ಕೊರೊನಾ ವೈರಸ್ ಸೋಂಕಿನಿಂದ ಇಡೀ ವಿಶ್ವವೇ ಸ್ತಬ್ಧವಾಗಿದೆ. ಇದಕ್ಕೆ ಸಿನಿಮಾರಂಗವೂ ಹೊರತಾಗಿಲ್ಲ. ಚಿತ್ರೀಕರಣ ನಡೆಯದೆ ಮನರಂಜನಾ ಉದ್ಯಮದಲ್ಲಿ ನೀರವತೆ ಮೂಡಿದೆ. ಬಿಡುಗಡೆಗೆ ಸಿದ್ಧವಾಗಿದ್ದ ಅನೇಕ ಸಿನಿಮಾಗಳು ಸಂಕಷ್ಟದ ಸಮಯ ದೂರವಾಗುತ್ತಿದ್ದಂತೆಯೇ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಕಾದಿವೆ. ಅರ್ಧಕ್ಕೆ ಚಿತ್ರೀಕರಣ ನಿಂತ ಸಿನಿಮಾಗಳು ಮತ್ತೆ ಶುರುವಾಗಲು ಹಾಗೂ ಹೊಸ ಸಿನಿಮಾಗಳು ಸೆಟ್ಟೇರಲು ಇನ್ನೂ ಹಲವು ತಿಂಗಳುಗಳು ಬೇಕಾಗಬಹುದು. ಇದರ ಮಧ್ಯೆ ಕೊರೊನಾ ವೈರಸ್ ಸೋಂಕು ಚಿತ್ರರಂಗದ ದೆಸೆಯನ್ನೇ ಬದಲಿಸುವ ಸಾಧ್ಯತೆಯಿದೆ.
ಕೊರೊನಾ ವೈರಸ್ ಕಾರಣದಿಂದ ಜನರು ಇತರರ ಜತೆ ಸೇರಲು ಭಯಪಡುವ ಸ್ಥಿತಿ ಉಂಟಾಗಿದೆ. ಎಲ್ಲರೂ ಗುಣಮುಖರಾಗಿ ಸೋಂಕಿನ ಭೀತಿ ದೂರವಾದ ಬಳಿಕವೂ ಈ ಆತಂಕ ಮುಂದುವರಿಯಲಿದೆ. ಇದರಿಂದ ಹೆಚ್ಚು ಹಸಿಬಿಸಿ ದೃಶ್ಯಗಳನ್ನು ಮುಲಾಜಿಲ್ಲದೆ ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಿದ್ದ ನಿರ್ದೇಶಕರಿಗೆ ತಲೆಬಿಸಿ ಹೆಚ್ಚಾಗಿದೆ
ಸೆಕ್ಸ್ ದೃಶ್ಯಗಳಿಗೆ ಕತ್ತರಿ?
ಕೊರೊನಾ ವೈರಸ್ ಕಾಟ ದೂರವಾದ ಬಳಿಕ ಸಿನಿಮಾಗಳಲ್ಲಿ ಸೆಕ್ಸ್ ಸಂಬಂಧಿತ ದೃಶ್ಯಗಳು ಇರುವುದಿಲ್ಲವೇ…? ಹೀಗೊಂದು ಪ್ರಶ್ನೆ ಬಣ್ಣದ ಜಗತ್ತು ಸೇರಿದಂತೆ ಸಿನಿ ರಸಿಕರಲ್ಲಿ ಗಿರಕಿ ಹೊಡೆಯುತ್ತಿದೆ. ಇದು ಕೇವಲ ಬಾಲಿವುಡ್ ಮಾತ್ರವಲ್ಲ, ಹಾಲಿವುಡ್ ನಲ್ಲಿಯೂ ಈ ರೀತಿಯ ಚರ್ಚೆ ನಡೆಯುತ್ತಿದೆ. ಹಾಲಿವುಡ್ ಕಲಾವಿದರ ಹಿಂಜರಿಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಮುಗಿದ ಬಳಿಕವೂ ಹಾಲಿವುಡ್ನಲ್ಲಿ ಅನೇಕ ನಟ, ನಟಿಯರು ಇಂಟಿಮೇಟ್ ದೃಶ್ಯಗಳು ಅಥವಾ ಚುಂಬನದ ಸನ್ನಿವೇಶಗಳಲ್ಲಿ ನಟಿಸುವುದರ ಬಗ್ಗೆ ಈಗಲೇ ಹಿಂಜರಿಕೆ ವ್ಯಕ್ತಪಡಿಸುತ್ತಿದ್ದಾರಂತೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಿನಿಮಾಗಳ ಭವಿಷ್ಯದ ಬಗ್ಗೆ ತಮಾಷೆಯ ಮಾತುಗಳು ಕೇಳಿಬರುತ್ತಿವೆ. ಚಿತ್ರರಂಗ ಇನ್ನು ನೂರು ವರ್ಷ ಹಿಂದಕ್ಕೆ ಹೋಗಲಿದೆ. ಪ್ರೀತಿ ಪ್ರೇಮ ಪ್ರಣಯದ ಸನ್ನಿವೇಶಗಳು ತೆರೆಯ ಮೇಲೆ ಕಾಣಿಸಲಾರದು. ಅದರ ಬದಲು ಬಾಗಿಲು ಮುಚ್ಚುವ, ಜೋಡಿ ಹಕ್ಕಿಗಳನ್ನು ತೋರಿಸುವಂತಹ ದೃಶ್ಯಗಳ ಮೂಲಕವೇ ಮುಂದಿನದು ಲೈಂಗಿಕತೆಗೆ ಸಂಬಂಧಿಸಿದ ದೃಶ್ಯ ಎಂದು ಪ್ರೇಕ್ಷಕರು ಊಹಿಸುವಂತೆ ಮಾಡುವುದು ಅನಿವಾರ್ಯವಾಗಬಹುದು ಎನ್ನುತ್ತಿದ್ದಾರೆ.