ ಪರೀಕ್ಷಾ ವರದಿ ಹೊರಬಂದಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬಿಜೆಪಿ ಪಕ್ಷದಿಂದ ರಾಜಕೀಯ ಪ್ರಾರಂಭಿಸಿದ ಶಂಕರ್ ಸಿಂಗ್ ವಘೇಲಾ ಅವರು ನಂತರ ರಾಷ್ಟ್ರೀಯ ಜನತಾ ಪಕ್ಷ, ಕಾಂಗ್ರೆಸ್ ಸೇರಿದ್ದು, ಪ್ರಸ್ತುತ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. 1996ರ ಅಕ್ಟೋಬರ್ ನಿಂದ 1997ರ ಅಕ್ಟೋಬರ್ ಅವಧಿಯಲ್ಲಿ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಶಂಕರ್ ಸಿಂಗ್ ವಘೇಲಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ ಮತ್ತು ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.








