ಕೊರೊನಾ ಹೆಚ್ಚಳ : ರಾಜ್ಯದಲ್ಲಿ ಇಂದಿನಿಂದ ಟಫ್ ರೂಲ್ಸ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಜೋರಾಗಿ ಬೀಸುತ್ತಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಸೋಮವಾರ ಸಿಎಂ ಬಿಎಸ್ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ಕುರಿತಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಲಾಕ್‍ಡೌನ್ ಹಾಗೂ ನೈಟ್ ಕಫ್ರ್ಯೂ ಜಾರಿ ಮಾಡುವುದಿಲ್ಲ. ಆದರೆ, ಮಂಗಳವಾರದಿಂದ 15 ದಿನ ಯಾವುದೇ ರೀತಿಯ ಪ್ರತಿಭಟನೆಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದರು.
ಇದಲ್ಲದೆ ಮಂಗಳವಾರದಿಂದ ಮಾಸ್ಕ್ ಹಾಕದಿದ್ದರೆ ದಂಡ ವಿಧಿಸಲಾಗುತ್ತದೆ. ಕಲ್ಯಾಣ ಮಂಟಪಗಳಲ್ಲಿ ಮಾರ್ಗಸೂಚಿ ಉಲ್ಲಂಘನೆಯಾದರೆ ಮಾಲೀಕರ ವಿರುದ್ಧ ಕ್ರಮ ಕೈಗೊಂಡು, 6 ತಿಂಗಳು ಕಲ್ಯಾಣ ಮಂಟಪ ಮುಚ್ಚಲಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಇದೇ ವೇಳೆ ಶಾಲಾ ಕಾಲೇಜು ಬಂದ್ ವಿಚಾರವಾಗಿ ಕೇಳಿದ ಪ್ರಶ್ನೆ ಉತ್ತರಿಸಿದ ಮುಖ್ಯಮಂತ್ರಿಗಳು, ಸದ್ಯ ಶಾಲಾ, ಕಾಲೇಜು ಗಳನ್ನು ಮುಚ್ಚುವುದಿಲ್ಲ. ಮುಂದಿನ 15 ದಿನಗಳಲ್ಲಿ ಪರೀಕ್ಷೆಗಳು ಮುಗಿಯುತ್ತವೆ. ಬಳಿಕ ಈ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಮಕ್ಕಳು ಶಾಲೆಗಳಿಗೆ ಬಂದಾಗ ಶಿಸ್ತಿನಿಂದ ಇರ್ತಾರೆ, ಸ್ಕೂಲ್ ಇಲ್ಲ ಅಂದರೆ ಹೊರಗಡೆ ಆಟ ಆಡ್ತಾರೆ. ಅಪಾರ್ಟ್ ಮೆಂಟ್‍ಗಳಲ್ಲಿರುವ ಮಕ್ಕಳಲ್ಲಿ ಕೊರೊನಾ ಹೆಚ್ಚುತ್ತಿದೆ. ಹೀಗಾಗಿ ಶಾಲೆಗಳನ್ನು ಮುಚ್ಚುವುದಿಲ್ಲ. 1-9ನೇ ತರಗತಿವರೆಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡುವ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.
ಇನ್ನು ಚುನಾವಣಾ ರ್ಯಾಲಿಗಳಿಗೂ ಕಠಿಣ ನಿಯಮಗಳನ್ನ ತರುತ್ತೇವೆ ಎಂದು ಸಿಎಂ ಇಂದು ಈ ಆದೇಶ ಹೊರಡಿಸುವುದಾಗಿ ತಿಳಿಸಿದರು. ಬಳಿಕ ಸಿನಿಮಾಗಳ ಬಗ್ಗೆ ಮಾತನಾಡಿ, ಸದ್ಯದ ಸ್ಥಿತಿಯನ್ನೇ ಮುಂದುವರಿಸುವುದಾಗಿ ಮಾಹಿತಿ ನೀಡಿದರು.