ಜಗತ್ತಿನಾದ್ಯಂತ ಭೀತಿ ಉಂಟು ಮಾಡಿರುವ ಕೊರೊನಾ ವೈರಸ್ ಎಂಬ ಹೆಮ್ಮಾರಿ ಕೊನೆಗೂ ದಕ್ಷಿಣ ಕನ್ನಡ ಪ್ರವೇಶಿಸಿದೆ. ದುಬೈನಿಂದ ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕಾಸರಗೋಡಿನ ವ್ಯಕ್ತಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇದೀಗ ಅವರ ಜೊತೆ ಪ್ರಯಾಣಿಸಿದ್ದ ಸಹ ಪ್ರಯಾಣಿಕರು ಆತಂಕಗೊಂಡಿದ್ದಾರೆ.
ಮಾರ್ಚ್ 14ರಂದು ದುಬೈನಿಂದ ಏರ್ ಇಂಡಿಯಾ ಐಎಕ್ಸ್ 814 ವಿಮಾನದಲ್ಲಿ ಕಾಸರಗೋಡಿನ ಬದಿಯಡ್ಕದ ನೀರ್ಚಾಲು ನಿವಾಸಿ ಬೆಳಗ್ಗೆ 5:20ಕ್ಕೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಸ್ಕ್ರೀನಿಂಗ್ ಸಂದರ್ಭದಲ್ಲಿ ಕೊರೊನಾ ಶಂಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅವರ ಗಂಟಲಿನ ದ್ರವದ ಪರೀಕ್ಷಾ ವರದಿ ಬಂದಿದ್ದು, ಅವರಿಗೆ ಕೊರೊನಾ ವೈರಸ್ ಸೋಂಕು ಇರುವುದು ಖಚಿತಗೊಂಡಿದೆ. ಹೀಗಾಗಿ ಅವರನ್ನು ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಸರಗೋಡು ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಪಯಣಿಸಿದ್ದ ವಿಮಾನದಲ್ಲಿ ಒಟ್ಟು 130 ಜನ ಪ್ರಯಾಣಿಕರಿದ್ದು, ಅವರಲ್ಲಿ 90 ಜನ ಮಂಗಳೂರು ಮೂಲದವರು ಎಂದು ವರದಿ ತಿಳಿಸಿದೆ. ಇದೀಗ ಕಾಸರಗೋಡು ಮೂಲದ ವ್ಯಕ್ತಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಜೊತೆ ವಿಮಾನದಲ್ಲಿ ಪ್ರಯಾಣಿಸಿದವರಿಗೂ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದ್ದು, ಸಹ ಪ್ರಯಾಣಿಕರು ಆತಂಕಗೊಂಡಿದ್ದಾರೆ.
ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕಾಸರಗೋಡು ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಆರೋಗ್ಯ ಸಚಿವ ಶ್ರೀರಾಮುಲು ಮಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ವಿಮಾನದಲ್ಲಿದ್ದ ಎಲ್ಲರ ಮಾಹಿತಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪಡೆದುಕೊಳ್ಳುತ್ತಿದ್ದೇವೆ. ಜಿಲ್ಲಾಡಳಿತ ಎಲ್ಲರನ್ನೂ ಸಂಪರ್ಕಿಸಿ ಆರೋಗ್ಯ ತಪಾಸಣೆ ನಡೆಸುತ್ತದೆ ಎಂದು ಈ ಸಂದರ್ಭದಲ್ಲಿ ಶ್ರೀ ರಾಮುಲು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 34,596 ಜನರ ಸ್ಕ್ರೀನಿಂಗ್ ಮಾಡಲಾಗಿದ್ದು ವಿದೇಶದಿಂದ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಅಲ್ಲದೆ ಇದೀಗ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಮಂಗಳೂರಿನಿಂದ ಕುವೈತ್, ಕತಾರ್, ಸೌದಿ ಅರೇಬಿಯಾಕ್ಕೆ ತೆರಳುವ ವಿಮಾನಗಳನ್ನು ಭಾರತ ಸರ್ಕಾರದ ಸೂಚನೆಯಂತೆ ರದ್ದುಗೊಳಿಸಲಾಗಿದೆ.
ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಜಿಲ್ಲಾಡಳಿತವು ಸಾರ್ವಜನಿಕರಿಗೆ ವಿಶೇಷ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ.