ಭಾರತದಲ್ಲಿ ರೌದ್ರಾವತರಾ ತೋರಿರುವ ಕೊರೊನಾ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 850ಕ್ಕೂ ಅಧಿಕ ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಒಂದೇ ದಿನದಲ್ಲಿ 52ಸಾವಿರಕ್ಕೂ ಹೆಚ್ಚು ಹೊಸ ಪಾಸಿಟಿವ್ ಕೇಸ್ ಗಳು ಬೆಳಕಿಗೆ ಬಂದಿದ್ದು, ದೇಶದಾದ್ಯಂತ ಆತಂಕ ಹೆಚ್ಚಿಸಿದೆ. ಚೇತರಿಕೆ ಪ್ರಮಾಣದಲ್ಲಿ 67.19ರಷ್ಟು ಏರಿಕೆ ಕಂಡುಬಂದಿದ್ದು, ಅಂದಾಜು 20 ಲಕ್ಷ ಸೋಂಕಿತರ ಪೈಕಿ 12.82 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೂ ಒಟ್ಟು ಸಾವಿನ ಸಂಖ್ಯೆ 40,000ರದ ಗಡಿ ತಲುಪಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು ದೇಶದಲ್ಲಿ 52,509 ಜನರಿಗೆ ರೋಗ ತಗುಲಿದೆ.
857 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 39,795ಕ್ಕೇರಿದೆ. ಈವರೆಗೆ ಭಾರತದಲ್ಲಿ ರೋಗಪೀಡಿತರ ಪ್ರಮಾಣ 19,08,254 ದಾಟಿದೆ. ದೇಶದಲ್ಲಿ ಇನ್ನೂ 5,86,244 ಸಕ್ರಿಯ ಕೇಸ್‍ಗಳಿರುವುದು ಕಳವಳಕಾರಿ ಸಂಗತಿಯಾಗಿದೆ. ದೇಶದಲ್ಲಿ ನಿನ್ನೆವರೆಗೆ 2,14,84,402 ಜನರ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಐಸಿಎಂಆರ್ ವರದಿ ಅನ್ವಯ ನಿನ್ನೆ ಒಂದೇ ದಿನ ದೇಶದಲ್ಲಿ ಒಟ್ಟು 6,19,652 ಮಂದಿಯ ಮಾದರಿಗಳನ್ನು ಪರೀಕ್ಷಿಸಲಾಗಿದೆ.








