ನವದೆಹಲಿ : ಲಾಕ್ ಡೌನ್ ಕಠಿಣ ಕ್ರಮಗಳ ಹೊರತಾಗಿಯೂ ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಏತನ್ಮಧ್ಯೆ ಕೇಂದ್ರ ಸರ್ಕಾರ ಮಾರಕ ಕೊರೊನಾ ಸೋಂಕು ಹರುಡುವಿಕೆ ಕುರಿತಂತೆ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದೆ. ಸದ್ಯದ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಮೇ ಮಧ್ಯ ಭಾಗದ ವೇಳೆಗೆ 1.12 ಲಕ್ಷ ಮಂದಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಂಕಿತರ ಸಂಖ್ಯೆ ಪ್ರತಿ 10 ರಿಂದ 12 ದಿನಗಳಿಗೆ ದ್ವಿಗುಣವಾಗುತ್ತಿದೆ. ಪರಿಸ್ಥಿತಿ ಒಂದು ವೇಳೆ ಹೀಗೆ ಮುಂದುವರೆದಿದ್ದೇ ಆದಲ್ಲಿ ಮೇ ಮಧ್ಯಭಾಗದ ವೇಳೆಗೆ 1.12 ಲಕ್ಷ ಮಂದಿಗೆ ಸೋಂಕು ತಗುಲುವ ಸಾಧ್ಯತೆ ಇದೆ.
ಸದ್ಯ ದೇಶದಲ್ಲಿ ಸೋಂಕು ಪೀಡಿತರ ಸಂಖ್ಯೆ 29 ಸಾವಿರ ಗಡಿದಾಟಿದೆ. ಮಾರಕ ಸೋಂಕು ದೆಹಲಿ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅತಿ ವೇಗದಲ್ಲಿ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಸೋಂಕು ನಿಯಂತ್ರಣ ಮಾತ್ರ ಸವಾಲಾಗಿ ಪರಿಣಮಿಸಿದೆ.